![](https://vijaykarnataka.com/photo/79521291/photo-79521291.jpg)
ವೆಂ. ಸುನೀಲ್ ಕುಮಾರ್ ಕೋಲಾರ ಬೆಂಗಳೂರು: ಕೃಷಿ ಉತ್ತೇಜನಕ್ಕಾಗಿ ಲೋಕಸಭೆ ಚುನಾವಣೆಗೂ ಮೊದಲು ಕೇಂದ್ರ ಸರಕಾರ ಘೋಷಿಸಿದ ಪಿಎಂ ಯೋಜನೆಯಡಿ ಸಹಾಯಧನ ಪಡೆದ ರಾಜ್ಯದ 85 ಸಾವಿರಕ್ಕೂ ಹೆಚ್ಚು ರೈತರಿಗೆ ಈಗಾಗಲೆ ಪಡೆದ ಹಣವನ್ನು ಹಿಂತಿರುಗಿಸುವ ಅನಿವಾರ‍್ಯತೆ ಎದುರಾಗಿದೆ. ರಾಜ್ಯಾದ್ಯಂತ ಈಗಾಗಲೇ ನೂರಾರು ರೈತರಿಂದ ಹಣ ವಾಪಸ್ ಪಡೆಯಲಾಗಿದೆ. ವಾಪಸ್ ಪಡೆಯುವ ಪ್ರಕ್ರಿಯೆಯನ್ನು ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ಮುಂದೆ ಅವಮಾನ ಆಗುವುದು ಬೇಡ ಎಂದು ಹಲವು ಮಂದಿ ಸ್ವಯಂ ಪ್ರೇರಿತರಾಗಿ ಹಣ ಮರಳಿಸುತ್ತಿದ್ದಾರೆ. ರೈತರನ್ನು ಬೆಂಬಲಿಸುವ ಉದ್ದೇಶದಿಂದ ಕೇಂದ್ರ ಸರಕಾರದಿಂದ ವಾರ್ಷಿಕ 3 ಕಂತುಗಳಲ್ಲಿ ತಲಾ 2 ಸಾವಿರದಂತೆ 6 ಸಾವಿರ ರೂ.ಗಳನ್ನು ರೈತರಿಗೆ ನೀಡಲಾಗುತ್ತಿದೆ. 2018ರ ಡಿ.1ರಿಂದಲೇ ಪೂರ್ವಾನ್ವಯವಾಗುವಂತೆ ಯೋಜನೆ ಜಾರಿಗೊಳಿಸಿದ ಕೇಂದ್ರ ಸರಕಾರ 2019ರ ಮಾರ್ಚ್ ನಲ್ಲಿ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಸಹಾಯಧನದ ಮೊದಲ ಕಂತಿನ ಎರಡು ಸಾವಿರ ರೂ. ಪಾವತಿಸಿತ್ತು. ಜತೆಗೆ ಫಲಾನುಭವಿಗಳಿಗೆ ರಾಜ್ಯ ಸರಕಾರವೂ ವಾರ್ಷಿಕ 4 ಸಾವಿರ ರೂ.ಗಳನ್ನು ನೀಡುತ್ತಿದೆ. ಆದರೆ ಇದೀಗ, ಉಳ್ಳವರೂ ಈ ಯೋಜನೆಯಡಿ ನಿಯಮಬಾಹಿರವಾಗಿ ಹಣ ಪಡೆದಿದ್ದಾರೆ ಎಂದು ಇಂಥವರ ಪಟ್ಟಿ ತಯಾರಿಸಲಾಗಿದೆ. ಈ ಪಟ್ಟಿಯಲ್ಲಿರುವ ಹೆಚ್ಚಿನವರು ತೆರಿಗೆ ಪಾವತಿದಾರರಾಗಿದ್ದಾರೆ! ಅರ್ಜಿ ಸಲ್ಲಿಕೆ ದಿನಗಳಲ್ಲಿ ಕೃಷಿ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳಿಂದ ಹಾಗೂ ಗ್ರಾಮ ಪಂಚಾಯಿತಿ ಕಚೇರಿಗಳಲ್ಲೂ ಯೋಜನೆ ಕುರಿತು ಸ್ಪಷ್ಟ ಮಾಹಿತಿ ರೈತರಿಗೆ ಸಿಗುತ್ತಿರಲಿಲ್ಲ. ಪಹಣಿ ಇದ್ದರೆ ಸಾಕು, ಯಾರು ಬೇಕಾದರು ಅರ್ಜಿ ಸಲ್ಲಿಸಬಹುದು ಎಂದೇ ರೈತರು ನಂಬಿದ್ದರು. ಹಾಗಾಗಿ ಬಹುತೇಕ ರೈತರು ಪಹಣಿ ಮಾಹಿತಿ ಒದಗಿಸಿ ಸೈಬರ್ ಸೆಂಟರ್‌ಗಳು ಹಾಗೂ ಏಜೆಂಟರ ಸಹಾಯದಿಂದ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ರಾಜ್ಯದಲ್ಲಿ ಈ ಯೋಜನೆಗೆ ಈವರೆಗೆ 56,74,940 ರೈತರು ಹೆಸರು ನೋಂದಾಯಿಸಿದ್ದು, ನಾನಾ ಹಂತದ ಪರಿಶೀಲನೆ ನಂತರ 52,68,327 ರೈತರಿಗೆ ಸಹಾಯಧನ ಬಿಡುಗಡೆಯಾಗಿದೆ. ಸಹಾಯಧನ ಪಡೆದಿರುವ ರೈತರ ಪೈಕಿ 85,208 ಮಂದಿ ಆದಾಯ ಉಳ್ಳ ಸ್ಥಿತಿವಂತರು ಎನ್ನುವುದು ಪರಿಶೀಲನೆಯಿಂದ ಗೊತ್ತಾಗಿದೆ. ಪಟ್ಟಿ ರವಾನಿಸಿದ ಕೃಷಿ ಸಚಿವಾಲಯ ಫಲಾನುಭವಿ ರೈತರ ಮಾಹಿತಿಯನ್ನು ಪರಿಶೀಲಿಸಿರುವ ಕೇಂದ್ರ ಕೃಷಿ ಸಚಿವಾಲಯವು, ರೈತರು ಸಲ್ಲಿಕೆ ಮಾಡಿರುವ ಆಧಾರ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಸಾಕಷ್ಟು ಜನರು ಆದಾಯ ತೆರಿಗೆ ಪಾವತಿಸಿರುವುದು ಕಂಡುಬಂದಿದೆ. ಆ ಹಿನ್ನೆಲೆಯಲ್ಲಿ ಅನರ್ಹ ರೈತರಿಂದ ಸಹಾಯಧನ ವಾಪಸ್ ಪಡೆಯುವಂತೆ ರಾಜ್ಯಗಳಿಗೆ ಅನರ್ಹ ರೈತರ ಪಟ್ಟಿಯನ್ನು ರವಾನಿಸಿದೆ. ಹಣ ವಾಪಸ್ ಮಾಡದಿದ್ದರೆ? ಹಣವನ್ನು ಡಿ.ಡಿ ಮೂಲಕ ಸಹಾಯಕ ನಿರ್ದೇಶಕರ ಕಚೇರಿಗೆ ಹಿಂದಿರುಗಿಸಬೇಕು. ಒಂದೊಮ್ಮೆ ಹಣ ಹಿಂತಿರುಗಿಸಲು ಮುಂದಾಗದಿದ್ದರೆ ಕೃಷಿ ಇಲಾಖೆಯಿಂದ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸೌಲಭ್ಯಗಳು ಅಂತಹ ರೈತರಿಗೆ ದೊರೆಯುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘೋಷಣಾಪತ್ರ ಪಡೆಯಲಾಗಿತ್ತು ಈ ಯೋಜನೆಯ ಸೌಲಭ್ಯ ಪಡೆಯುವ ರೈತರು ಎರಡು ಹೆಕ್ಟೇರ್‌ಗಿಂತಲೂ ಹೆಚ್ಚು ಕೃಷಿ ಜಮೀನು ಹೊಂದಿರುವಂತಿಲ್ಲ. ಅರ್ಜಿದಾರ ರೈತರ ಕುಟುಂಬ ಸದಸ್ಯರು ಸಾಂವಿಧಾನಿಕ ಹುದ್ದೆಯಲ್ಲಿರಬಾರದು, ಮಾಸಿಕ 10 ಸಾವಿರ ರೂ.ಗಿಂತ ಹೆಚ್ಚು ಪಿಂಚಣಿ ಪಡೆಯಬಾರದು, ಆದಾಯ ತೆರಿಗೆ ಪಾವತಿದಾರರಾಗಿರಬಾರದು, ನೋಂದಾಯಿತ ವೃತ್ತಿನಿರತ ವೈದ್ಯರು, ಎಂಜಿನಿಯರ್, ವಕೀಲರು, ಲೆಕ್ಕಪರಿಶೋಧಕರಾಗಿರಬಾರದು ಎಂಬ ನಿಯಮ ಇತ್ತು. ಜತೆಗೆ ರೈತರಿಂದ ಅರ್ಜಿಯ ಜತೆಗೆ ಅನುಬಂಧ ಸಿ ಮತ್ತು ಡಿ ಯಲ್ಲಿ ಸ್ವಯಂ ಘೋಷಣೆ ಪ್ರಮಾಣಪತ್ರ ಪಡೆಯಲಾಗಿದೆ. ಸುಳ್ಳು ಮಾಹಿತಿ ನೀಡಿ ಯೋಜನೆಯ ಸೌಲಭ್ಯ ಪಡೆದಿರುವುದು ಕಂಡುಬಂದರೆ ಸಹಾಯಧನ ವಾಪಸ್ ನೀಡುವ ಷರತ್ತಿಗೆ ಬದ್ಧವಾಗಿರುವುದಾಗಿ ರೈತರಿಂದ ಘೋಷಣಾ ಪತ್ರವನ್ನೂ ಪಡೆಯಲಾಗಿತ್ತು. ಫಲಾನುಭವಿಗಳೆಷ್ಟು?
- ಯೋಜನೆಗೆ ಹೆಸರು ನೋಂದಾಯಿಸಿಕೊಂಡವರು 56,74,940
- ಸಹಾಯಧನ ಪಡೆದವರು 52,68,327
- ಸಹಾಯಧನ ವಾಪಸ್ ನೀಡಬೇಕಾದವರು 85,208
from India & World News in Kannada | VK Polls https://ift.tt/36uyqnS