ಬೆಂಗಳೂರು: ಸದ್ಯ ದೇಶದ ರಾಜಧಾನಿಯಲ್ಲಿ ಕೇಂದ್ರ ಸರಕಾರದ ಕೃಷಿ ಮಸೂದೆ ವಿರೋಧಿಸಿ ರೈತರು ಬೀದಿಗಿಳಿದಿದ್ದಾರೆ. ಅನ್ನದಾತರ ಪ್ರತಿಭಟನೆ ಈಗಾಗಲೇ ಐದು ದಿನಗಳು ಕಳೆದಿವೆ. ಅತ್ತ ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಲಾಠಿ ಚಾರ್ಜ್, ಜಲಫಿರಂಗಿ ಪ್ರಯೋಗಿಸುತ್ತಿದ್ದಾರೆ. ಈ ಮಧ್ಯೆ ಅಮೆರಿಕದ ಚುನಾಯಿತ ಉಪಾಧ್ಯಕ್ಷೆ ಟ್ವೀಟ್‌ವೊಂದು ಭಾರೀ ಸುದ್ದಿ ಮಾಡುತ್ತಿದೆ. ಕಮಲಾ ಹ್ಯಾರಿಸ್ ಪ್ರತಿಭಟನಾನಿರತ ರೈತರ ಪರವಾಗಿ ಬ್ಯಾಟ್ ಬೀಸಿ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ಟ್ವೀಟ್‌ನಲ್ಲಿ ಏನಿದೆ?ಅಮೆರಿಕದ ಚುನಾಯಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಟ್ವೀಟ್ ಮಾಡಿ ರೈತರ ಪರ ಬ್ಯಾಟ್ ಬೀಸಿದ್ದಾರೆ. "ರೈತರು ತಮ್ಮ ಜೀವನೋಪಾಯಕ್ಕೆ ತಮಗೆ ತೊಡಕಾಗುವ ಹೊಸ ಕಾನೂನುಗಳ ವಿರುದ್ಧ ಪ್ರತಿಭಟಿಸುವುದನ್ನು ಭಾರತೀಯ ಸರ್ಕಾರ ನಿಗ್ರಹಿಸುತ್ತಿರುವುದನ್ನು ನೋಡಿ ನಾವು ಆಘಾತಕ್ಕೊಳಗಾಗಿದ್ದೇವೆ. ಜಲ ಫಿರಂಗಿಗಳು ಮತ್ತು ಅಶ್ರುವಾಯು ಬಳಸುವ ಬದಲು, ಭಾರತ ಸರ್ಕಾರವು ರೈತರೊಂದಿಗೆ ಮುಕ್ತ ಮಾತುಕತೆಯಲ್ಲಿ ತೊಡಗಬೇಕಾಗಿದೆ ”ಎಂದು ಹ್ಯಾರಿಸ್ ಹೇಳಿರುವ ಟ್ವೀಟ್ ವೈರಲ್ ಆಗಿದೆ. ಸದ್ಯ ಈ ಟ್ವೀಟ್, ಟ್ವಿಟ್ಟರ್-ಫೇಸ್‌ಬುಕ್‌ನಲ್ಲಿ ಭಾರೀ ವೈರಲ್ ಆಗುತ್ತಿದೆ. ಸತ್ಯಾಂಶವೇನು? ಅಮೆರಿಕದ ಚುನಾಯಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಈ ರೀತಿಯ ಯಾವುದೇ ಟ್ವೀಟ್ ಮಾಡಿಲ್ಲ. ಅಲ್ಲದೇ ರೈತರ ಪರವಾಗಿಯೋ? ಕೇಂದ್ರ ಸರಕಾರದ ವಿರುದ್ಧವಾಗಿಯೋ ಟ್ವೀಟ್ ಮಾಡಿಲ್ಲ. ಅವರ ಅಕೌಂಟ್‌ನಿಂದ ಇಂತಹ ಟ್ವೀಟ್ ಬರೆಯಲಾಗಿಲ್ಲ ಎಂಬುವುದು ಟೈಮ್ಸ್ ಆಫ್ ಇಂಡಿಯಾ ಫ್ಯಾಕ್ಟ್ ಚೆಕ್ ಟೀಂ ಕಂಡು ಹಿಡಿದಿದೆ. ಕಂಡು ಹುಡುಕಿದ್ದು ಹೇಗೆ? ಭಾರತ ಮೂಲದ ಕಮಲಾ ಹ್ಯಾರಿಸ್ ಹೆಸರಿನಲ್ಲಿ ಎರಡು ಟ್ವಿಟ್ಟರ್ ಖಾತೆಗಳಿವೆ. ಅವುಗಳನ್ನು ಟೈಮ್ಸ್ ಆಫ್ ಇಂಡಿಯಾ ಫ್ಯಾಕ್ಟ್ ಚೆಕ್ ಕ್ರಮವಾಗಿ ಪರಿಶೀಲನೆ ನಡೆಸಿದೆ. ಅವರ ಟ್ವೀಟ್‌ಗಳು, ಡಿಲೀಟ್ ಮಾಡಿರುವ ಟ್ವೀಟ್‌ಗಳ ಬಗ್ಗೆ ಕೂಡ ಪರಿಶೀಲಿಸಿದೆ. ಆದರೆ ಯಾವುದೇ ಟ್ವೀಟ್‌ಗಳನ್ನು ಅವರು ಭಾರತ ಸರಕಾರದ ವಿರುದ್ಧವಾಗಿ ಮಾಡಿಲ್ಲ. ಆದರೆ ನವೆಂಬರ್ 27, 2020 ಹಾಗೂ ಡಿಸೆಂಬರ್ 1,2020ರ ಮಧ್ಯೆ ಅಮೆರಿಕದ ಕೃಷಿಕರ ಬಗ್ಗೆ ಟ್ವೀಟ್ ಮಾಡಿ ಅವರನ್ನು ಪ್ರಶಂಸಿಸಿದ್ದರು. ನಿಜವಾದ ಟ್ವೀಟ್ ಬೇರೆ?ಇನ್ನು ಕಮಲಾ ಹ್ಯಾರಿಸ್ ಅವರ ಬಗ್ಗೆ ಫ್ಯಾಕ್ಟ್‌ಚೆಕ್ ತಂಡ ಇನ್ನಷ್ಟು ಪರಿಶೀಲನೆ ನಡೆಸಿದಾಗ ಕೆನಡಾದ ಸಂಸದ ಜ್ಯಾಕ್ ಹ್ಯಾರಿಸ್ ಭಾರತದ ಸರಕಾರದ ವಿರುದ್ಧ ಹಾಗೂ ರೈತರ ಪರವಾಗಿ ಟ್ವೀಟ್ ಮಾಡಿರುವುದು ತಿಳಿದುಬಂದಿದೆ. ಇಲ್ಲಿ ಜ್ಯಾಕ್ ಹ್ಯಾರಿಸ್ ಟ್ವೀಟನ್ನು ಕಮಲಾ ಹ್ಯಾರಿಸ್ ಟ್ವೀಟ್ ಆಗಿ ಪರಿವರ್ತಿಸಿ ಟ್ವೀಟ್ ಮಾಡಲಾಗಿದೆ. ಹೀಗಾಗಿ ಇದೊಂದು ಫೋಟೊಶಾಪ್ ಆಧಾರಿತ ಫೇಕ್ ಟ್ವೀಟ್ ಎನ್ನುವುದು ತಿಳಿದುಬಂದಿದೆ. ಅಮೆರಿಕದ ಚುನಾಯಿತ ಉಪಾಧ್ಯಕ್ಷೆ ಭಾರತದ ಸರಕಾರದ ವಿರುದ್ಧ ಯಾವುದೇ ವಿವಾದಾತ್ಮಕ ಟ್ವೀಟ್ ಮಾಡಿಲ್ಲ.
from India & World News in Kannada | VK Polls https://ift.tt/3g2JcVD