ಬೆಂಗಳೂರು: ಬಿಜೆಪಿ ಜೊತೆಗೆ ವಿಲೀನ ಚರ್ಚೆಯಿಂದ ಪಕ್ಷದ ವರ್ಚಸ್ಸಿಗೆ ಭಾರೀ ಧಕ್ಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಗೊಂದಲಕ್ಕೆ ಬ್ರೇಕ್ ಹಾಕಲು ಜೆಡಿಎಸ್ ವರಿಷ್ಠರು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆ ಗಟ್ಟಿಗೊಳಿಸಿ ಪಕ್ಷದ ಶಕ್ತಿ ಪ್ರದರ್ಶನ ಮಾಡಲು ವೇದಿಕೆ ಸಿದ್ಧಗೊಳ್ಳುತ್ತಿದೆ. ಭುಸುಧಾರಣಾ ಕಾಯ್ದೆ ತಿದ್ದುಪಡಿ ಹಾಗೂ ಸಭಾಪತಿ ಬದಲಾವಣೆ ವಿಚಾರವಾಗಿ ಬಿಜೆಪಿಗೆ ಬೆಂಬಲ ನೀಡಿದ ಜೆಡಿಎಸ್ ನಡೆ ವ್ಯಾಪಕವಾಗಿ ಚರ್ಚೆಗ ಗ್ರಾಸವಾಗಿತ್ತು. ಈ ನಡುವೆ ಶೀಘ್ರದಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್ ವಿಲೀನ ಆಗಲಿದೆ ಎಂಬ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಇದಕ್ಕೆ ಪೂರಕವಾಗಿ ಬಿಜೆಪಿ ಮುಖಂಡರ ಹೇಳಿಕೆ ಅನುಮಾನವನ್ನು ಮತ್ತಷ್ಟು ದಟ್ಟಗೊಳಿಸಿತ್ತು. ಆದರೆ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ವಿಲೀನ ವಿಚಾರ ಬಾಲಿಷ ಎಂದಿದ್ದಾರೆ. ಬದಲಾಗಿ ಪಕ್ಷ ಸಂಘಟನೆ ಒತ್ತು ನೀಡುವ ಮಾತನ್ನಾಡಿದ್ದಾರೆ. ಇದರ ಮುಂದುವರಿದ ಭಾಗದಲ್ಲಿ ಜನವರಿ 7 ರಂದು ಮುಖಂಡರ ಸಭೆ ನಡೆಯಲಿದೆ. ಪಕ್ಷದ ಮುಖಂಡರು ಸಭೆ ಸೇರುವ ಮೂಲಕ ಪಕ್ಷದ ಮುಂದಿನ ದಿಕ್ಕು ಹಾಗೂ ದಾರಿಯ ಕುರಿತಾಗಿ ಮಾಜಿ ಸಿಎಂ ಮಾತನ್ನಾಡಲಿದ್ದಾರೆ. ಈ ನಿಟ್ಟಿನಲ್ಲಿ ಈ ಸಭೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಎಲ್ಲರೂ ಈ ಸಭೆಗೆ ಹಾಜರಾಗಬೇಕು ಎಂದು ಈಗಾಗಲೇ ತಿಳಿಸಲಾಗಿದೆ. ಈ ಮೂಲಕ ನಿಷ್ಠಾವಂತರನ್ನು ಒಟ್ಟುಗೂಡಿಸುವ ಮೂಲಕ ಪಕ್ಷ ಸಂಘಟನೆಗೆ ಒತ್ತು ಕೊಡುವುದು ದಳಪತಿಗಳ ಯೋಚನೆಯಾಗಿದೆ. ಇನ್ನು ಮುಂದಿನ ವಿಧಾನಸಭಾ ಚುನಾವಣೆಗೆ ಎರಡುವರೆ ವರ್ಷ ಬಾಕಿ ಉಳಿದಿದೆ. ಆದರೆ ಉಪಚುನಾವಣೆಗಳಲ್ಲಿ ಜೆಡಿಎಸ್ ತನ್ನ ಶಕ್ತಿ ಕೇಂದ್ರಗಳನ್ನು ಕಳೆದುಕೊಳ್ಳುತ್ತಿದೆ. ಪಕ್ಷದ ಕೆಲವು ಶಾಸಕರು ಗೊಂದಲದಲ್ಲಿ ಇದ್ದಾರೆ. ಪಕ್ಷ ತ್ಯಜಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಜನವರಿ 7 ರಂದು ನಡೆಯಲಿರುವ ಸಭೆ ಭಾರೀ ಮಹತ್ವ ಪಡೆದುಕೊಂಡಿದೆ.
from India & World News in Kannada | VK Polls https://ift.tt/2L2rAhu