ಕೋಲ್ಕತ್ತಾ: ಅರುಣಾಚಲ ಪ್ರದೇಶದ ಆರು ಜೆಡಿಯು ಶಾಸಕರು ಸೇರಿರುವುದು ರಾಷ್ಟ್ರ ರಾಜಕಾರಣದ ಗಮನ ಸೆಳೆದಿದೆ. ಮಿತ್ರ ಪಕ್ಷದಿಂದಲೇ ಬಿಹಾರ ಮುಖ್ಯಮಂತ್ರಿ ಮುಜುಗರ ಅನುಭವಿಸುತ್ತಿರುವುದು ವಿಪಕ್ಷಗಳಿಗೆ ಆಹಾರವೂ ಒದಗಿಸಿದೆ. ಇದಕ್ಕೆ ಪುಷ್ಠಿ ಎಂಬಂತೆ ಅರುಣಾಚಲ ಪ್ರದೇಶದ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿರುವ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ, ನಿತೀಶ್ ಕುಮಾರ್ ಬಿಹಾರದಲ್ಲಿ ವಿಪಕ್ಷಗಳೊಂದಿಗೆ ಸಂಪರ್ಕದಲ್ಲಿ ಇರುವುದು ಒಳಿತು ಎಂದು ಸಲಹೆ ನೀಡಿದ್ದಾರೆ. ಬಿಜೆಪಿಯ ಬೇಟೆಯಾಡುವ ಕೌಶಲ್ಯದ ಬಗ್ಗೆ ನಿತೀಶ್ ಕುಮಾರ್‌ಗೆ ಅರಿವಿದೆ. ಇದೇ ಕಾರಣಕ್ಕೆ ಅವರು ಅರುಣಾಚಲ ಪ್ರದೇಶದ ತಮ್ಮ ಆರು ಶಾಸಕರನ್ನು ಕಳೆದುಕೊಂಡಿದ್ದಾರೆ ಎಂದು ಅಧೀರ್ ಚೌಧರಿ ವ್ಯಂಗ್ಯವಾಡಿದ್ದಾರೆ. ಬಿಹಾರದಲ್ಲೂ ಇಂತದ್ದೇ ಪರಿಸ್ಥಿತಿ ಮರುಕಳಿಸಬಾರದು ಎಂದಾದರೆ ನಿತೀಶ್ ಕುಮಾರ್ ಈಗಿನಿಂದಲೇ ವಿಪಕ್ಷಗಳೊಂದಿಗೆ ಸಂಪರ್ಕದಲ್ಲಿ ಇರುವುದು ಒಳಿತು ಎಂದು ಅಧೀರ್ ಚೌಧರಿ ಸಲಹೆ ನೀಡಿದ್ದಾರೆ. ಜೆಡಿಯು ಪಕ್ಷವನ್ನು ಬಿಜೆಪಿ ಸಂಪೂರ್ಣವಾಗಿ ಆಪೋಷಣ ತೆಗೆದುಕೊಳ್ಳುವ ಕುತಂತ್ರ ನಡೆಸಿದೆ. ನಿತೀಶ್ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ವಿನಾಶ ಖಚಿತ ಎಂದೂ ಅಧೀರ್ ರಂಜನ್ ಚೌಧರಿ ಎಚ್ಚರಿಸಿದ್ದಾರೆ. ವಿಪಕ್ಷ ಆರ್‌ಜೆಡಿ ಕೂಡ ಇಂತದ್ದೇ ಮಾತುಗಳಾನ್ನಾಡಿದ್ದು, ಬಿಹಾರದಲ್ಲಿ ಶೀಘ್ರದಲ್ಲೇ ರಾಜಕೀಯ ಬದಲಾವಣೆಗಳಾದರೆ ಅಚ್ಚರಿಯಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಬಿಜೆಪಿಯಿಂದ ಮುಜುಗರಕ್ಕೀಡಾಗಿರುವ ನಿತೀಶ್ ಕುಮಾರ್ ಮೈತ್ರಿ ಬದಲಿಸಿ ನಮ್ಮ ನೆರವು ಕೇಳುವ ಸಾಧ್ಯತೆಯೂ ಇದೆ ಎಂದು ಆರ್‌ಜೆಡಿ ಹೇಳಿರುವುದು ತೀವ್ರ ಕುತೂಹಲ ಕೆರಳಿಸಿದೆ.
from India & World News in Kannada | VK Polls https://ift.tt/2Ktg6nh