ಬಿಎಸ್‌ವೈ ಆಡಿಯೊ ಬಾಂಬ್‌: ಆಂತರಿಕ ಸಭೆಯಲ್ಲಿ ಮೊಬೈಲ್‌ ನಿಷೇಧಕ್ಕೆ ಮೂರು ಪಕ್ಷಗಳ ಚಿಂತನೆ!

ಬೆಂಗಳೂರು: ಹುಬ್ಬಳ್ಳಿ ಸಭೆ ವಿಡಿಯೊ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ಕಾರ್ಯಾಲಯ ಹಾಗೂ ನಿವಾಸಕ್ಕೆ ಭೇಟಿ ನೀಡುವವರ ಮೊಬೈಲ್‌ ಬಳಕೆ ನಿಷೇಧಕ್ಕೆ ಮೌಖಿಕ ಸೂಚನೆ ನೀಡಲಾಗಿದೆ. ಕೆಪಿಸಿಸಿಯಲ್ಲೂ ಈ ವಿಚಾರದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ. ಜೆಡಿಎಸ್‌ ಕೂಡ ಇದೇ ದಾರಿ ತುಳಿದರೆ ಅಚ್ಚರಿಯಿಲ್ಲ. ಅನರ್ಹ ಶಾಸಕರ ಪರ ವಹಿಸಿ ಸಿಎಂ ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಮಾತನಾಡಿದ್ದರ ವಿಡಿಯೊ ಬಹಿರಂಗಗೊಂಡು ವಿವಾದ ಎದ್ದಿದೆ. ಹಾಗಾಗಿ ಸಿಎಂ ಅವರ ಖಾಸಗಿ ನಿವಾಸ ಧವಳಗಿರಿಯ ಒಳಗೆ ಮೊಬೈಲ್‌ ಕೊಂಡೊಯ್ಯಲು ಬಿಡುತ್ತಿಲ್ಲ. ಸಿಎಂ ನಿವಾಸಕ್ಕೆ ಭೇಟಿ ನೀಡುವವರ ಮೊಬೈಲ್‌ ಅನ್ನು ಬಾಗಿಲ ಬಳಿಯೇ ಇಟ್ಟು ಹೋಗುವಂತೆ ಆಪ್ತ ಸಿಬ್ಬಂದಿ ಸೂಚಿಸುತ್ತಿದ್ದಾರೆಂಬ ಮಾಹಿತಿಯಿದೆ. ಗೃಹ ಕಚೇರಿ ಕೃಷ್ಣಾದಲ್ಲೂ ಈ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ. ಬಿಗಿ ಜಾಮರ್‌: ವಿಧಾನಸೌಧದಲ್ಲಿ ಮೊಬೈಲ್‌ ಬಳಕೆಯನ್ನು ಸಂಪೂರ್ಣ ನಿರ್ಬಂಧಿಸುವುದು ಕಷ್ಟಸಾಧ್ಯ. ಹಾಗಾಗಿ ಸಮ್ಮೇಳನ ಸಭಾಂಗಣ, ಸಮಿತಿ ಕೊಠಡಿ, ಸಿಎಂ ಕಚೇರಿ ಸೇರಿದಂತೆ ಪ್ರಮುಖ ಕಡೆ ಜಾಮರ್‌ ಅಳವಡಿಸಲು ಯೋಚಿಸಲಾಗಿದೆ. ವಿಧಾನಸೌಧದಲ್ಲಿ ಈಗಾಗಲೇ ಜಾಮರ್‌ ಇದ್ದು ಅದನ್ನು ಮತ್ತಷ್ಟು ಪರಿಣಾಮಕಾರಿ ಮಾಡಲಾಗುತ್ತದೆ. ಕಾಂಗ್ರೆಸ್‌ ವಲಯದಲ್ಲೂ ಈ ಬಗ್ಗೆ ಚರ್ಚೆಯಾಗಿದ್ದು ಪ್ರಮುಖ ಸಭೆ ನಡೆಯುವಾಗ ಮೊಬೈಲ್‌ ಚಿತ್ರೀಕರಣಕ್ಕೆ ನಿರ್ಬಂಧ ಹೇರಬೇಕೆಂಬ ಒತ್ತಾಯ ಕೇಳಿ ಬಂದಿದೆ. ಮುನ್ನಚ್ಚರಿಕೆ ದೃಷ್ಟಿಯಿಂದ ಜೆಡಿಎಸ್‌ನಲ್ಲೂ ಇಂಥ ನಿಯಂತ್ರಣ ಅಗತ್ಯವೆಂಬ ಆಗ್ರಹವಿದೆ. ಹಾಗಾಗಿ ಆಡಳಿತದ ಶಕ್ತಿ ಕೇಂದ್ರ ಹಾಗೂ ಪ್ರಮುಖ ರಾಜಕೀಯ ಪಕ್ಷಗಳ ಆಂತರಿಕ ಸಭೆಗಳಲ್ಲಿ ಮೊಬೈಲ್‌ ನಿಷೇಧ ಕ್ರಮ ಜಾರಿ ಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.


from India & World News in Kannada | VK Polls https://ift.tt/2JWJAWR

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...