
ಡಿ. 7ರಿಂದ ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಮೈಸೂರು ಜಿಲ್ಲೆಯ ವಿಭಜನೆ ಕುರಿತು ವಿಧಾನ ಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಪ್ರಸ್ತಾಪಿಸಲಿದ್ದಾರೆ. ಈಗಾಗಲೇ ಇದಕ್ಕೆ ಅವಕಾಶ ಕೋರಿದ್ದಾರೆ. ಹುಣಸೂರು, ಎಚ್.ಡಿ.ಕೋಟೆ, ಸರಗೂರು, ಪಿರಿಯಪಟ್ಟಣ, ಕೆ.ಆರ್.ನಗರ ಹಾಗೂ ಸಾಲಿಗ್ರಾಮ ತಾಲೂಕುಗಳನ್ನು ಸೇರಿಸಿಕೊಂಡು ಡಿ.ದೇವರಾಜ ಅರಸು ಜಿಲ್ಲೆಯನ್ನಾಗಿ ಪರಿವರ್ತಿಸುವಂತೆ ಕೋರಿಕೆ ಸಲ್ಲಿಸಲಿದ್ದಾರೆ.

ಐತಿಚಂಡ ರಮೇಶ್ ಉತ್ತಪ್ಪ
ಮೈಸೂರು:
ವಿಜಯನಗರ ಜಿಲ್ಲೆ ರಚನೆಗೆ ರಾಜ್ಯ ಸರಕಾರ ಮುಂದಡಿ ಇಡುತ್ತಿದ್ದಂತೆyE ಕೆಲವು ಜಿಲ್ಲೆಗಳ ವಿಭಜನೆ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಮೈಸೂರಿಂದ ಬೇರ್ಪಡಿಸಿ ಹುಣಸೂರು ಜಿಲ್ಲೆ ರಚಿಸುವಂತೆ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾವ ಮಂಡಿಸಲು ಶಾಸಕ ಎಚ್.ಪಿ.ಮಂಜುನಾಥ್ ಹಾಗೂ ಎಚ್.ವಿಶ್ವನಾಥ್ ನಿರ್ಧರಿಸಿದ್ದಾರೆ.
ಲಿಂಗಾಯತ-ವೀರಶೈವ ಅಭಿವೃದ್ಧಿ ಪ್ರಾಧಿಕಾರ ರಚನೆ ಬಳಿಕ ಜಾತಿವಾರು ಪ್ರಾಧಿಕಾರ ಹಾಗೂ ನಿಗಮ ಸ್ಥಾಪನೆ ಒತ್ತಾಯ ಬಂದ ನಂತರ ಇದೀಗ ಹೊಸ ಜಿಲ್ಲೆಗಳ ಸರದಿ. ಹಲವು ವರ್ಷಗಳಿಂದ ಸಾಕಷ್ಟು ಹೊಸ ಜಿಲ್ಲೆಗಳ ರಚನೆಗೆ ಬೇಡಿಕೆ ಇದೆ. ಹಲವೆಡೆ ಹೋರಾಟ ನಡೆದು ನಂತರ ತಣ್ಣಗಾಗಿತ್ತು. ಇದೀಗ ಮತ್ತೆ ಮುನ್ನೆಲೆಗೆ ಬರುತ್ತಿದೆ.
ಇದರ ಮೊದಲ ಹೆಜ್ಜೆಯಾಗಿ ಮೈಸೂರಿನಿಂದ ಹುಣಸೂರು ಹಾಗೂ ಸುತ್ತಮುತ್ತಲಿನ ತಾಲೂಕುಗಳನ್ನು ಬೇರ್ಪಡಿಸಿ 'ಡಿ. ದೇವರಾಜ ಅರಸ್ ಜಿಲ್ಲೆ' ರಚಿಸುವಂತೆ ಕೇಳಿ ಬಂದ ಬೇಡಿಕೆ ಇದೀಗ ಬಲ ಪಡೆದುಕೊಳ್ಳುತ್ತಿದೆ. ಸಂಘ, ಸಂಸ್ಥೆಗಳು ಈ ಕುರಿತು ನಿರ್ಣಯ ಅಂಗೀಕರಿಸುತ್ತಿವೆ. ವಿಭಜನೆ ವಿರೋಧಿಸಿದ್ದ ಹುಣಸೂರಿನ ಶಾಸಕ ಎಚ್.ಪಿ.ಮಂಜುನಾಥ್ ಅವರೇ ಕಲಾಪದಲ್ಲಿ ಪ್ರಸ್ತಾವಕ್ಕೆ ಅವಕಾಶ ಕೋರಿರುವುದು ಹೊಸ ಬೆಳವಣಿಗೆ.
ಹಳ್ಳಿಹಕ್ಕಿ ಧ್ವನಿಗೆ ಕೋರಸ್

ಉಪ ಚುನಾವಣೆ ಸಂದರ್ಭ ಸುತ್ತಮುತ್ತಲಿನ ತಾಲೂಕು ಸೇರಿಸಿ ಹುಣಸೂರು ಜಿಲ್ಲೆ ರಚಿಸುವುದು ತಮ್ಮ ಪ್ರಥಮ ಆದ್ಯತೆ ಎಂದು ಎಚ್.ವಿಶ್ವನಾಥ್ ಹೇಳಿದ್ದರು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ವಿರೋಧಿಸಿದರು. ಚುನಾವಣೆಯಲ್ಲಿ ಮಂಜುನಾಥ್ ಗೆದ್ದು ವಿಶ್ವನಾಥ್ ಸೋಲು ಅನುಭವಿಸಿದ ನಂತರ ಬೇಡಿಕೆ ತಣ್ಣಗಾಗಿತ್ತು. ಇದೀಗ ವಿಜಯನಗರ ಜಿಲ್ಲೆಗೆ ಮುನ್ನುಡಿ ಬರೆಯುತ್ತಿದ್ದಂತೆಯೇ ವಿರೋಧಿಸುತ್ತಿದ್ದವರು ಒಂದಾಗಿದ್ದಾರೆ.
ಕಾಂಗ್ರೆಸ್ ಶಾಸಕ ಮಂಜುನಾಥ್ ಬೆಂಬಲ..!

'ಉಪ ಚುನಾವಣೆ ಸಂದರ್ಭ ಇದೊಂದು ರಾಜಕೀಯ ಬೇಡಿಕೆ ಎಂದುಕೊಂಡಿದ್ದೆ. ಆದರೆ, ಇದೀಗ ಗೆದ್ದ ನಂತರ ಪರಿಸ್ಥಿತಿ ಗಮನಿಸಿದಾಗ ಆಡಳಿತಾತ್ಮಕವಾಗಿ ಹುಣಸೂರು ಬೇರೆ ಜಿಲ್ಲೆಯಾಗುವುದೇ ಉತ್ತಮ. ಮೈಸೂರು ನಗರವೇ ಜಿಲ್ಲೆಗೆ ಪ್ರಧಾನವಾಗಿದ್ದು, ಜಿಲ್ಲಾಡಳಿತ ಅದರ ಕುರಿತೇ ಹೆಚ್ಚು ತಲೆಕೆಡಿಸಿಕೊಳ್ಳುತ್ತಿದೆ. ಗ್ರಾಮಾಂತರ ಭಾಗವನ್ನು ಸಂಪೂರ್ಣ ನಿರ್ಲಕ್ಷಿಸುತ್ತಿದೆ. ಈ ಹಿನ್ನೆಲೆಯಲ್ಲಿ ಆರು ತಾಲೂಕುಗಳನ್ನು ಒಳಗೊಂಡು ಹುಣಸೂರು ಜಿಲ್ಲೆ ರಚಿಸುವುದೇ ಅಭಿವೃದ್ಧಿಗೆ ಇರುವ ಏಕೈಕ ದಾರಿ' ಎಂದು ವಿಜಯ ಕರ್ನಾಟಕಕ್ಕೆ ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದ್ದಾರೆ.
ಹಳ್ಳಿ ಹಕ್ಕಿ ಹೇಳೋದೇನು..?

ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, 'ರಾಜಕೀಯವನ್ನು ಹೊರಗಿಟ್ಟು ಹುಣಸೂರು ತಾಲೂಕಿನ ಅನಿವಾರ್ಯತೆ ಬಗ್ಗೆ ಗಂಭೀರವಾಗಿ ಚರ್ಚೆಯಾಗಬೇಕು. ಹಿಂದುಳಿದವರು, ಬುಡಕಟ್ಟು ಜನರು, ರೈತರ ಸಮಸ್ಯೆಗಳನ್ನು ಕೇಳುವವರೇ ಇಲ್ಲ. ಮೈಸೂರು ನಗರ ಬೆಳೆಯುತ್ತಿರುವುದರಿಂದ, ದಸರಾದಂತಹ ಹಲವು ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ಶಿಷ್ಟಾಚಾರ ಪಾಲಿಸುವುದೇ ಅಧಿಕಾರಿಗಳಿಗೆ ದೊಡ್ಡ ಕೆಲಸ. ಗ್ರಾಮಾಂತರ ಪ್ರದೇಶಗಳಿಂದ ದೂರದ ಮೈಸೂರಿಗೆ ತೆರಳಿದರೂ ಜನರ ಸಮಸ್ಯೆಗಳು ಪರಿಹಾರವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಜಿಲ್ಲೆ ರಚನೆಯೊಂದೇ ಪರಿಹಾರ' ಎಂದು ಹೇಳುತ್ತಾರೆ.
ಮೈಸೂರು ವಿಭಜನೆ ಹೇಗೆ?

ಎಚ್.ಪಿ.ಮಂಜುನಾಥ್ ಹಾಗೂ ಎಚ್.ವಿಶ್ವನಾಥ್ ಅವರು ಡಿ. 7ರಿಂದ ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಮೈಸೂರು ಜಿಲ್ಲೆಯ ವಿಭಜನೆ ಕುರಿತು ವಿಧಾನ ಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಪ್ರಸ್ತಾಪಿಸಲಿದ್ದಾರೆ. ಈಗಾಗಲೇ ಇದಕ್ಕೆ ಅವಕಾಶ ಕೋರಿದ್ದಾರೆ. ಹುಣಸೂರು, ಎಚ್.ಡಿ.ಕೋಟೆ, ಸರಗೂರು, ಪಿರಿಯಪಟ್ಟಣ, ಕೆ.ಆರ್.ನಗರ ಹಾಗೂ ಸಾಲಿಗ್ರಾಮ ತಾಲೂಕುಗಳನ್ನು ಸೇರಿಸಿಕೊಂಡು ಡಿ.ದೇವರಾಜ ಅರಸು ಜಿಲ್ಲೆಯನ್ನಾಗಿ ಪರಿವರ್ತಿಸುವಂತೆ ಕೋರಿಕೆ ಸಲ್ಲಿಸಲಿದ್ದಾರೆ. ಮೈಸೂರು ಜಿಲ್ಲೆಗೆ ಮೈಸೂರು, ತಿ.ನರಸೀಪುರ ನಂಜನಗೂಡು ತಾಲೂಕುಗಳೊಂದಿಗೆ ವರುಣಾ ಹಾಗೂ ಚಾಮುಂಡೇಶ್ವರಿ ಕ್ಷೇತ್ರಗಳು ತಾಲೂಕುಗಳಾಗಲಿ ಎನ್ನುವುದು ಬೇಡಿಕೆ. ಇದಕ್ಕೆ ಮೈಸೂರು ಭಾಗದಲ್ಲಿ ಭಾವನಾತ್ಮಕ ವಿರೋಧ ಇದೆ.
from India & World News in Kannada | VK Polls https://ift.tt/36r2jFU