ವೆಲ್ಲಿಂಗ್ಟನ್: ಪ್ರವಾಸಿ ಭಾರತ ವಿರುದ್ದ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ 10 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅಜೇಯ ಓಟ ಮುಂದುವರಿಸಿದ್ದ ಭಾರತ ಮೊದಲ ಸೋಲಿಗೆ ಶರಣಾಗಿದೆ. ಇದರೊಂದಿಗೆ ವಿರಾಟ್ ಕೊಹ್ಲಿ ಪಡೆಗೆ ಗರ್ವಭಂಗವಾಗಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ದಾಖಲಿಸಿದೆ. ಅಷ್ಟೇ ಯಾಕೆ ವೆಲ್ಲಂಗ್ಟನ್ ವಿಜಯವನ್ನು ಸ್ಮರಣೀಯವಾಗಿಸಿರುವ ನ್ಯೂಜಿಲೆಂಡ್ ಇತಿಹಾಸದಲ್ಲಿ 100 ಟೆಸ್ಟ್ ಪಂದ್ಯಗಳ ಗೆಲುವನ್ನು ದಾಖಲಿಸಿದೆ. 144/4 ಎಂಬಲ್ಲಿದ್ದ ನಾಲ್ಕನೇ ದಿನದಾಟ ಮುಂದುವರಿಸಿದ ಭಾರತ 81 ಓವರ್‌ಗಳಲ್ಲಿ 191 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು. ಇದರಂತೆ ನ್ಯೂಜಿಲೆಂಡ್‌ಗೆ ಒಂಬತ್ತು ರನ್‌ಗಳ ಗೆಲುವಿನ ಗುರಿ ಒಡ್ಡಿತ್ತು. ಬಳಿಕ ಗುರಿ ಬೆನ್ನಟ್ಟಿದ ಕಿವೀಸ್ 1.4 ಓವರ್‌ಗಳಲ್ಲಿ ವಿಜಯದ ಗೆರೆ ತಲುಪಿತು. ಕಿವೀಸ್ ಪರ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮಾರಕ ದಾಳಿ ಸಂಘಟಿಸಿದ ಟಿಮ್ ಸೌಥಿ 61 ರನ್ ತೆತ್ತು ಐದು ವಿಕೆಟ್ ತೆತ್ತು ಮಿಂಚಿದರು. ಈ ಮೂಲಕ ಪಂದ್ಯದಲ್ಲಿ ಒಂಬತ್ತು ವಿಕೆಟ್ ಸಾಧನೆ ಮಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಸೌಥಿ ನಾಲ್ಕು ವಿಕೆಟ್ ಪಡೆದಿದ್ದರು. ಇನ್ನೊಂದೆಡೆ ಟ್ರೆಂಟ್ ಬೌಲ್ಟ್ ನಾಲ್ಕು ವಿಕೆಟ್ ಕಿತ್ತು ಭಾರತವನ್ನು ಕಾಡಿದರು. ಭಾರತದ ಪರ ಅಜಿಂಕ್ಯ ರಹಾನೆ (29), ಹನುಮ ವಿಹಾರಿ (15), ರಿಷಬ್ ಪಂತ್ (25), ರವಿಚಂದ್ರನ್ ಅಶ್ವಿನ್ (4), ಇಶಾಂತ್ ಶರ್ಮಾ (12), ಮೊಹಮ್ಮದ್ ಶಮಿ (0*) ಹಾಗೂ ಜಸ್ಪ್ರೀತ್ ಬುಮ್ರಾ (0) ನಿರಾಸೆ ಮೂಡಿಸಿದರು. ಈ ಮೊದಲು ಟಿಮ್ ಸೌಥಿ (49ಕ್ಕೆ 4 ವಿಕೆಟ್) ಹಾಗೂ ಕೈಲ್ ಜೇಮಿಸನ್ (39ಕ್ಕೆ 4 ವಿಕೆಟ್) ದಾಳಿಗೆ ಸಿಲುಕಿದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 165 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು. ಬಳಿಕ ಜವಾಬ್ ನೀಡಲಾರಂಭಿಸಿದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ (89) ನೆರವಿನಿಂದ 348 ರನ್ ಪೇರಿಸಿತ್ತು. ಈ ಮೂಲಕ 183 ರನ್‌ಗಳ ಬೃಹತ್ ಮುನ್ನಡೆ ದಾಖಲಿಸಿತ್ತು. ಭಾರತದ ಪರ ಇಶಾಂತ್ ಶರ್ಮಾ ಐದು ವಿಕೆಟ್ ಪಡೆದರು. ಟೆಸ್ಟ್ ನಂ.1 ತಂಡವಾಗಿರುವ ಭಾರತ ಭಾರಿ ಮುಖಭಂಗಕ್ಕೊಳಗಾಗಿದೆ. ಇದೀಗ ಅಂತಿಮ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2uu1hc4