ಕೊಲಂಬೊ: ದ್ವೀಪರಾಷ್ಟ್ರ ಶ್ರೀಲಂಕಾದ ಕೊಲಂಬೊ ಬೀಚ್ ಸಮೀಪ ಕಳೆದ ವಾರ ಸಿಂಗಪುರ ಮೂಲದ ಸರಕು ಸಾಗಣೆ ಹಡಗಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಬಿಡುಗಡೆಯಾಗಿರುವುದರಿಂದಾಗಿ ಶ್ರೀಲಂಕಾದಲ್ಲಿ ಆಮ್ಲ ಮಳೆಯಾಗುವ ಸಾಧ್ಯತೆ ಇದೆ ಎಂದು ಅಲ್ಲಿನ ಪ್ರಮುಖ ಪರಿಸರ ಸಂಸ್ಥೆ ಎಚ್ಚರಿಕೆ ನೀಡಿದೆ. ಪ್ರತಿಕೂಲ ಹವಾಮಾನದ ಸಂದರ್ಭದಲ್ಲಿ ಹೆಚ್ಚು ಜಾಗರೂಕರಾಗಿರುವಂತೆ ಅದು ಜನರಿಗೆ ಸೂಚಿಸಿದೆ. ಸರಕು ಎಂವಿ ಎಕ್ಸ್-ಪ್ರೆಸ್ ಪರ್ಲ್ ಗುಜರಾತ್ನ ಹಾಜಿರಾದಿಂದ ಕೊಲಂಬೊಕ್ಕೆ ಕಾಸ್ಮೆಟಿಕ್ಗಳ ಕಚ್ಚಾ ವಸ್ತುಗಳನ್ನು ಹಾಗೂ ಕೆಮಿಕಲ್ಗಳನ್ನು ಕೊಂಡೊಯ್ಯುತ್ತಿತ್ತು. ಕೊಲಂಬೊ ಕರಾವಳಿಯಿಂದ 9.5 ಮೈಲು ದೂರವಿದ್ದಾಗ ಬೆಂಕಿ ಹೊತ್ತಿಕೊಂಡಿದೆ. ಈ ಹಡಗಿನ ಟ್ಯಾಂಕ್ಗಳಲ್ಲಿ 325 ಮೆಟ್ರಿಕ್ ಟನ್ನಷ್ಟು ಇಂಧನದ ಜತೆಗೆ, 25 ಟನ್ಗಳಷ್ಟು ಅಪಾಯಕಾರಿ ನೈಟ್ರಿಕ್ ಆಸಿಡ್ನ 1486 ಕಂಟೇನರ್ಗಳನ್ನು ಸಾಗಿಸುತ್ತಿತ್ತು. 'ಎಂವಿ ಎಕ್ಸ್-ಪ್ರೆಸ್ ಪರ್ಲ್ ಹಡಗಿನಿಂದ ಹೊರಸೂಸಲಾದ ಸಾರಜನಕದ ಡೈಆಕ್ಸೈಡ್ ಭಾರಿ ಪ್ರಮಾಣದಲ್ಲಿರುವುದನ್ನು ನಾವು ಗಮನಿಸಿದ್ದೇವೆ. ಮಳೆಯ ಅವಧಿಯಲ್ಲಿ ನೈಟ್ರೋಜನ್ ಡೈ ಆಕ್ಸೈಡ್ ಹೊರುಗುಳುವಿಕೆ ಆಸಿಡ್ ಮಳೆಗೆ ಕಾರಣವಾಗಬಹುದು' ಎಂದು ಕಡಲು ಪರಿಸರ ರಕ್ಷಣೆ ಪ್ರಾಧಿಕಾರದ ಅಧ್ಯಕ್ಷೆ ದರ್ಶಿನಿ ಲಹಂದಪುರ ತಿಳಿಸಿದ್ದಾರೆ. ಹಡಗಿನ ಬೆಂಕಿಯ ತೀವ್ರತೆಯನ್ನು ನಿಯಂತ್ರಣಕ್ಕೆ ತರಲಾಗಿದೆ. ಭಾರತ ಕರಾವಳಿ ಕಾವಲು ಪಡೆಯ ಹಡಗುಗಳು ಕೂಡ ಬೆಂಕಿ ನಂದಿಸುವ ಪ್ರಯತ್ನಕ್ಕೆ ನೆರವಾಗಿವೆ. ಭಾರತದ ಐಸಿಜಿ ವೈಭವ್, ಐಸಿಜಿ ಡಾರ್ನಿಯರ್ ಮತ್ತು ಟಗ್ ವಾಟರ್ ಲಿಲ್ಲಿಗಳು ಬೆಂಕಿ ನಂದಿಸುವ ಕಾರ್ಯಕ್ಕೆ ಧಾವಿಸಿವೆ. ಜತೆಗೆ ಭಾರತದ ವಿಶೇಷ ಮಾಲಿನ್ಯ ಪ್ರತಿಕ್ರಿಯಾ ಹಡಗು ಸಮುದ್ರ ಪ್ರಹಾರಿ ಕೊಲಂಬೊ ಬೀಚ್ ತಲುಪಿದ್ದು, ಅಲ್ಲಿನ ಮಾಲಿನ್ಯ ನಿಯಂತ್ರಣ ಕ್ರಮಗಳಿಗೆ ಸಹಾಯ ಮಾಡಲಿದೆ. ಭಾರತ, ಚೀನಾ, ಫಿಲಿಪ್ಪೀನ್ಸ್ ಮತ್ತು ರಷ್ಯಾದ ಪ್ರಜೆಗಳನ್ನು ಒಳಗೊಂಡಂತೆ 25 ಸಿಬ್ಬಂದಿ ಹಡಗಿನಲ್ಲಿದ್ದರು. ಅವರೆಲ್ಲರನ್ನೂ ಮಂಗಳವಾರ ರಕ್ಷಿಸಲಾಗಿತ್ತು.
from India & World News in Kannada | VK Polls https://ift.tt/3fuGSrS