ಹೊಸದಿಲ್ಲಿ: ಭಾರತದ ಅಗ್ರಮಾನ್ಯ ಆಟಗಾರ್ತಿ ಅವರಿಗೆ ಮಗದೊಂದು ಆಘಾತ ಎದುರಾಗಿದೆ. ಪ್ರತಿಷ್ಠಿತ ಫುಜೊ 2019 ಟೂರ್ನಿಯಲ್ಲೂ ಮೊದಲ ಸುತ್ತಿನಲ್ಲೇ ನಿರ್ಗಮನದ ಹಾದಿ ಹಿಡಿದಿದ್ದಾರೆ. ಮಂಗಳವಾರ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ನಡೆದ ಹೋರಾಟದಲ್ಲಿ ತನಗಿಂತಲೂ ಕೆಳ ಕ್ರಮಾಂಕದ ರ‍್ಯಾಂಕಿಂಗ್ ಆಟಗಾರ್ತಿ ಚೈನಿಸ್ ತೈಪೆಯ ಪೈ ಯೂ ಪೊ ವಿರುದ್ಧ 13-21, 21-18, 19-21ರ ಅಂತರದಲ್ಲಿ ಸೋಲನುಭವಿಸಿ ಕೂಟದಿಂದಲೇ ನಿರ್ಗಮಿಸಿದರು. ಏಳು ಲಕ್ಷ ಅಮೆರಿಕನ್ ಡಾಲರ್ ಪ್ರಶಸ್ತಿ ಮೊತ್ತ ಹೊಂದಿರುವ ಟೂರ್ನಿಯಲ್ಲಿ ವಿಶ್ವ 6 ರ‍್ಯಾಂಕ್‌ನ ಸಿಂಧೂ ಅವರಿಂದ ಪ್ರಭಾವಿ ಪ್ರದರ್ಶನ ನಿರೀಕ್ಷಿಸಲಾಗಿತ್ತು. ಆದರೆ ವಿಶ್ವ ನಂ. 42 ರ‍್ಯಾಂಕ್‌ನ ಪೈ ಯೂ ಪೊ ವಿರುದ್ಧ ತೀರಾ ನಿರಾಶಜನಕ ಪ್ರದರ್ಶನ ನೀಡಿ ಹಿನ್ನಡೆ ಅನುಭವಿಸಿದರು. 74 ನಿಮಿಷಗಳ ವರೆಗೂ ಸಾಗಿದ ಜಿದ್ದಾಜಿದ್ದಿನ ಹೋರಾಟದಲ್ಲಿ ಸಿಂಧೂ ಮೇಲೆ ಎದುರಾಳಿ ಸವಾರಿ ಮಾಡಿದರು. ಕಳೆದ ಆಗಸ್ಟ್ ತಿಂಗಳಲ್ಲಿ ವಿಶ್ವ ಚಾಂಪಿಯನ್‌ಶಿಪ್ ಗೆಲ್ಲುವ ಮೂಲಕ ಪಿವಿ ಸಿಂಧೂ ಇತಿಹಾಸ ಬರೆದಿದ್ದರು. ಆದರೆ ತದಾ ಬಳಿಕ ನಡೆದ ಮೂರು ಟೂರ್ನಿಯಲ್ಲಿ ದ್ವಿತೀಯ ಸುತ್ತು ದಾಟಲು ವಿಫಲವಾಗಿದ್ದರು. ಚೀನಾ ಓಪನ್, ಕೊರಿಯಾ ಓಪನ್ ಹಾಗೂ ಡೆನ್ಮಾರ್ಕ್ ಓಪನ್‌ಗಳಲ್ಲಿ ಮುಗ್ಗರಿಸಿದ್ದರು. ಕೊನೆಯದಾಗಿ ಭಾಗವಹಿಸಿದ ಫ್ರೆಂಚ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ಹಂತದಿಂದ ಹೊರಬಿದ್ದಿದ್ದರು. ಈ ಮೂಲಕ ಸತತ ಹಿನ್ನಡೆಯನ್ನು ಅನುಭವಿಸಿದ್ದಾರೆ. ಮುಂದಿನ ವರ್ಷ ಟೋಕಿಯೋ ಒಲಿಂಪಿಕ್ಸ್ ಆಯೋಜನೆಯಾಗಲಿರುವಂತೆಯೇ ಸಿಂಧೂ, ಭಾರತದ ಪದಕ ನಿರೀಕ್ಷೆಯಾಗಿದ್ದಾರೆ. ಆದರೆ ಸತತ ವೈಫಲ್ಯ ಆತಂಕಕ್ಕೆ ಕಾರಣವಾಗಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2NEQqBu