ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಟ್ವೀಟ್ ಮಾಡಿದ್ದು, ಟ್ರಂಪ್ ಅವರನ್ನು ಸ್ವಾಗತಿಸಲು ಭಾರತ ಎದುರು ನೋಡುತ್ತಿದೆ ಎಂದು ಹೇಳಿದ್ದಾರೆ. ನಾಳೆಯಿಂದ ಎರಡು ದಿನ ಅಮೆರಿಕಾ ಅಧ್ಯಕ್ಷರು ಭಾರತ ಪ್ರವಾಸ ಕೈಗೊಳ್ಳಲಿದ್ದು, ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ. ಡೊನಾಲ್ಡ್ ಟ್ರಂಪ್ ಅವರನ್ನು ಸ್ವಾಗತಿಸಲು ಭಾರತ ಎದುರು ನೋಡುತ್ತಿದೆ. ನಾಳೆ ಅಹಮದಾಬಾದಿನ ಐತಿಹಾಸಿಕ ಕಾರ್ಯಕ್ರಮದಲ್ಲಿ ಅವರು ನಮ್ಮೊಂದಿಗೆ ಇರುವುದು ಗೌರವ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಇಡೀ ಗುಜರಾತ್ ಒಂದೇ ಧ್ವನಿಯಲ್ಲಿ ನಮಸ್ತೆ ಟ್ರಂಪ್ ಬಗ್ಗೆ ಮಾತನಾಡುತ್ತಿದೆ ಎಂದಿದ್ದಾರೆ. ಈ ಕುರಿತು ವಿಡಿಯೋವನ್ನು ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ ಗುಜರಾತ್ ಸಿಎಂ ಹಂಚಿಕೊಂಡಿದ್ದಾರೆ. ಡೊನಾಲ್ಡ್ ಟ್ರಂಪ್ ಭೇಟಿ ಹಿನ್ನೆಲೆ ಅಹಮದಾಬಾದಿಗೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದರು. ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವನ್ನು ಉದ್ಘಾಟಿಸಲಿರುವ ಟ್ರಂಪ್, ಅದೇ ಮೊಟೆರಾ ಕ್ರೀಡಾಂಗಣದಲ್ಲಿ ನಡೆಯುವ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಂತರ ಸಬರಮತಿ ಆಶ್ರಮ, ಆಗ್ರಾದ ತಾಜಮಹಲ್‌ಗೆ ಭೇಟಿ ನೀಡಲಿದ್ದಾರೆ. ಎರಡನೇ ದಿನ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಯೋಜಿಸಿರುವ ಔತಣಕೂಟದಲ್ಲಿ ಟ್ರಂಪ್ ಭಾಗಿಯಾಗಲಿದ್ದಾರೆ. ಅಹಮದಾಬಾದ್, ಆಗ್ರಾ ಮತ್ತು ನವದೆಹಲಿಯಲ್ಲಿ ಎಲ್ಲೆಲ್ಲೂ ಟ್ರಂಪ್ ಸ್ವಾಗತಿಸುವ ಹೋರ್ಡಿಂಗ್‌ಗಳು ರಾರಾಜಿಸುತ್ತಿವೆ.
from India & World News in Kannada | VK Polls https://ift.tt/39YJUPG