ಕಿಂಗ್ ಕೊಹ್ಲಿ ಮರೆಯಲಾಗದ 10 ದಾಖಲೆಗಳು

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ನಾಯಕ , ನವೆಂಬರ್ 5 ಮಂಗಳವಾರದಂದು 31ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಲೇ ಸಾಗುತ್ತಿರುವ ಕಿಂಗ್ ಕೊಹ್ಲಿ, ಸಮಕಾಲೀನ ಕ್ರಿಕೆಟ್‌ನಲ್ಲಿ ಎಲ್ಲ ಪ್ರಕಾರದಲ್ಲೂ ಶ್ರೇಷ್ಠ ಬ್ಯಾಟ್ಸ್‌ಮನ್ ಪಟ್ಟವನ್ನು ಆಲಂಕರಿಸಿದ್ದಾರೆ. ಪ್ರಸ್ತುತ ಲೇಖನದಲ್ಲಿ ವಿರಾಟ್ ಕೊಹ್ಲಿ ಮರೆಯಲಾಗದ 10 ದಾಖಲೆಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ. 1. ದಶಕವೊಂದರಲ್ಲೇ 20000 ರನ್ ದಾಖಲೆ: ಕ್ರಿಕೆಟ್ ಇತಿಹಾಸದಲ್ಲೇ ದಶಕವೊಂದರಲ್ಲೇ 20000 ರನ್ ಗಳಿಸಿದ ವಿಶ್ವದ ಮೊದಲ ಹಾಗೂ ಏಕಮಾತ್ರ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ವಿರಾಟ್ ಕೊಹ್ಲಿ ಭಾಜನವಾಗಿದ್ದಾರೆ. ಕಳೆದ ವೆಸ್ಟ್‌ಇಂಡೀಸ್ ಪ್ರವಾಸದಲ್ಲಿ ವಿರಾಟ್ ಈ ಸ್ಮರಣೀಯ ದಾಖಲೆಯನ್ನು ಬರೆದಿದ್ದರು. 2. ದಾಖಲೆಯ ಏಳು ದ್ವಿಶತಕ: ಟೆಸ್ಟ್ ಕ್ರಿಕೆಟ್‌ನಲ್ಲಿ ಏಳು ದ್ವಿಶತಕಗಳನ್ನು ಬಾರಿಸಿದ ಭಾರತದ ಮೊಟ್ಟ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಗೆ ವಿರಾಟ್ ಕೊಹ್ಲಿ ಭಾಜನವಾಗಿದ್ದಾರೆ. ಈ ಮೂಲಕ ಮಾಜಿ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ದಾಖಲೆಯನ್ನು ಮುರಿದಿದ್ದಾರೆ. 3. ಏಕದಿನ ಅತಿ ವೇಗದಲ್ಲಿ 10 ಸಹಸ್ರ ರನ್: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನೇ ಮುರಿದಿರುವ ವಿರಾಟ್ ಕೊಹ್ಲಿ ಏಕದಿನದಲ್ಲಿ ಅತಿ ವೇಗದಲ್ಲಿ 10000 ರನ್ ಗಳಿಸಿದ ವಿಶ್ವ ದಾಖಲೆಗೆ ಅರ್ಹವಾಗಿದ್ದಾರೆ. ಕೊಹ್ಲಿ ಈ ಸಾಧನೆಯನ್ನು 205 ಇನ್ನಿಂಗ್ಸ್‌ಗಳಲ್ಲೇ ಕ್ರಮಿಸಿದ್ದಾರೆ. ಹಾಗೆಯೇ ಏಕದಿನದಲ್ಲಿ ಸಚಿನ್ ಬಳಿಕ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ (11520) ಎಂಬ ದಾಖಲೆಗೆ ಪಾತ್ರವಾಗಿದ್ದಾರೆ. 4. ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಶತಕ ಸಾಧನೆ: ಕ್ಯಾಲೆಂಡರ್ ವರ್ಷವೊಂದರಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಕೀರ್ತಿಗೂ ವಿರಾಟ್ ಕೊಹ್ಲಿ ಭಾಜನವಾಗಿದ್ದಾರೆ. 2017ನೇ ಸಾಲಿನಲ್ಲಿ ಎಲ್ಲ ಪ್ರಕಾರದ ಕ್ರಿಕೆಟ್‌ನಲ್ಲಾಗಿ ವಿರಾಟ್ ಒಟ್ಟು 17 ಶತಕಗಳನ್ನು ಸಿಡಿಸಿದ್ದರು. 5. ಐಸಿಸಿ ಪ್ರಶಸ್ತಿಗಳ ದಾಖಲೆ: 2018ರ ಸಾಲಿನಲ್ಲಿ ಎಲ್ಲ ಮೂರು ಐಸಿಸಿ ಪ್ರಶಸ್ತಿಗಳಾದ ವರ್ಷದ ಟೆಸ್ಟ್, ವರ್ಷದ ಏಕದಿನ ಸಹಿತ ವರ್ಷದ ಕ್ರಿಕೆಟಿಗ ಪ್ರಶಸ್ತಿಗಳನ್ನು ಬಾಚಿದ್ದರು. ಅದೇ ಸಾಲಿನಲ್ಲಿ ಐಸಿಸಿ ವರ್ಷದ ಟೆಸ್ಟ್ ಹಾಗೂ ಏಕದಿನ ತಂಡಗಳಿಗೂ ನಾಯಕರಾಗಿಯೂ ಆಯ್ಕೆಯಾಗಿದ್ದರು. 6. ನಾಯಕನಾಗಿ ದಾಖಲೆ: ಟೆಸ್ಟ್ ನಾಯಕನಾಗಿ ಅತಿ ವೇಗದಲ್ಲಿ 4000 ರನ್ ಪೇರಿಸಿದ ದಾಖಲೆಯೂ ವಿರಾಟ್ ಕೊಹ್ಲಿ ಅವರಿಗೆ ಸಲ್ಲುತ್ತದೆ. ಈ ಪಟ್ಟಿಯಲ್ಲಿ ವೆಸ್ಟ್‌ಇಂಡೀಸ್‌ನ ಮಾಜಿ ಕಪ್ತಾನ ಬ್ರಿಯಾನ್ ಲಾರಾ ದಾಖಲೆಯನ್ನು ಹಿಂದಿಕ್ಕಿರುವ ವಿರಾಟ್ ಕೊಹ್ಲಿ, 65 ಇನ್ನಿಂಗ್ಸ್‌ಗಳಲ್ಲಿ ಸ್ಮರಣೀಯ ಸಾಧನೆ ಮಾಡಿದ್ದಾರೆ. 7. ಏಕದಿನದಲ್ಲೂ ದಾಖಲೆ: ನಾಯಕನಾಗಿ ಏಕದಿನದಲ್ಲಿ ಅತಿ ವೇಗದಲ್ಲಿ 3000 ರನ್ ದಾಖಲಿಸಿದ ಹಿರಿಮೆಗೂ ವಿರಾಟ್ ಭಾಜನವಾಗಿದ್ದಾರೆ. ಇಲ್ಲಿ ಮಾಜಿ ನಾಯಕರಾದ ಮಹೇಂದ್ರ ಸಿಂಗ್ ಧೋನಿ ಹಾಗೂ ಎಬಿಡಿ ವಿಲಿಯರ್ಸ್ ದಾಖಲೆಯನ್ನು ಮುರಿದಿರುವ ಕಿಂಗ್ ಕೊಹ್ಲಿ, 49 ಇನ್ನಿಂಗ್ಸ್‌ಗಳಲ್ಲಿ ಮೈಲುಗಲ್ಲು ತಲುಪಿದ್ದಾರೆ. 8. ಕಪ್ತಾನರಾಗಿ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ದಾಖಲೆ: ನಾಯಕರಾಗಿ ಕ್ಯಾಲೆಂಡರ್ ವರ್ಷವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ವಿರಾಟ್ ಕೊಹ್ಲಿ ಬರೆದಿದ್ದಾರೆ. 2017ನೇ ಸಾಲಿನಲ್ಲಿ ಎಲ್ಲ ಪ್ರಕಾರದ ಕ್ರಿಕೆಟ್‌ನಲ್ಲಾಗಿ ಒಟ್ಟು 1460 ರನ್ ಕಲೆ ಹಾಕಿದ್ದರು. 9. ಏಕದಿನದಲ್ಲಿ ಅತಿ ಹೆಚ್ಚು ಶತಕ: ಸಚಿನ್ ತೆಂಡೂಲ್ಕರ್ ಬಳಿಕ ಏಕದಿನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಗೌರವ ವಿರಾಟ್ ಕೊಹ್ಲಿಗೆ ಸಲ್ಲುತ್ತದೆ. ವಿರಾಟ್ ಕೊಹ್ಲಿ ಇದುವರೆಗೆ 43 ಶತಕಗಳನ್ನು ಬಾರಿಸಿದ್ದಾರೆ. 10. ಆಸೀಸ್‌ನಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲುವು: ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲುವನ್ನು ದಾಖಲಿಸಿತ್ತು. ಈ ಮೂಲಕ ಭಾರತದ 71 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಕೊಹ್ಲಿ ಚಾರಿತ್ರಿಕ ಸಾಧನೆ ಮಾಡಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/36xsp85

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...