ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಹಾಗೂ ಎನ್‌ಆರ್‌ಸಿ ವಿರೋಧಿಸಿ ದೆಹಲಿಯ ಮೆಟ್ರೋ ನಿಲ್ದಾಣದ ಬಳಿ ಮಹಿಳೆಯರು ಮುಖ್ಯರಸ್ತೆಯನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಶನಿವಾರ ರಾತ್ರಿಯಿಂದ ಮಹಿಳೆಯರ ಪ್ರತಿಭಟನೆ ನಡೆಯುತ್ತಿದ್ದು, ಪ್ರತಿಭಟನಾಕಾರರ ಜೊತೆಗೆ ಮಾತುಕತೆ ನಡೆಸುವ ಮೂಲಕ ರಸ್ತೆ ತೆರವುಗೊಳಿಸಲು ಪೊಲೀಸರಿಂದ ಪ್ರಯತ್ನ ನಡೆಯುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ನೂರಾರು ಮಹಿಳೆಯರು ಕಳೆದ ರಾತ್ರಿಯಿಂದ ಈಶಾನ್ಯ ದೆಹಲಿಯ ಜಾಫ್ರಾಬಾದ್‌ನಲ್ಲಿ ಪ್ರಮುಖ ರಸ್ತೆಯನ್ನು ಬ್ಲಾಕ್ ಮಾಡಿದ್ದಾರೆ. ಪ್ರತಿಭಟನಾಕಾರರಿಗೆ ಭೀಮ್ ಆರ್ಮಿ ಸಂಘಟನೆ ಬೆಂಬಲ ಸೂಚಿಸಿದೆ. ದೆಹಲಿಯ ಶಾಹೀನ್ ಬಾಗ್ ಮಾದರಿಯಲ್ಲೇ ಪ್ರತಿಭಟನೆಯನ್ನು ಮುಂದುವರಿಸಲು ತಯಾರಿ ನಡೆಯುತ್ತಿದ್ದು, ಪೊಲೀಸರಿಗೂ ಇದು ತಲೆನೋವಾಗಿ ಪರಿಣಮಿಸಿದೆ. ಪ್ರತಿಭಟನೆಯಿಂದ ಜಫರಾಬಾದ್ ಮೆಟ್ರೋ ನಿಲ್ದಾಣಕ್ಕೆ ಯಾರಿಗೂ ಪ್ರವೇಶ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಮೆಟ್ರೋ ನಿಲ್ದಾಣದ ಎರಡು ಮುಖ್ಯದ್ವಾರಗಳು ಮುಚ್ಚಿದ್ದು, ಮೆಟ್ರೋ ರೈಲು ಈ ನಿಲ್ದಾಣದಲ್ಲಿ ನಿಲ್ಲುವುದಿಲ್ಲ ಎಂದು ದಿಲ್ಲಿ ಮೆಟ್ರೋ ರೈಲ್ವೇ ಕಾರ್ಪೊರೇಷನ್ ಪ್ರಕಟಣೆ ಹೊರಡಿಸಿದೆ. ಪ್ರತಿಭಟನಾಕಾರರ ಜೊತೆಗೆ ಮಾತುಕತೆ ನಡೆಸಲು ಪೊಲೀಸರು ಪ್ರಯತ್ನ ನಡೆಸುತ್ತಿದ್ದು ಶೀಘ್ರದಲ್ಲೇ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದಿದ್ದಾರೆ. ಮುಂಜಾಗರೂಕತಾ ಕ್ರಮವಾಗಿ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
from India & World News in Kannada | VK Polls https://ift.tt/3bYDfqo