ಕೊರಟಗೆರೆ: ಸಂಚಾರಿ ವಾಹನದಲ್ಲಿ ಆಯುರ್ವೇದ ಔಷಧಿಗಳನ್ನು ಪರವಾನಿಗೆಯೇ ಇಲ್ಲದೆ ಮಾರಾಟ ಮಾಡುತ್ತಿರುವ ಜಾಲ ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಕಳೆದ ಕೆಲ ಸಮಯಗಳಿಂದ ಜಿಲ್ಲೆಯ ವಿವಿಧೆಡೆ ಮಹಾರಾಷ್ಟ್ರ ಮೂಲದ ನಕಲಿ ಆಯುರ್ವೇದ ವೈದ್ಯರು ವಾಹನದಲ್ಲಿ ಔಷಧ ಮಾರಾಟ ಮಾಡುತ್ತಿದ್ದು, ಮುಗ್ದ ಜನರು ಇವರ ಮಾತಿನ ಮೋಡಿಗೆ ಮರುಳಾಗಿ ಔಷಧ ಖರೀದಿಸುತ್ತಿದ್ದಾರೆ. ಮಹಾರಾಷ್ಟ್ರದ ಸಂಚಾರಿ ನಕಲಿ ಆರ್ಯುವೇದ ವೈದ್ಯರಿಗೆ ಕನ್ನಡ ಭಾಷೆಯೇ ಬರೋದಿಲ್ಲ. ಹಿಂದಿ ಭಾಷೆ ಬಲ್ಲವರನ್ನು ಜೊತೆಯಲ್ಲಿ ಕರೆದುಕೊಂಡು ಬಂದರೆ ಮಾತ್ರ ಚಿಕಿತ್ಸೆ ಅಂತಾರೆ. ವೈದ್ಯರು ನಾಡಿ ನೋಡುವ ಸಮಯ ಬೆಳಿಗ್ಗೆ 8ರಿಂದ ಮಧ್ಯಾಹ್ನ 12ಗಂಟೆ ಮತ್ತು ಸಂಜೆ 4ರಿಂದ ರಾತ್ರಿ 8ಗಂಟೆವರೆಗೆ ಮಾತ್ರ. ಸರಕಾರದ ಪರವಾನಗಿ ಪಡೆದಿರುವ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಸಿಗದಿರುವ 50 ರೋಗಗಳಿಗೆ 100ಕ್ಕೂ ಅಧಿಕ ವಿವಿಧ ಔಷಧಿಗಳು ರಸ್ತೆಬದಿಯ ಹತ್ತಾರು ನಕಲಿ ಆಯುರ್ವೇದ ಗುಡಾರದಲ್ಲಿ ದಿನದ 24ಗಂಟೆಯೂ ಲಭ್ಯ. ತುಮಕೂರು ಜಿಲ್ಲೆಯ ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ, ಊರ್ಡಿಗೆರೆ, ದಾಬಸ್‍ಪೇಟೆ, ಗುಬ್ಬಿ, ತಿಪಟೂರು, ತುರುವೇಕೆರೆ, ಕುಣಿಗಲ್‍ಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ರಸ್ತೆಬದಿಯ ಹತ್ತಾರು ಸ್ಥಳಗಳಲ್ಲಿ ಪರವಾನಗಿ ಇಲ್ಲದ ನಕಲಿ ಗಿಡಮೂಲಿಕೆ ಔಷದ ತೈಲದ ಮಾರಾಟ ಮಳಿಗೆಗಳು ತಲೆಎತ್ತಿವೆ. ಕೇವಲ 12ಗಂಟೆಯಲ್ಲಿ ನಿರ್ಮಾಣ ಆಗುವ ನಕಲಿ ಚಿಕಿತ್ಸಾ ಕೇಂದ್ರಗಳು 48ಗಂಟೆಯೊಳಗೆ ಮತ್ತೆ ಮಾಯವಾಗಿ ಬೇರೆ ಕಡೆಗೆ ಸಂಚಾರ ನಡೆಸಲಿವೆ. ಆರೋಗ್ಯ ಇಲಾಖೆಯ ದಿವ್ಯ ನಿರ್ಲಕ್ಷದಿಂದ ಹೊರರಾಜ್ಯದ ನಕಲಿ ಸಂಚಾರಿ ವೈದ್ಯರಿಗೆ ಕಡಿವಾಣವೇ ಇಲ್ಲದಾಗಿದೆ. ವೈದ್ಯರೊಂದಿಗೆ ಚರ್ಚಿಸಲು ಮುಜುಗರ ತರಿಸುವ ದೇಹದ ಸಮಸ್ಯೆಗಳಾದ ಅಲ್ಸರ್, ಲೈಂಗಿಕ ನರ ದೌರ್ಬಲ್ಯ, ಗ್ಯಾಸ್‍ಟ್ರಬಲ್, ಅಜೀರ್ಣ, ಮಲಬದ್ದತೆ, ಇಂದ್ರಿಯಶಕ್ತಿ, ತಲೆನೋವು, ಸೊಂಟನೋವು, ಮೂಲವ್ಯಾಧಿ ಚಿಕಿತ್ಸೆ, ಜಂತುಹುಳ, ಸ್ತ್ರೀರೋಗ, ಮುಟ್ಟುನೋವು, ಋತುಚಕ್ರ ವ್ಯತ್ಯಾಸ, ಕುಷ್ಠರೋಗ, ಚರ್ಮರೋಗ, ಸಕ್ಕರೆ ಖಾಯಿಲೆ, ರಕ್ಷದೊತ್ತಡ, ಮರೆವು, ಫಿಡ್ಸ್, ಕೂದಲು ಉದರುವಿಕೆ, ಪೋಲಿಯೋ ರೋಗ, ಸಂತಾನ ಚಿಕಿತ್ಸೆ ಸೇರಿ 50ಬಗೆಯ ರೋಗಗಳಿಗೆ 100ಕ್ಕೂ ಅಧಿಕ ಚಿಕಿತ್ಸಾ ಔಷಧಿಗಳನ್ನು ಪ್ರಕಟಿಸಿ ರೋಗಿಗಳ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಪರವಾನಗಿ ಇಲ್ಲದೆ ಅನಧಿಕೃತ ಚಿಕಿತ್ಸಾ ಕೇಂದ್ರಗಳ ವಿರುದ್ದ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆಯ ಮೌನವೇಕೆ ಎಂಬುದೇ ಪ್ರಶ್ನೆಯಾಗಿದೆ. ಮಾತೇ ಬಂಡವಾಳ; ಮುಜುಗರವೇ ಅಸ್ತ್ರ..! ರಸ್ತೆಬದಿಯ ಸಂಚಾರಿ ಆರ್ಯುವೇದ ವೈದ್ಯರಿಗೆ ತರಬೇತಿಯೇ ಗೊತ್ತಿಲ್ವಂತೆ. ಔಷದಿ ಶೇಖರಣೆ ಮತ್ತು ಮಾರಾಟಕ್ಕೆ ಸರಕಾರದ ಪರವಾನಿಗೆಯೂ ಬೇಕಿಲ್ವಂತೆ. ತನ್ನ ಮಾತನ್ನೇ ಬಂಡವಾಳ ಮಾಡಿಕೊಂಡ ನಕಲಿ ವೈದ್ಯನಿಗೆ ಹಳ್ಳಿಯ ಜನರನ್ನು ಸೆಳೆಯುವ ಹತ್ತಾರು ವಿದ್ಯೆಗಳು ಕರಗತ ಆಗಿವೆ. ಜನರು ವೈಯಕ್ತಿಕ ಬದುಕಿನಲ್ಲಿ ಅನುಭವಿಸುವ ಮತ್ತು ವೈದ್ಯರ ಜೊತೆ ಮುಜುಗರ ತರಿಸುವ ದೇಹದ ಸಮಸ್ಯೆಗಳನ್ನು ಪ್ರದರ್ಶನ ಮಾಡಿ ತಮ್ಮತ್ತ ಸೆಳೆಯುವ ಪ್ರಯತ್ನ ನಡೆಯುತ್ತಿದೆ. 50 ರೋಗಗಳಿಗೆ 100 ಬಗೆಯ ಔಷದಿ..! ಮಹಾರಾಷ್ಟ್ರದ ಎಂಹೆಚ್-20, ಇ-8284 ನಂಬರಿನ ಸಂಚಾರಿ ನಕಲಿ ಆರ್ಯುವೇದ ಚಿಕಿತ್ಸಾ ಮಿನಿಬಸ್‍ಗೆ ದಾಖಲೆಯ ಜೊತೆ ಹೊರರಾಜ್ಯದ ಪರವಾನಗಿಯೇ ಇಲ್ಲ. ನಕಲಿ ಸಂಚಾರಿ ವಾಹನದಲ್ಲಿ 50ಕ್ಕೂ ಹೆಚ್ಚು ರೋಗ ನಿವಾರಣೆ ಮಾಡುವ 100ಕ್ಕೂ ಅಧಿಕ ಬಗೆಯ ಪರವಾನಗಿ ಇಲ್ಲದಿರುವ ಕಾಡಿನ ಗಿಡಮೂಲಿಕೆಯ ತೈಲದ ಡಬ್ಬಿಗಳ ಜೊತೆ ವಿವಿಧ ಬಗೆಯ ನೂರಾರು ಮಾತ್ರೆಗಳು ಲಭ್ಯವಿದೆ. ಇಂದು ಇಲ್ಲಿದ್ದರೆ ನಾಳೆ ಮತ್ತೊಂದು ಜಿಲ್ಲೆ ಮತ್ತು ತಾಲೂಕಿಗೆ ಇವರ ತಂಡ ಸಂಚಾರ ಮಾಡುತ್ತಿವೆ. ನೀವು ಪೋಟೋನಾದ್ರು ತಗೊಳ್ಳಿ ವಿಡೀಯೋ ಬೇಕಾದ್ರು ಮಾಡಿಕೊಳ್ಳಿ ನಮಗೇನು ಭಯವಿಲ್ಲ. ನಾವು ಮಹಾರಾಷ್ಟ್ರದ ಪಾರಂಪರಿಕ ನಾಟಿ ವೈದ್ಯರು, ಸರಕಾರದ ಪರವಾನಗಿ ನಮಗೆ ಅವಶ್ಯಕತೆ ಇಲ್ಲ. ನಮಗೆ ಕನ್ನಡ ಬರೋದಿಲ್ಲ ಹಿಂದಿ ಮಾತ್ರ ಬರುತ್ತೆ. ಹಿಂದಿಯಲ್ಲಿ ಮಾತನಾಡಿ ಸಮಸ್ಯೆ ಹೇಳಿದರೆ ಔಷಧಿ ಕೊಡ್ತೇನೆ ಎಂದು ನಕಲಿ ವೈದ್ಯ ಗೋಪಾಲಸಿಂಗ್ ಹೇಳಿದ್ದಾನೆ.
from India & World News in Kannada | VK Polls https://ift.tt/2KYIgGh