ಲಸಿಕೆ ಕೊರತೆ, ಮಾತಿನ ಶೂರ ಮೋದಿಯವರು ಈಗ ಎಲ್ಲಿದ್ದಾರೆ? - ಸಿದ್ದರಾಮಯ್ಯ

ಬೆಂಗಳೂರು: ಟಿವಿಯಲ್ಲಿ ಕಾಣಿಸಿಕೊಂಡು ವೀರಾವೇಶದಿಂದ 18ರಿಂದ 45 ವಯಸ್ಸಿನವರಿಗೆ ಮೇ ಒಂದರಿಂದ ಲಸಿಕೆಯ ಘೋಷಣೆ ‌ಮಾಡಿದವರು‌ ಪ್ರಧಾನಿ . ಈಗ ರಾಜ್ಯದ ಬಿಜೆಪಿ ಸರಕಾರ ಲಸಿಕೆಯನ್ನು ಮುಂದೂಡಿದೆ. ಮಾತಿನ ಶೂರ ಮೋದಿಯವರು ಎಲ್ಲಿದ್ದಾರೆ ಈಗ? ಎಂದು ವಿಪಕ್ಷ ನಾಯಕ ಪ್ರಶ್ನಿಸಿದ್ದಾರೆ. ಲಸಿಕೆ ಕೊರತೆ ಬಗ್ಗೆ ಸರಣಿ ಟ್ಟೀಟ್‌ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “18 ರಿಂದ 25 ವರ್ಷ ವಯಸ್ಸಿನವರಿಗೆ ಲಸಿಕೆ ನೀಡಲು ರಾಜ್ಯ ಸರಕಾರ ಸಿದ್ಧತೆ ಮಾಡಿಕೊಂಡಿಲ್ಲ ಎಂದು ಪ್ರಧಾನಿಯವರಿಗೆ ಗೊತ್ತಿರಲಿಲ್ಲವೇ? ಮುಖ್ಯಮಂತ್ರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿಲ್ಲವೇ? ಮಾತು ತಪ್ಪಿದ ಪ್ರಧಾನಿ ಅವರು ಟಿವಿಯಲ್ಲಿ‌ ಕಾಣಿಸಿಕೊಂಡು ನಿಜ‌ಸಂಗತಿ ತಿಳಿಸಿ ದೇಶದ ಜನತೆಯಲ್ಲಿ ಕ್ಷಮೆ ಕೇಳಬೇಕು,” ಎಂದು ಆಗ್ರಹಿಸಿದ್ದಾರೆ. “ಲಸಿಕೆ ಪಡೆದುಕೊಳ್ಳಲು ಆನ್‌ಲೈನ್ ಮೂಲಕ ಜನರು ಹೆಸರನ್ನು ನೋಂದಣಿ ಮಾಡಬೇಕು. ಗ್ರಾಮೀಣ ಭಾಗದ ಜನರಿಗೆ ಈ ಆನ್‌ಲೈನ್ ನೋಂದಣಿ ಕಷ್ಟದ ಕೆಲಸ, ಹೀಗಾಗಿ ನೀಡುವುದನ್ನು ಪೋಲಿಯೋ ಲಸಿಕೆ ಮಾದರಿಯಲ್ಲೆ ಒಂದು ಅಭಿಯಾನವಾಗಿ ರೂಪಿಸಿ, ಜನರ ಬಳಿಗೆ ಹೋಗಿ ಲಸಿಕೆ ನೀಡಬೇಕು,” ಎಂದು ಮಾಜಿ ಸಿಎಂ ಒತ್ತಾಯಿಸಿದ್ದಾರೆ. ಲಸಿಕೆ ಪಡೆದವರಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ತುಂಬಾ ಕಡಿಮೆ ಇದೆ. ಹೀಗಾಗಿ ರಾಜ್ಯದಲ್ಲಿರುವ 18 ವರ್ಷ ಮೇಲ್ಪಟ್ಟ ಹಾಗೂ 18 ವರ್ಷದೊಳಗಿನ ಎಲ್ಲರಿಗೂ ಶೀಘ್ರವಾಗಿ ಲಸಿಕೆ ಸಿಗುವಂತೆ ಮಾಡಲು ರಾಜ್ಯ ಸರಕಾರ ಗಂಭೀರ ಪ್ರಯತ್ನ ಮಾಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ಸರಕಾರದ ಮುಖ್ಯಕಾರ್ಯದರ್ಶಿಯವರ ಜೊತೆ ಲಸಿಕೆ ವಿಚಾರವಾಗಿ ಚರ್ಚಿಸಿದ್ದೇನೆ. ಆರುವರೆ ಕೋಟಿ ಲಸಿಕೆಯ ಅಗತ್ಯವಿದೆ ಎಂದಿದ್ದಾರೆ. ನನ್ನ ಪ್ರಕಾರ ಈ ತಿಂಗಳ ಅಂತ್ಯದ ಒಳಗೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವುದನ್ನು ಪ್ರಾರಂಭಿಸಲು ಸಾಧ್ಯವಾಗದು. ಬೇಗ ಸಿಕ್ಕಿದ್ದರೆ ಸೋಂಕು ಇನ್ನಷ್ಟು ಕಡಿಮೆಯಾಗುತ್ತಿತ್ತು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಲಸಿಕೆ ತಯಾರಿಕೆ ಸಂಬಂಧ 162 ಯುನಿಟ್‌ಗಳಿಗೆ ಕೇಂದ್ರ ಸರಕಾರ ಟೆಂಡರ್ ಕರೆದಿತ್ತು, ಈ ಪೈಕಿ 30 ಯುನಿಟ್‌ಗಳಷ್ಟೇ ಕಾರ್ಯಾರಂಭ ಮಾಡಿವೆ. ದೇಶದಲ್ಲಿ ಲಸಿಕೆಯ ಅಭಾವ ಉಂಟಾಗಲು ಇದೇ ಮುಖ್ಯ ಕಾರಣ. ಒಟ್ಟಿನಲ್ಲಿ ಕೇಂದ್ರ ಸರಕಾರದ ತಾತ್ಸಾರ ಧೋರಣೆಗೆ ಜನ ಜೀವ ತೆರುವಂತಾಗಿದೆ ಎಂದು ಅವರ ಕಿಡಿಕಾರಿದ್ದಾರೆ. 45 ವರ್ಷ ಮೇಲ್ಪಟ್ಟವರಿಗೆ ನೀಡುವ ಲಸಿಕೆಗಷ್ಟೇ ಕೇಂದ್ರ ಸರಕಾರ ಹಣ ಕೊಡುವುದು, ಅದಕ್ಕಿಂತ ಕೆಳಗಿನ ವಯೋಮಾನದ ಜನರಿಗೆ ನೀಡುವ ಲಸಿಕೆಗೆ ರಾಜ್ಯಗಳೇ ಹಣ ಹಾಕಬೇಕು. ಸದ್ಯದ ಪರಿಸ್ಥಿತಿಯಲ್ಲಿ ಲಸಿಕೆ ಪಡೆಯುವುದೊಂದೆ ಸೋಂಕು ತಡೆಗಟ್ಟಲು ಇರುವ ದಾರಿ, ಹೀಗಾಗಿ ರಾಜ್ಯ ಸರಕಾರ ವಿಳಂಬ ಮಾಡದೆ ಎಲ್ಲರಿಗೂ ಲಸಿಕೆ ನೀಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ವರೆಗೆ 45 ವರ್ಷ ಮೇಲ್ಪಟ್ಟ ಶೇ.25 ಜನರಿಗಷ್ಟೇ ಕೊರೊನಾ ಲಸಿಕೆ ನೀಡಲಾಗಿದೆ. ನಮ್ಮಲ್ಲೇ ಲಸಿಕೆಯ ಅಗತ್ಯತೆ ಹೆಚ್ಚಿರುವಾಗ ಪ್ರಧಾನಿ ಮೋದಿ ಅವರು ವಿದೇಶಗಳಿಗೆ 6 ಕೋಟಿ ಲಸಿಕೆ ನೀಡಿ ಭಾರತೀಯರು ಲಸಿಕೆಗಾಗಿ ಪರದಾಡುವಂತೆ ಮಾಡಿದ್ದಾರೆ. ಸೋಂಕು ಹರಡಲು ಇದೂ ಒಂದು ಕಾರಣ. ನಿತ್ಯ ಕೊರೊನಾ ಸೋಂಕು ಮಿತಿಮೀರಿ ಏರಿಕೆಯಾಗುತ್ತಿದ್ದು, ಇದನ್ನು ತಡೆಗಟ್ಟುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ. ಬಿಜೆಪಿ ನಾಯಕರು ಕೊರೊನಾ ಸೋಂಕು ತಡೆಗಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡಲಿ, ಇಲ್ಲವೇ ಅಧಿಕಾರ ಬಿಟ್ಟು ತೊಲಗಲಿ. ಸರಕಾರದ ಅದಕ್ಷತೆ ಹಾಗೂ ದುರಾಡಳಿತಕ್ಕೆ ಅಮಾಯಕ ಜನರು ಬಲಿಯಾಗುವುದು ಬೇಡ ಎಂದು ಅವರು ತಿಳಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಪಕ್ಷವು ಬಡರೋಗಿಗಳಿಗಾಗಿ 10 ಆಂಬುಲೆನ್ಸ್‌ಗಳನ್ನು ವ್ಯವಸ್ಥೆಗೊಳಿಸಿ ಅವುಗಳ ಮೂಲಕ ಉಚಿತ ಸೇವೆ ನೀಡುತ್ತಿದೆ ಹಾಗೂ ಕೊರೊನಾ ಸಹಾಯವಾಣಿಯನ್ನು ತೆರೆದು ಸಂಕಷ್ಟದಲ್ಲಿರುವವರಿಗೆ ಅಗತ್ಯ ನೆರವು ನೀಡುತ್ತಿದೆ. ನಮ್ಮ ಪಕ್ಷದ ಶಾಸಕರು, ಮುಖಂಡರು, ಕಾರ್ಯಕರ್ತರು ಇಂಥಾ ಸಂಕಷ್ಟದ ಸಮಯದಲ್ಲಿ ಜನರ ಜೊತೆ ನಿಂತು, ನೆರವಾಗಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.


from India & World News in Kannada | VK Polls https://ift.tt/3eLPRn1

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...