ಪೋರ್ಟ್ ಎಲಿಜಬೆತ್: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ದ್ವಿತೀಯ ಟ್ವೆಂಟಿ-20 ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ 12 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯನ್ನು 1-1ರ ಅಂತರದಲ್ಲಿ ಸಮಬಲಗೊಳಿಸಿದ್ದು, ಅಂತಿಮ ಪಂದ್ಯದಲ್ಲಿ ವಿಜೇತರ ನಿರ್ಣವಾಗಲಿದೆ. ಸೈಂಟ್ ಜಾರ್ಜ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ದಕ್ಷಿಣ ಆಫ್ರಿಕಾ ನಾಯಕ ಹಾಗೂ ವಿಕೆಟ್ ಕೀಪರ್ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಆಕರ್ಷಕ ಅರ್ಧಶತಕದ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 158 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. 47 ಎಸೆತಗಳನ್ನು ಎದುರಿಸಿದ ಕ್ವಿಂಟನ್ ಡಿ ಕಾಕ್ ಐದು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳಿಂದ 70 ರನ್‌ಗಳ ಅಮೂಲ್ಯ ಇನ್ನಿಂಗ್ಸ್ ಕಟ್ಟಿದರು. ಕೊನೆಯ ಹಂತದಲ್ಲಿ ರಾಸ್ಸೀ ವ್ಯಾನ್ ಡೆರ್ ದುಸ್ಸಾನ್ 26 ಎಸೆತಗಳಲ್ಲಿ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 37 ರನ್ ಗಳಿಸಿದರು. ಇನ್ನುಳಿದಂತೆ ರಿಜಾ ಹೆಂಡ್ರಿಕ್ಸ್ (14), ಫಾಫ್ ಡು ಪ್ಲೆಸಿಸ್ (15) ಹಾಗೂ ಡೇವಿಡ್ ಮಿಲ್ಲರ್ (11*) ರನ್ ಗಳಿಸಿದರು. ಆಸೀಸ್ ಪರ ಕಳೆದ ಪಂದ್ಯದಲ್ಲಿ ಹ್ಯಾಟ್ರಿಕ್ ಸೇರಿದಂತೆ ಐದು ವಿಕೆಟ್ ಸಾಧನೆ ಮಾಡಿರುವ ಆಶ್ಟನ್ ಆಗರ್ ವಿಕೆಟ್ ಪಡೆಯುವಲ್ಲಿ ವಿಫಲವಾದರು. ಇನ್ನೊಂದೆಡೆ ಕೇನ್ ರಿಚರ್ಡ್ಸ್‌ಸನ್ ಎರಡು ವಿಕೆಟ್ ಪಡೆದರು. ಬಳಿಕ ಗುರಿ ಬೆನ್ನಟ್ಟಿದ ಕಾಂಗರೂ ಪಡೆ ಆರು ವಿಕೆಟ್ ನಷ್ಟಕ್ಕೆ 146 ರನ್ ಗಳಿಸಲ್ಟೇ ಶಕ್ತವಾಯಿತು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ವಿಕೆಟ್‌ನ ಮಗದೊಂದು ತುದಿಯಿಂದ ಕೆಚ್ಚೆದೆಯ ಇನ್ನಿಂಗ್ಸ್ ಕಟ್ಟಿದ ಅಜೇಯ ಅರ್ಧಶತಕ ಸಾಧನೆ ಮಾಡಿದರು. ಆದರೂ ಕೊನೆಯ ವರೆಗೂ ಔಟಾಗದೆ ಉಳಿದರೂ ತಂಡವನ್ನು ಗೆಲುವಿನ ದಟ ಸೇರಿಸಲಾಗಲಿಲ್ಲ. 56 ಎಸೆತಗಳನ್ನು ಎದುರಿಸಿದ ವಾರ್ನರ್ ಐದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 67 ರನ್ ಗಳಿಸಿ ಔಟಾಗದೆ ಉಳಿದರು. ಇನ್ನುಳಿದಂತೆ ನಾಯಕ ಆ್ಯರೋನ್ ಫಿಂಚ್ (14), ಸ್ಟೀವ್ ಸ್ಮಿತ್ (29), ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ (14) ರನ್ ಗಳಿಸಿದರು. ಆದರೆ ಕೊನೆಯ ಹಂತದಲ್ಲಿ ಮಿಚೆಲ್ ಮಾರ್ಶ್ (6), ಮ್ಯಾಥ್ಯೂ ವೇಡ್ (1) ಹಾಗೂ ಆಶ್ಟನ್ ಅಗರ್ (1) ನಿರಾಸೆ ಮೂಡಿಸಿದರು. ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್‌ಗಿಡಿ ಮೂರು ವಿಕೆಟ್ ಪಡೆದು ಮಿಂಚಿದರು. ಹಾಗೆಯೇ ಕಗಿಸೋ ರಬಡ, ಎನ್ರಿಚ್ ನಾರ್ಟ್ಜೆ ಹಾಗೂ ಡ್ವೇಯ್ನ್ ಪ್ರೆಟೋರಿಯಸ್ ತಲಾ ಒಂದು ವಿಕೆಟ್ ಹಂಚಿದರು. ಈ ಮೊದಲು ಪ್ರಥಮ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 107 ರನ್‌ಗಳ ಹೀನಾಯ ಸೋಲಿಗೆ ಶರಣಾಗಿತ್ತು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2HQ5Xff