ಚಿಕ್ಕಮಗಳೂರು: ಪಾರ್ಶ್ವವಾಯು ಪೀಡಿತನಾಗಿ ಹಾಸಿಗೆ ಹಿಡಿದಿದ್ದ ತಂದೆಯ ಮೇಲೆ ಮಗನೇ ಕೊಡಲಿಯಿಂದ ಹಲ್ಲೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಸಮೀಪದ ಚನ್ನಡ್ಲಿನಲ್ಲಿ ಬುಧವಾರ ನಡೆದಿದೆ. ಹಾಸಿಗೆ ಹಿಡಿದಿದ್ದ ಸುಂದರ್(50) ಹಾಗೂ ಮಗ ನಿಖೇಶ್(30) ನಡುವೆ ಬುಧವಾರ ಹಣದ ವಿಚಾರವಾಗಿ ಜಗಳವಾಗಿದ್ದು, ಮಗ ನಿಖೇಶ್, ಸುಂದರ್ ಅವರ ತಲೆಗೆ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡ ಸುಂದರ್ ಅವರಿಗೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿದೆ. ಮಗ ನಿಖೇಶ್ ಬಾಳೂರು ಠಾಣೆಯಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ. ದಾನಿಗಳ ಹಣ : ವಿಶೇಷ ಚೇತನ ಇಬ್ಬರು ಮಕ್ಕಳು ಹಾಗೂ ಪತ್ನಿಯೊಂದಿಗೆ ವಾಸವಾಗಿದ್ದ ಸುಂದರ್, ಕಳೆದ ವರ್ಷ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದರು. ಈ ಸಂದರ್ಭ ಇವರ ಚಿಕಿತ್ಸೆಗೆ ದಾನಿಗಳು ನೆರವಾಗಿದ್ದು ಲಕ್ಷಾಂತರ ರೂ. ಸಂಗ್ರಹವಾಗಿತ್ತು. ಬೆಂಗಳೂರಿನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಸುಂದರ್ ಅವರ ಹಿರಿಯ ಮಗ ನಿಖೇಶ್ ದಾನಿಗಳು ನೀಡಿದ ಹಣದ ವಿಷಯವಾಗಿ ಆಗಾಗ ಜಗಳವಾಡುತ್ತಿದ್ದ. ಬುಧವಾರ ಈ ವಿಷಯವಾಗಿ ಜಗಳವಾಗಿ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ.
from India & World News in Kannada | VK Polls https://ift.tt/3wCkAKx