ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ರಷ್ಯಾ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕುತ್ತಲೇ ಇದ್ದಾರೆ. ಅದರಲ್ಲೂ ರಷ್ಯಾ ಕಳೆದ ಎರಡು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿದೆ ಎಂಬ ಗುಮಾನಿ ಅವರನ್ನು ತೀವ್ರವಾಗಿ ಕೆರಳಿಸಿದೆ. ಅಮೆರಿಕ-ರಷ್ಯಾ ನಡುವಿನ ಹಳಸಿರುವ ಸಂಬಂಧ ಸುಧಾರಣೆಗೆ ಜೋ ಬೈಡೆನ್ ಆಡಳಿತ ಒತ್ತು ನೀಡುತ್ತಿದ್ದು, ಉಭಯ ದೇಶಗಳ ನಡುವೆ ಮತ್ತಷ್ಟು ರಾಜತಾಂತ್ರಿಕ ಬಿರುಕು ಮೂಡದಂತೆ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಆದರೆ ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ಕುರಿತು ಸದ್ಭಾವನೆ ಹೊಂದಿರದ ಜೋ ಬೈಡೆನ್, ಪುಟಿನ್ ಆಡಳಿತ ವೈಖರಿಯನ್ನು ಟೀಕಿಸುತ್ತಲೇ ಇದ್ದಾರೆ. ಅದರಂತೆ ನಿನ್ನೆ(ಏ.15-ಗುರುವಾರ) ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲೂ ಪುಟಿನ್ ವಿರುದ್ಧ ಜೋ ಬೈಡೆನ್ ಕಿಡಿಕಾರಿದರು. ರಷ್ಯಾ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುವುದನ್ನು ಮುಂದುವರೆಸಿದರೆ, ಅದಕ್ಕೆ ಪ್ರತಿಯಾಗಿ ಕ್ರಮಗಳನ್ನು ಕೈಗೊಳ್ಳಲು ನಾವು ಸಿದ್ಧ. ನಾವು ಎಂತಹ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ರಷ್ಯಾದ ನಡೆ ಮೇಲೆ ಅವಲಂಬಿತವಾಗಿದೆ ಎಂದು ಬೈಡೆನ್ ಮಾರ್ಮಿಕವಾಗಿ ನುಡಿದಿದ್ದಾರೆ. ಇತಿಹಾಸದುದ್ದಕ್ಕೂ ನಮ್ಮ ಎರಡು ದೇಶಗಳು ಉದ್ವಿಗ್ನತೆಯನ್ನು ನಿರ್ವಹಿಸುವ ಮಾರ್ಗಗಳನ್ನು ಕಂಡುಕೊಳ್ಳಲು ಮತ್ತು ಉದ್ವಿಗ್ನತೆ ಹೆಚ್ಚಾಗದಂತೆ ತಡೆಯಲು ಸಮರ್ಥವಾಗಿವೆ. ಈಗಲೂ ಈ ಬಿಕ್ಕಟ್ಟನ್ನು ನಿರ್ವಹಿಸಲು ನಾವು ಸಮರ್ಥರಿದ್ದೇವೆ ಎಂಬ ಭಾವನೆ ನನ್ನದು ಎಂದು ಬೈಡೆನ್ ಹೇಳಿದ್ದಾರೆ. ಇನ್ನು ಅಮೆರಿಕ-ರಷ್ಯಾ ನಡುವಿನ ಹಗೆತನ ಶಮನಕ್ಕೆ ಪರಸ್ಪರ ನೇರವಾಗಿ ಭೇಟಿಯಾಗುವ ಪ್ರಸ್ತಾವ ಮುಂದಿಟ್ಟಿರುವ ಜೋ ಬೈಡೆನ್, ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ಈ ಕುರಿತು ಸಂದೇಶವನ್ನೂ ರವಾನಿಸಿದ್ದಾರೆ. ಸಮಸ್ಯೆ ಬಗೆಹರಿಸಲು ನೇರಾನೇರ ಭೇಟಿಯೊಂದೇ ಮಾರ್ಗ ಎಂದು ಕಳೆದ ವಾರ ನಡೆದ ದೂರವಾಣಿ ಸಂಭಾಷಣೆಯಲ್ಲಿ ಪುಟಿನ್‌ಗೆ ಹೇಳಿದ್ದಾಗಿ ಬೈಡೆನ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪುಟಿನ್ ಆಡಳಿತದ ಪ್ರತಿಕ್ರಿಯೆಗಾಗಿ ಕಾಯುತ್ತಿರುವುದಾಗಿ ಬೈಡೆನ್ ಹೇಳಿದ್ದಾರೆ. ಉಕ್ರೇನ್ ಗಡಿಯಲ್ಲಿ ರಷ್ಯಾ ತನ್ನ ಆಕ್ರಮಣಕಾರಿ ವರ್ತನೆಗೆ ಕಡಿವಾಣ ಹಾಕಬೇಕು. ಉದ್ವಿಗ್ನತೆ ಹೀಗೆಯೇ ಮುಂದುವರೆದರೆ ಅಮೆರಿಕ ಕಠಿಣ ಕ್ರಮಗಳನ್ನು ಕೈಗೊಳ್ಳು ಹಿಂಜರಿಯುವುದಿಲ್ಲ ಎಂದು ಬೈಡೆನ್ ಎಚ್ಚರಿಸಿದ್ಧಾರೆ. ಒಟ್ಟಿನಲ್ಲಿ ಬೈಡೆನ್-ಪುಟಿನ್ ನಡುವಿನ ವೈಮನಸ್ಸು ಅಮೆರಿಕ-ರಷ್ಯಾ ನಡುವೆ ಮತ್ತಷ್ಟು ಕಂದರ ಸೃಷ್ಟಿಸುವುದು ಖಚಿತ ಎನ್ನಲಾಗಿದ್ದು, ಈ ಕುರಿತು ಉಭಯ ದೇಶಗಳ ನಾಯಕರು ಏನು ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
from India & World News in Kannada | VK Polls https://ift.tt/2PZ8ZFX