ಬೆಂಗಳೂರು ಗ್ರಾಮಾಂತರ ಜಿಲ್ಲೆ: ನಗರದಲ್ಲಿ ಗುರುವಾರ ಇಡೀ ದಿನ ಮುಸುಕಿದ ವಾತಾವರಣದಿಂದಾಗಿ ಜನರಿಗೆ ಚಳಿಯ ಅನುಭವ ಮತ್ತೆ ಕಾಡಲಾರಂಭಿಸಿತು. ಬಂಗಾಳ ಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತದಿಂದಾಗಿ ನಗರದ ವಾತಾವರಣವು ಬದಲಾಗಿದೆ. ಬೆಳಗ್ಗೆಯಿಂದಲೇ ಬಿಟ್ಟುಬಿಡದೆ ಸುರಿದ ಜಿಟಿಜಿಟಿ ಜನರನ್ನು ಮನೆಯಿಂದ ಹೊರಬರಲು ಬಿಡಲಿಲ್ಲ. ಕನಕ ಜಯಂತಿಗೆ ಸರಕಾರಿ ರಜೆ ಇದ್ದ ಕಾರಣ ಬಹುತೇಕ ಸಾರ್ವಜನಿಕರು ಮನೆಯಲ್ಲೇ ಬಂದಿಯಾಗಿ ರಜೆಯ ಸವಿಯನ್ನು ಅನುಭವಿಸಿದರು. ಇಡೀ ದಿನ ನಗರದಲ್ಲಿ ಕೇವಲ 1 ಮಿ.ಮೀ.ನಷ್ಟು ಮಳೆ ದಾಖಲಾಗಿದೆ. ಆದರೆ, ತೇವಾಂಶ ಹಾಗೂ ಮೋಡ ಮುಸುಕಿದ್ದ ಕಾರಣ ಮಧ್ಯಾಹ್ನವೇ ಚಳಿಯಿಂದಾಗಿ ಜನರು ಸ್ವೆಟರ್ ತೊಟ್ಟು ಸಂಚರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸಂಜೆ ಬಳಿಕ ತುಸು ಹೆಚ್ಚಾಗಿಯೇ ಮಳೆ ಬರುವುದೆಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿತ್ತಾದರೂ, ಅದು ಹುಸಿಯಾಯಿತು. ಬದಲಾಗಿ ಚಳಿಯ ವಾತಾವರಣ ಒಂದೇ ಸಮನಾಗಿ ಕಂಡಿತು. ಡಿಸೆಂಬರ್ ತಿಂಗಳಿನಲ್ಲಿ ನಗರದ ಕನಿಷ್ಠ ಉಷ್ಣಾಂಶ 16 ಡಿಗ್ರಿಗಿಂತ ಕೆಳಗಿಳಿಯುತ್ತದೆ. ಮಳೆಯಿಂದಾಗಿ ಇದೇ ಪ್ರಮಾಣದ ಉಷ್ಣಾಂಶ ದಾಖಲಾಗಿದ್ದು, ಇನ್ನೂ 2-3 ದಿನ ಮುಂದುವರಿಯಲಿದೆ. ಇಂದೂ ಹಗುರ ಮಳೆ ಶುಕ್ರವಾರ ಬೆಳಗ್ಗೆ ನಗರದ ಹಲವೆಡೆ ಮಂಜು ಮುಸುಕಿದ ವಾತಾವರಣ ಕಾಣಲಿದೆ. ಇದರ ಬೆನ್ನಲ್ಲೇ ಹಗುರದಿಂದ ಕೂಡಿದ ಮಳೆಯಾಗಲಿದೆ. ಸಂಜೆ ಬಳಿಕವೂ ಮೋಡ ಮುಸುಕಿರುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
from India & World News in Kannada | VK Polls https://ift.tt/3g9WT57