ನವದೆಹಲಿ: ಕೊರೊನಾ ವೈರಸ್ ಹಾವಳಿ ತಡೆಗಟ್ಟಲು ಕೇಂದ್ರ ಸರ್ಕಾರ ಹಲವು ನಿಯಮಾವಳಿಗಳನ್ನು ರೂಪಿಸಿದೆ. ಈ ನಿಯಮಾವಳಿಗಳು ಕೇವಲ ಜನಸಾಮಾನ್ಯರಿಗೆ ಮಾತ್ರವಲ್ಲದೇ ರಾಷ್ಟ್ರದ ಆಡಳಿತ ಯಂತ್ರಕ್ಕೂ ಅನ್ವಯಿಸುತ್ತದೆ. ಅದರಂತೆ ಕೊರೊನಾ ವೈರಸ್ ನಿಯಮಾವಳಿಗಳನ್ನು ಸಂಸತ್ತು ಕೂಡ ಚಾಚೂ ತಪ್ಪದೇ ಪಾಲಿಸುತ್ತಿದೆ. ಇದೇ ಕಾರಣಕ್ಕೆ ಸಂಸದರ ಆಪ್ತ ಸಹಾಯಕರಿಗೆ ಸಂಸತ್ತು ಪ್ರವೇಶ ನಿರ್ಬಂಧಿಸಿದ ಆದೇಶ ಹೊರಡಿಸಲಾಗಿದೆ. ಹೌದು, ಲೋಕಸಭೆ ಹಾಗೂ ರಾಜ್ಯಸಭೆ ಎಲ್ಲಾ ಸಂಸದರ ಆಪ್ತ ಸಹಾಯಕರಿಗೆ ಸಂಸತ್ತಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ಮುಂದಿನ ಆದೇಶ ಬರುವವರೆಗೂ ಸಂಸತ್ತಿಗೆ ಬರದಂತೆ ಸೂಚನೆ ನೀಡಲಾಗಿದೆ. ಲೋಕಸಭೆ ಹಾಗೂ ರಾಜ್ಯಸಭೆಯ ಎಲ್ಲಾ ಸಂಸದರ ಒಟ್ಟು ಆಪ್ತ ಸಹಾಯಕರ ಸಂಖ್ಯೆಯೇ 800 ಇದೆ. ಸಾಮಾಜಿಕ ಅಂತರ ಕಾಪಾಡುವ ಈ ನಿಟ್ಟಿನಲ್ಲಿ ಈ ಆಪ್ತ ಸಹಜಾಯಕರಿಗೆ ಸಂಸತ್ತು ಪ್ರವೇಶ ನಿಷೇಧಿಸಿ ಲೋಕಸಭಾ ಸಚಿವಾಲಾಯ ಆದೇಶ ಹೊರಡಿಸಿದೆ. ಇಷ್ಟೇ ಅಲ್ಲದೇ ಜಂಟಿ ಕಾರ್ಯದರ್ಶಿ ಮಟ್ಟದ ಕೆಳಗಿನ ಅಧಿಕಾರಿಗಳನ್ನು ಭೇಟಿ ಮಾಡಲು ಬರುವವರ ಮೇಲೆಯೂ ನಿರ್ಬಂಧ ವಿಧಿಸಲಾಗಿದೆ. ಅಲ್ಲದೇ ನಿವೃತ್ತ ಅಧಿಕಾರಿಗಳೂ ಸಂಸತ್ತಿಗೆ ಬರುವುದನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಕಳೆದ ಮೇ. 3ರಿಂದ ಸಂಸತ್ತು ಪುನರಾರಂಭವಾಗಿದ್ದು, ನಾಲ್ಕು ಅಧಿಕಾರಿಗಳಿಗೆ ಕೊರೊನಾ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಲೋಕಸಭಾ ಸಚಿವಾಲಯ ಸ್ಪಷ್ಟಪಡಿಸಿದೆ.
from India & World News in Kannada | VK Polls https://ift.tt/308Um5h