ಮುಂಬೈ: ಮಯಾಂಕ್ ಅಗರ್ವಾಲ್(150) ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಹೋರತಾಗಿಯೂ ಏಜಾಝ್ ಪಟೇಲ್ ಅವರ ವೃತ್ತಿ ಜೀವನದ ಶ್ರೇಷ್ಠ ಸ್ಪಿನ್ ದಾಳಿಗೆ ನಲುಗಿದ ಭಾರತ ತಂಡ ಎರಡನೇ ಟೆಸ್ಟ್ ಪ್ರಥಮ ಇನಿಂಗ್ಸ್‌ನಲ್ಲಿ 325 ರನ್‌ಗಳಿಗೆ ಆಲೌಟ್ ಆಗಿದೆ. ಶನಿವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ 4 ವಿಕೆಟ್ ನಷ್ಟಕ್ಕೆ 221 ರನ್‌ಗಳಿಂದ ಎರಡನೇ ದಿನದಾಟವನ್ನುಆರಂಭಿಸಿದ 109.5 ಓವರ್‌ಗಳಿಗೆ 325 ರನ್‌ಗಳಿಗೆ ಆಲೌಟ್ ಆಗಿದೆ. ಭಾರತ ತಂಡದ ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಏಜಾಝ್ ಪಟೇಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಮಾಡಿದರು. ಜಿಮ್ಮಿ ಲೇಕರ್ ಹಾಗೂ ಅನಿಲ್ ಕುಂಬ್ಳೆ ಬಳಿಕ ಟೆಸ್ಟ್ ಕ್ರಿಕೆಟ್‌ನ ಏಕೈಕ ಇನಿಂಗ್ಸ್‌ನಲ್ಲಿ 10 ವಿಕೆಟ್ ಸಾಧನೆ ಮಾಡಿದ ವಿಶ್ವದ ಮೂರನೇ ಬೌಲರ್ ಎಂಬ ದಾಖಲೆಗೆ ಶನಿವಾರ ಅಜಾಝ್ ಪಟೇಲ್ ಭಾಜನರಾದರು. ಅಷ್ಟೇ ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರಿದ ಕಿವೀಸ್‌ನ ಮೊದಲ ಬೌಲರ್ ಎಂಬ ಖ್ಯಾತಿಗೂ ಪಟೇಲ್ ಪಾತ್ರರಾಗಿದ್ದಾರೆ. ಅಂದಹಾಗೆ, ಪಂದ್ಯದ ಮೊದಲನೇ ದಿನ ಭಾರತ ತಂಡಕ್ಕೆ ಆಘಾತ ನೀಡಿದ್ದ ಅಜಾಝ್ ಪಟೇಲ್ ಮತ್ತೊಮ್ಮೆ ಎರಡನೇ ದಿನದ ಆರಂಭದಲ್ಲಿಯೂ ಆಘಾತ ನೀಡಿದರು. 27 ರನ್ ಗಳಿಸಿ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತಿದ್ದ ವೃದ್ದಿಮಾನ್ ಸಹಾ ಅವರನ್ನು ಏಜಾಝ್ ಪಟೇಲ್ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. ನಂತರ ಕ್ರೀಸ್‌ಗೆ ಬಂದ ಆರ್ ಅಶ್ವಿನ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ 72ನೇ ಓವರ್‌ನಲ್ಲಿಯೇ ಕಿವೀಸ್ ಕಮ್‌ಬ್ಯಾಕ್‌ಗೆ ನೆರವಾದರು. ಮೊದಲನೇ ದಿನದಂತೆ ಎರಡನೇ ದಿನವೂ ಅತ್ಯುತ್ತಮ ಬ್ಯಾಟಿಂಗ್ ಮುಂದುವರಿಸಿದ ಆರಂಭಿಕ ಬ್ಯಾಟ್ಸ್‌ಮನ್ ಕಿವೀಸ್ ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಆಡಿದ 311 ಎಸೆತಗಳಲ್ಲಿ ಮಯಾಂಕ್ 4 ಸಿಕ್ಸರ್ ಹಾಗೂ 17 ಬೌಂಡರಿಗಳೊಂದಿಗೆ 150 ರನ್ ಗಳಿಸಿ ಏಜಾಝ್‌ಗೆ ವಿಕೆಟ್ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿ ಮಯಾಂಕ್ ಅಗರ್ವಾಲ್‌ಗೆ ಸಾಥ್ ನೀಡಿದ ಅಕ್ಷರ್ ಪಟೇಲ್ 128 ಎಸೆತಗಳಲ್ಲಿ 52 ರನ್ ಗಳಿಸಿ ಪಟೇಲ್ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಸಂಕ್ಷಿಪ್ತ ಸ್ಕೋರ್(ಇನಿಂಗ್ಸ್ ಬ್ರೇಕ್) ಭಾರತ: ಪ್ರಥಮ ಇನಿಂಗ್ಸ್ 109.5 ಓವರ್‌ಗಳಲ್ಲಿ 325/10 ಮಯಾಂಕ್ ಅಗರ್ವಾಲ್ ಅಜೇಯ 150, ಶುಭಮನ್ ಗಿಲ್ 44, ವೃದ್ಧಿಮಾನ್ ಸಹಾ ಅಜೇಯ 27, ಅಕ್ಷರ್ ಪಟೇಲ್ 52; ಏಜಾಝ್ ಪಟೇಲ್ 119ಕ್ಕೆ 10). ತಂಡಕ್ಕೆ ಮರಳಿದ ಕೊಹ್ಲಿ: ಮೊದಲನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದ ನಿಯಮಿತ ನಾಯಕ ವಿರಾಟ್ ಕೊಹ್ಲಿ ಇದೀಗ ಮುಂಬೈ ಟೆಸ್ಟ್ ಆಡಲು ತಂಡಕ್ಕೆ ಮರಳಿದ್ದಾರೆ. ಈ ಹಿನ್ನೆಲೆಯಲ್ಲಿ ಅಜಿಂಕ್ಯ ರಹಾನೆ ಅವರ ಬದಲು ಕೊಹ್ಲಿ ಎಂದಿನಂತೆ ತಂಡವನ್ನು ಮುನ್ನಡೆಸಲಿದ್ದಾರೆ. ತಂಡದ ನಾಯಕ ಕೇನ್ ವಿಲಿಯಮ್ಸನ್ ಗಾಯಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಟಾಮ್ ಲೇಥನ್ ತಂಡವನ್ನು ಮುನ್ನಡೆಸಲಿದ್ದಾರೆ. ರಹಾನೆ, ಜಡೇಜಾ, ಇಶಾಂತ್ ಔಟ್: ವಿಭಿನ್ನ ಗಾಯಕ್ಕೆ ತುತ್ತಾಗಿರುವ ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ ಹಾಗೂ ಇಶಾಂತ್ ಶರ್ಮಾ ಅವರು ಎರಡನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಹ್ಲಿ ಎಂದಿನಂತೆ ತಮ್ಮ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದು, ಶ್ರೇಯಸ್ ಅಯ್ಯರ್ 5ನೇ ಕ್ರಮಾಂಕದಲ್ಲಿ ಮುಂದುವರಿಯಲಿದ್ದಾರೆ. ಇನ್ನು ರವೀಂದ್ರ ಜಡೇಜಾ ಸ್ಥಾನದಲ್ಲಿ ಜಯಂತ್ ಯಾದವ್ ಪ್ಲೇಯಿಂಗ್ ಇಲೆವೆನ್‌ಗೆ ಬಂದಿದ್ದಾರೆ. ಉಭಯ ತಂಡಗಳ ಪ್ಲೇಯಿಂಗ್ XI ಭಾರತ: ಮಯಾಂಕ್ ಅಗರ್ವಾಲ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ವೃದ್ದಿಮಾನ್ ಸಹಾ(ವಿ.ಕೀ), ಆರ್ ಅಶ್ವಿನ್, ಅಕ್ಷರ್ ಪಟೇಲ್, ಜಯಂತ್ ಯಾದವ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್. ನ್ಯೂಜಿಲೆಂಡ್: ಟಾಮ್ ಲೇಥಮ್(ನಾಯಕ), ವಿಲ್ ಯಂಗ್, ಡ್ಯಾರಿಲ್ ಮಿಚೆಲ್, ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡಲ್(ವಿ.ಕೀ), ರಚಿನ್ ರವೀಂದ್ರ, ಕೈಲ್ ಜೇಮಿಸನ್, ಟಿಮ್ ಸೌಥೀ, ಏಜಾಝ್ ಪಟೇಲ್, ವಿಲ್ ಸೋಮರ್ ವಿಲ್.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3ruDoMy