: ಮಂಗಳೂರಿನ ಗೋಡೆಗಳಲ್ಲಿ ಕಂಡು ಬಂದ ಉಗ್ರ ಬರಹವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಡಿಸಿಪಿಗಳ ನೇತೃತ್ವದಲ್ಲೇ ರಾತ್ರಿ ಗಸ್ತು ಹೆಚ್ಚಿಸಲು ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಹೇಳಿದರು. ನಗರದಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು, ಇರಾಕ್, ಇರಾನ್, ಈಜಿಪ್ಟ್ ಸಹಿತ ಭಾರತದ ಕಾಶ್ಮೀರದಲ್ಲಿ ಭಯೋತ್ಪಾದನೆ ಪ್ರಚೋದಿಸುವ ಸಂಸ್ಥೆಗಳು ಈ ರೀತಿ ಉಗ್ರ ಪರವಾದ ಬರಹವನ್ನು ಹಾಕುತ್ತವೆ. ಅದೇ ಮಾದರಿ ಪ್ರಯತ್ನ ಮಂಗಳೂರಿನಲ್ಲಿ ನಡೆದಿದ್ದು, ಈ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದು, ಶೀಘ್ರ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ. ಇದರ ಹಿಂದಿರುವ ಕೃತ್ಯ ಬಯಲಿಗೆಳೆಯಲಾಗುವುದು ಎಂದರು. ರಾಜ್ಯದ ಕಮಿಷನರೇಟ್ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲೂ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಮಂಗಳೂರಿನಲ್ಲೂ 150 ಕ್ಯಾಮೆರಾ ಹಾಕುವ ಉದ್ದೇಶ ಹೊಂದಲಾಗಿದ್ದು, ಇದಕ್ಕೆ ಸಹಕಾರಿ ಸಂಸ್ಥೆಗಳ ಸಹಕಾರವೂ ಅಗತ್ಯ ಎಂದರು. ಅನುಭವಿಗಳೇ ನೇಮಕಕರಾವಳಿ ಕಾವಲು ಪಡೆ, ಸೆನ್ ಪೊಲೀಸ್ ಠಾಣೆಗಳಿಗೆ ತಂತ್ರಜ್ಞರು, ಅನುಭವಿಗಳನ್ನೇ ನೇಮಿಸಿ ಮತ್ತಷ್ಟು ಬಲವರ್ಧನೆ ಉದ್ದೇಶ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ ಸಿಬ್ಬಂದಿ ಆಯ್ಕೆ ಸಂದರ್ಭ ತಂತ್ರಜ್ಞರನ್ನೇ ನೇಮಿಸಲು ನಿರ್ಧರಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಖಾಸಗಿ ತಂತ್ರಜ್ಞರ ಸಹಕಾರ ಪಡೆಯಲಾಗುವುದು. ಮಂಗಳೂರು ಗೋಲಿಬಾರ್ ಪ್ರಕರಣದ ವರದಿ ಪ್ರಕ್ರಿಯೆ ನಡೆಯುತ್ತಿದೆ ಎಂದರು. ಕಠಿಣ ಕಾನೂನು ವರದಕ್ಷಿಣೆ ಪೀಡನೆ ಪ್ರಕರಣಗಳು ಹಿಂದೆಯೂ ಇತ್ತು. ಆದರೆ ಅಪರಾಧ ಪ್ರಕರಣ ಹೆಚ್ಚಾಗುತ್ತಿದ್ದಂತೆ ಕಠಿಣ ಕಾನೂನು ರಚಿಸಲಾಯಿತು. ಅದೇ ರೀತಿ ಲವ್ ಜಿಹಾದ್ ಪ್ರಕರಣದಲ್ಲೂ ಕಾನೂನು ರಚನೆ ಮಾಡುವ ನಿಟ್ಟಿನಲ್ಲಿ ಸರಕಾರ ಸ್ಪಷ್ಟವಾಗಿದೆ. ಸಂವಿಧಾನದ ಚೌಕಟ್ಟಿನಲ್ಲೇ ಕಾನೂನು ರಚನೆಯಾಗಲಿದೆ. ಲವ್ ಜಿಹಾದ್ ಸಂಬಂಧಿಸಿ ಉತ್ತರ ಪ್ರದೇಶದಲ್ಲಿ ಕಾನೂನು, ಹರಿಯಾಣದಲ್ಲಿ ವಿಶೇಷ ಸಮಿತಿ, ಮಧ್ಯಪ್ರವೇಶದಲ್ಲೂ ಕಠಿಣ ಕಾನೂನು ಚಿಂತನೆಯಿದೆ. ಆ ರಾಜ್ಯಗಳ ಜತೆ ಮಾಹಿತಿ ಪಡೆದು ರಾಜ್ಯದಲ್ಲಿ ಅತೀ ಶೀಘ್ರ ಲವ್ ಜಿಹಾದ್ ಸಮಗ್ರ ಕಾನೂನು ತರುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಗೋಹತ್ಯೆ ನಿಷೇಧ ಗಾಂಧಿ ಚಿಂತನೆ ಗೋಹತ್ಯೆ ನಿಷೇಧ ಮಾಡಬೇಕೆಂಬುದು ಮಹಾತ್ಮ ಗಾಂಧಿ ಚಿಂತನೆಯಾಗಿದ್ದು, 1960ರ ದಶಕದಿಂದ ಇದಕ್ಕೆ ಸಂಬಂಧಿಸಿ ಕಾನೂನುಗಳಿವೆ. ಆದರೆ ಕಾನೂನು ಕ್ರಮಕ್ಕೆ ಯಾವುದೇ ರೀತಿ ಹಲ್ಲುಗಳಿಲ್ಲದೆ, ದುರುಪಯೋಗ ಮುಂದುವರಿದಿತ್ತು. ಅದರಿಂದ ಸಣ್ಣ ಕರುವಿನಿಂದ ಹಿಡಿದು ಎಲ್ಲವೂ ಹತ್ಯೆಯಾಗುತ್ತಿವೆ. ಕಾನೂನು ರಚನೆ ಸಂಬಂಧ ವೆಟರ್ನರಿ ವಿಭಾಗ ಅಧಿಕಾರಿಗಳ ಜತೆ ಸಮಾಲೋಚಿಸಲಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
from India & World News in Kannada | VK Polls https://ift.tt/2VCKxJn