ಬೆಂಗಳೂರು: ಚನ್ನಪಟ್ಟಣದ ಪರಾಜಿತ ಅಭ್ಯರ್ಥಿ ಸಿ.ಪಿ.ಯೋಗೀಶ್ವರ್‌ಗೆ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂಬ ವರ್ತಮಾನವು ಮೂಲ ಬಿಜೆಪಿ ಶಾಸಕರ ಆಸ್ಫೋಟಕ್ಕೆ ಕಾರಣವಾಗಿದೆ. ಸಂಪುಟದಲ್ಲಿ ಬೆಂಗಳೂರು ಹಾಗೂ ಬೆಳಗಾವಿಗೆ ಸಿಗುತ್ತಿರುವ ಆದ್ಯತೆ ಅನ್ಯ ಭಾಗದ ಶಾಸಕರ ಕೆಂಗಣ್ಣಿಗೆ ಕಾರಣವಾಗಿದ್ದು, ಪ್ರಾತಿನಿಧ್ಯಕ್ಕೆ ಆಗ್ರಹಿಸಿ ಮೂಲ ಬಿಜೆಪಿಗರ ಗುಂಪು ಪ್ರತ್ಯೇಕ ಸಭೆ ನಡೆಸಿರುವುದು ಸಿಎಂ ಯಡಿಯೂರಪ್ಪಗೆ ಮತ್ತೆ ತಲೆಬಿಸಿ ಸೃಷ್ಟಿಸಿದೆ. ನಮ್ಮ ಸರಕಾರ ಬಂದಾಗಲೆಲ್ಲ ವಲಸಿಗರಿಗೆ ಮಾತ್ರ ಆದ್ಯತೆ ಸಿಗುತ್ತದೆ ಎಂದು ಕೇಸರಿ ಪಾಳಯದ ಒಂದು ಗುಂಪು ಕಳೆದ ವಾರ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಭೇಟಿ ಮಾಡಿ ಅಳಲು ತೋಡಿಕೊಂಡಿತ್ತು. ಆದರೆ ಈ ಬಾರಿ ವಲಸೆ ಬಂದು ಬಿಜೆಪಿಯಲ್ಲಿ 'ಸಂಕರ'ಗೊಂಡ ಶಾಸಕರ ತಂಡ ಬಂಡಾಯದ ಮುನ್ಸೂಚನೆ ನೀಡಿದೆ. ಪರಾಜಿತ ಲಕ್ಷ್ಮಣ ಸವದಿಗೆ ಡಿಸಿಎಂ ಸ್ಥಾನ ನೀಡಿದ್ದಕ್ಕಾಗಿ ಮುನಿಸಿಕೊಂಡಿದ್ದ ಈ ಶಾಸಕರು, ಮತ್ತೆ ಸೋತವರಿಗೆ ಮಣೆ ಹಾಕುವ ಹೈಕಮಾಂಡ್ ನಿರ್ಧಾರದಿಂದ ಬೇಸತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಶಾಸಕರ ಭವನದಲ್ಲಿ ಸಭೆ ಸೇರಿ ಯೋಗೀಶ್ವರ್ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಾಲದಕ್ಕೆ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭೇಟಿ ಮಾಡಿ ಅಹವಾಲು ಸಲ್ಲಿಸಲು ನಿರ್ಧರಿಸಿದ್ದಾರೆ. ಇನ್ನೊಂದೆಡೆ ಮಾಜಿ ಸಚಿವರಾದ ಎಚ್.ವಿಶ್ವನಾಥ್, ಎಂ.ಟಿ.ಬಿ.ನಾಗರಾಜ್ ಅವರು ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದಾರೆ. ಅತೃಪ್ತರ ಸಭೆಯಲ್ಲಿ ಯಾರೆಲ್ಲ ಭಾಗಿ? ಅತೃಪ್ತರ ಸಭೆಯಲ್ಲಿ ಶಾಸಕರಾದ ರಾಜುಗೌಡ, ರಾಜಕುಮಾರ್ ಪಾಟೀಲ್, ದತ್ತಾತ್ರೇಯ ಪಾಟೀಲ್ ರೇವೂರ, ಡಾ. ಶಿವರಾಜ್ ಪಾಟೀಲ್, ಪರಣ್ಣ ಮುನವಳ್ಳಿ, ಮುರುಗೇಶ್ ನಿರಾಣಿ, ಹಾಲಪ್ಪ ಆಚಾರ್, ಬಸವನಗೌಡ ಮತ್ತಿಮೋಡ್, ಎಂ.ಪಿ.ರೇಣುಕಾಚಾರ್ಯ ಜತೆಗೆ ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್ ಭಾಗಿಯಾಗಿದ್ದರು.
from India & World News in Kannada | VK Polls https://ift.tt/36VBCGr