ಪ್ರಥಮ ಟೆಸ್ಟ್‌ನ ನಾಲ್ಕನೇ ದಿನದಾಟಕ್ಕೆ ಟೀಮ್‌ ಇಂಡಿಯಾದ ಗೇಮ್‌ ಪ್ಲಾನ್‌ ವಿವರಿಸಿದ ಅಶ್ವಿನ್!

ವೆಲ್ಲಿಂಗ್ಟನ್: ಬೇಸಿನ್‌ ರಿಸರ್ವ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್‌ ತಂಡ ಪ್ರಾಬಲ್ಯ ಮೆರೆದಿದ್ದು, ಪಂದ್ಯದಲ್ಲಿ ಸಕಾರಾತ್ಮ ಫಲಿತಾಂಶ ಪಡೆದುಕೊಳ್ಳಲು ನಾಲ್ಕನೇ ದಿನದಾಟದಲ್ಲಿ ಭಾರತ ಸ್ಪರ್ಧಾತ್ಮಕ ಮೊತ್ತ ದಾಖಲಿಸಬೇಕು ಎಂದು ಅನುಭವಿ ಆಫ್‌ ಸ್ಪಿನ್ನರ್‌ ಆರ್‌ ಅಶ್ವಿನ್‌ ಅಭಿಪ್ರಾಯಪಟ್ಟಿದ್ದಾರೆ. ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 165 ರನ್‌ಗಳ ಅಲ್ಪ ಮೊತ್ತಕ್ಕೆ ಆಲ್‌ಔಟ್‌ ಆಯಿತು. ಟೆಸ್ಟ್‌ ಕ್ರಿಕೆಟ್‌ನ ನಂ.1 ತಂಡವೊಂದು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ ಅತ್ಯಂತ ಕಡಿಮೆ ಮೊತ್ತ ಇದಾಗಿದೆ. ಬಳಿಕ ಮೊದಲ ಇನಿಂಗ್ಸ್‌ನಲ್ಲಿ 348 ರನ್‌ಗಳನ್ನು ಗಳಿಸಿದ ನ್ಯೂಜಿಲೆಂಡ್‌ ಒಟ್ಟು 183 ರನ್‌ಗಳ ಭಾರಿ ಮುನ್ನಡೆ ತನ್ನದಾಗಿಸಿಕೊಂಡಿದೆ. ಇದಕ್ಕುತ್ತರವಾಗಿ 2ನೇ ಇನಿಂಗ್ಸ್‌ನಲ್ಲಿ ಬ್ಯಾಟ್‌ ಮಾಡುತ್ತಿರುವ ಕೊಹ್ಲಿ ಬಳಗ ಮೂರನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ ನಷ್ಟದಲ್ಲಿ 144 ರನ್‌ ಗಳಿಸಿ ಇನ್ನೂ 39 ರನ್‌ಗಳ ಹಿನ್ನಡೆಯಲ್ಲಿದೆ. ಭಾನುವಾರದ ಆಟದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರವಿಚಂದ್ರನ್‌ ಅಶ್ವಿನ್‌, ನಾಲ್ಕನೇ ದಿನದಾಟ ಭಾರತದ ಪಾಲಿಗೆ ಅತ್ಯಂತ ಮಹತ್ವದ್ದು ಎಂದಿದ್ದಾರೆ. ನ್ಯೂಜಿಲೆಂಡ್‌ನ ಬಲಿಷ್ಠ ವೇಗದ ಬೌಲಿಂಗ್‌ ವಿಭಾಗದ ಎದುರು ದಿಟ್ಟ ಆಟವಾಡಲು ಸಣ್ಣ ಸಣ್ಣ ಗುರಿಗಳನ್ನು ಹೊಂದಿರುವುದಾಗಿ ಹೇಳಿದ್ದಾರೆ. "ಎದುರಾಳಿ ತಂಡ ಅತ್ಯುತ್ತಮವಾಗಿ ಬೌಲಿಂಗ್‌ ಮಾಡುತ್ತಿದೆ. ಪಿಚ್‌ ಈಗ ಮೊದಲ ದಿನದಲ್ಲಿದ್ದ ಸ್ಥಿತಿಯಲ್ಲಿಲ್ಲ. ಆದರೂ ನಮ್ಮ ಬ್ಯಾಟ್ಸ್‌ಮನ್‌ಗಳಿಗೆ ರನ್‌ ಗಳಿಸುವುದು ಕಷ್ಟವನ್ನಾಗಿಸಿದ್ದಾರೆ. ನಾಲ್ಕನೇ ದಿನ ಅವರು ಹೇಗೆ ಬೌಲ್‌ ಮಾಡುತ್ತಾರೆಂಬುದನ್ನು ನೋಡಬೇಕು. ನಮ್ಮ ತಂಡ ಮೊದಲು ಪ್ರಥಮ ಅವಧಿಯಲ್ಲಿ ಉತ್ತಮವಾಗಿ ಬ್ಯಾಟ್‌ ಮಾಡಬೇಕಿದೆ," ಎಂದಿದ್ದಾರೆ. "ಪಂದ್ಯದಲ್ಲಿ ಇನ್ನು 6 ಅವಧಿಯ ಆಟ ಬಾಕಿ ಇದೆ. ಆದರೂ ಇಲ್ಲಿ ಗುರಿ ಕಾಯ್ದುಕೊಳ್ಳಲು ಎಷ್ಟು ರನ್‌ ಗಳಿಸಬೇಕು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೊದಲು ಪ್ರತಿ ಅವಧಿಯಲ್ಲಿ, ಪ್ರತಿ ಎಸೆತಗಳನ್ನು ಎದರಿಸುವ ಕಡೆಗೆ ಗಮನ ನೀಡಬೇಕು. ಸಣ್ಣ ಸಣ್ಣ ಗುರಿಗಳನ್ನು ಇಟ್ಟು ಅದನ್ನು ಸಾಧಿಸಬೇಕು. ಅಜಿಂಕ್ಯ-ವಿಹಾರಿ ಉತ್ತಮವಾಗಿ ಆಡುತ್ತಿದ್ದಾರೆ. ಅದೇ ರೀತಿ ಬ್ಯಾಟಿಂಗ್‌ ಮುಂದುವರಿಸುವ ಅಗತ್ಯವಿದೆ. ಪಿಚ್‌ ಹೇಗಿದೆ ಎಂಬುದು ಅವರು ಚೆನ್ನಾಗಿ ಅರಿತಿದ್ದಾರೆ," ಎಂದು ಅಶ್ವಿನ್‌ ವಿವರಿಸಿದ್ದಾರೆ. ಇದೇ ವೇಳೆ ಎರಡನೇ ಇನಿಂಗ್ಸ್‌ನಲ್ಲಿ ಭಾರತದ ಪರ ಅರ್ಧಶತಕ ಬಾರಿಸಿದ ಮಯಾಂಕ್‌ ಅಗರ್ವಾಲ್‌ ಅವರನ್ನು ಆಶ್ವಿನ್‌ ಗುಣಗಾನ ಮಾಡಿದ್ದಾರೆ. ಮಯಾಂಕ್‌ 99 ಎಸೆತಗಳಲ್ಲಿ 58 ರನ್‌ಗಳ ಅಮೂಲ್ಯ ಕಾಣಿಕೆ ನೀಡಿದರು. ಪಂದ್ಯದಲ್ಲಿ ಭಾರತದ ಪರ ದಾಖಲಾಗಿರುವ ಏಕಮಾತ್ರ ಅರ್ಧಶತಕ ಇದಾಗಿದೆ. "ಯಾವಾಗ ಆಕ್ರಮಣಕಾರಿ ಆಟವಾಡಬೇಕು ಯಾವಾಗ ರಕ್ಷಣಾತ್ಮಕವಾಗಿ ಆಡಬೇಲು ಎಂಬುದರ ಬಗ್ಗೆ ಹೆಚ್ಚು ಅಂತರವಿರುವುದಿಲ್ಲ. ಮಯಾಂಕ್‌ ಈ ವಿಚಾರದಲ್ಲಿ ಹೆಚ್ಚು ಧೈರ್ಯ ಉಳ್ಳವರಾಗಿದ್ದಾರೆ. ಭಾರತ 'ಎ' ತಂಡದ ಸರಣಿಯಲ್ಲಿ ಪಡೆದ ಅನುಭವವನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿದ್ದಾರೆ," ಎಂದಿದ್ದಾರೆ. ಸಂಕ್ಷಿಪ್ತ ಸ್ಕೋರ್‌ ಭಾರತ: ಮೊದಲ ಇನಿಂಗ್ಸ್‌ 165/10 ನ್ಯೂಜಿಲೆಂಡ್‌: ಮೊದಲ ಇನಿಂಗ್ಸ್‌ 100.2 ಓವರ್‌ಗಳಲ್ಲಿ 348/10 (ಕೇನ್‌ ವಿಲಿಯಮ್ಸನ್‌ 89, ರಾಸ್‌ ಟೇಲರ್‌ 44, ಕಾಲಿನ್‌ ಡಿ'ಗ್ರ್ಯಾಂಡ್‌ ಹೋಮ್‌ 43, ಕೈಲ್‌ ಜೇಮಿಸನ್‌ 44, ಟ್ರೆಂಟ್‌ ಬೌಲ್ಟ್‌ 38; ಇಶಾಂತ್‌ ಶರ್ಮಾ 68ಕ್ಕೆ 5, ಆರ್‌. ಅಶ್ವಿನ್‌ 99ಕ್ಕೆ 3). ಭಾರತ: 2ನೇ ಇನಿಂಗ್ಸ್‌ 65 ಓವರ್‌ಗಳಲ್ಲಿ 144/4 (ಮಯಾಂಕ್‌ ಅಗರ್ವಾಲ್‌ 58, ಅಜಿಂಕ್ಯ ರಹಾನೆ 25*, ಹನುಮ ವಿಹಾರಿ 15*; ಟ್ರೆಂಟ್‌ ಬೌಲ್ಟ್‌ 27ಕ್ಕೆ 3, ಟಿಮ್‌ ಸೌಥೀ 41ಕ್ಕೆ 1).


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/37SepoW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...