ಲಾಸ್ ಏಂಜಲಿಸ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ, ಸ್ಯಾನ್ ಹೋಸ್ನಲ್ಲಿರುವ ರೈಲು ಯಾರ್ಡ್ನಲ್ಲಿ ಬುಧವಾರ ನಡೆದ ಭಯಾನಕ ಗುಂಡಿನ ದಾಳಿಯಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಭಾರತ ಮೂಲದ 36 ವರ್ಷದ ಸಮುದಾಯದ ವ್ಯಕ್ತಿ ಕೂಡ ಸೇರಿದ್ದಾರೆ. ಭಾರತದಲ್ಲಿ ಜನಿಸಿ, ಕ್ಯಾಲಿಫೋರ್ನಿಯಾದ ಯೂನಿಯನ್ ಸಿಟಿಯಲ್ಲಿ ಬೆಳೆದ ತಾಪ್ತೇಜದೀಪ್ ಸಿಂಗ್ ದಾಳಿಯಲ್ಲಿ ಮೃತಪಟ್ಟ ದುರ್ದೈವಿ. ಅವರು ಪತ್ನಿ ಹಾಗೂ ಮೂರು ವರ್ಷದ ಮಗನನ್ನು ಅಗಲಿದ್ದಾರೆ. ವ್ಯಾಲಿ ಟ್ರಾನ್ಸ್ಪೋರ್ಟೇಷನ್ ಅಥಾರಿಟಿಯಲ್ಲಿ (ವಿಟಿಎ) ನಿರ್ವಹಣಾ ಕೆಲಸಗಾರನಾಗಿದ್ದ ಸ್ಯಾಮ್ಯುಯೆಲ್ ಕ್ಯಾಸಿಡಿ (57) ಎಂಬಾತ ಬುಧವಾರ ತನ್ನ ಸಹೋದ್ಯೋಗಿಗಳ ಮೇಲೆಯೇ ನಡೆಸಿದ್ದಾನೆ. ಎಂಟು ಜನರನ್ನು ಕೊಂದು, ಕೆಲವರನ್ನು ಗಾಯಗೊಳಿಸಿದ ಬಳಿಕ ಆತ ತನ್ನ ಮೇಲೆಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಟಿಎದಲ್ಲಿ ಸುಮಾರು ಒಂಬತ್ತು ವರ್ಷಗಳಿಂದ ಹಗುರ ರೈಲು ಆಪರೇಟರ್ ಆಗಿದ್ದ ಸಿಂಗ್, ಹೆಚ್ಚಿನ ಬಲಿಪಶುಗಳು ಪತ್ತೆಯಾದ ಕಟ್ಟಡದಿಂದ ಪ್ರತ್ಯೇಕವಾಗಿರುವ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು. ವಿಟಿಎ ಕಟ್ಟಡದ ಸುರಂಗ ಮಾರ್ಗವೊಂದರ ಬಳಿಕ ಸಿಂಗ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ದಾಳಿಕೋರ ಕ್ಯಾಸಿಡಿ ತಾನು ಕೊಲ್ಲಬೇಕಾದವರನ್ನು ಆಯ್ಕೆ ಮಾಡಿಕೊಂಡು ಗುಂಡುಹಾರಿಸಿದ್ದಾನೆ ಎನ್ನಲಾಗಿದೆ. ವಿಟಿಎದಲ್ಲಿಯೇ ಕೆಲಸ ಮಾಡುತ್ತಿದ್ದ ಸಿಂಗ್ ಅವರ ಭಾವ ಪಿ.ಜೆ. ಬಾತ್, ಸಿಂಗ್ ಹಾಗೂ ದಾಳಿಕೋರ ಇಬ್ಬರೂ ಬೇರೆ ಕಟ್ಟಡದಲ್ಲಿದ್ದರು ಎಂಬುದನ್ನು ಖಚಿತಪಡಿಸಿದ್ದಾರೆ. ಆದರೆ ತನ್ನ ಬಲಿಗಳನ್ನು ದಾಳಿಕೋರ ಮೊದಲೇ ನಿರ್ಧರಿಸಿದ್ದ ಎಂಬುದನ್ನು ಅವರು ಅಲ್ಲಗಳೆದಿದ್ದಾರೆ. ಕಟ್ಟಡದಲ್ಲಿದ್ದ ಇತರರನ್ನು ರಕ್ಷಿಸುವ ಸಲುವಾಗಿ ಸಿಂಗ್ ಅತ್ತ ತೆರಳುತ್ತಿದ್ದ. ಆತ ಎಲ್ಲರಿಗೂ ಸಹಾಯ ಮಾಡುವ, ಕಾಳಜಿ ತೋರಿಸುವ ಮನೋಭಾವದವನು. ಹೀಗೆ ಸಹಾಯಕ್ಕೆ ಧಾವಿಸುವಾಗ ಆತನನ್ನು ಹತ್ಯೆ ಮಾಡಿರಬಹುದು ಎಂದು ಅವರು ತಿಳಿಸಿದ್ದಾರೆ.
from India & World News in Kannada | VK Polls https://ift.tt/3oXnWVS