ಸುಂಟಿಕೊಪ್ಪ: ಮನೆಯಲ್ಲಿ ಒಂಟಿಯಾಗಿದ್ದ ಕಾಫಿ ಬೆಳೆಗಾರ ಮಹಿಳೆ ಮನೆಗೆ ಮೂವರು ಅಪರಿಚಿತರು ನುಗ್ಗಿ ಅವರ ಬಾಯಿಗೆ ಸೀರೆ ತುರುಕಿ ಕತ್ತು ಹಿಸುಕಿ ಪ್ರಜ್ಞೆ ತಪ್ಪಿಸಿ ಚಿನ್ನಾಭರಣ ಮತ್ತು ನಗದು ದೋಚಿದ್ದಾರೆ. ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಹೋಬಳಿಯ ಹರದೂರು ಪಂಚಾಯಿತಿಯ ಸಮೀಪದ ಹಾರ್ಬೈಲ್ ಗ್ರಾಮದ ದಿವಂಗತ ಕುಂಞಣ್ಣ ರೈ ಅವರ ಪತ್ನಿ, ಹಿರಿಯ ನಾಗರಿಕ ಮಹಿಳೆ ಸರೋಜಿನಿ ಅವರು ತನ್ನ 4 ಎಕರೆ ಕಾಫಿ ತೋಟ ನೋಡಿಕೊಂಡು ಏಕಾಂಗಿಯಾಗಿ ಜೀವನ ನಡೆಸುತ್ತಿದ್ದರು. ಇವರ ಮಗ ಗುತ್ತಿಗೆದಾರ ಪುರುಷೋತ್ತಮ ರೈ ಕುಶಾಲನಗರದಲ್ಲಿ ವಾಸವಾಗಿದ್ದು, ಆಗಿಂದಾಗ್ಗೆ ತಾಯಿಯ ಮನೆಗೆ ಬಂದು ಹೋಗುತ್ತಿದ್ದರು ಎನ್ನಲಾಗಿದೆ. ಸರೋಜಿನಿ ಅವರ ಹಿರಿಯ ಮಗ ನಿಧನ ಹೊಂದಿದ್ದಾರೆ. ಒಂಟಿ ಮಹಿಳೆ ಮನೆಯಲ್ಲಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಏ. 27 ರಂದು ಸಂಜೆ 7.30ಕ್ಕೆ ನಡೆಸಲು ತೀರ್ಮಾನಿಸಿದ್ದಾರೆ. ಸರೋಜಿನಿಯವರು ಮನೆಯ ಹಿಂಭಾಗದಲ್ಲಿಒಣಗಲು ಹಾಕಿದ್ದ ಬಟ್ಟೆಯನ್ನು ತೆಗೆದುಕೊಂಡು ಮನೆ ಒಳಗೆ ಪ್ರವೇಶಿಸುವಾಗ ದಿಢೀರನೆ ಹಿಂಬಾಗಿಲಿನಿಂದ ಮೂವರು ಅಪರಿಚಿತರು ಅವರನ್ನು ಹಿಡಿದು ಮನೆಯೊಳಗೆ ಎಳೆದೊಯ್ದಿದ್ದಾರೆ. ಒಬ್ಬಾತ ಅವರ ಸೀರೆಯ ಸೆರಗನ್ನು ಬಾಯಿಗೆ ತುರುಕಿದರೆ, ಮತ್ತೊಬ್ಬ ಅವರ 2 ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ಮತ್ತೊಬ್ಬ ಅವರ ಕುತ್ತಿಗೆ ಹಿಸುಕಿ ಪ್ರಜ್ಞೆ ತಪ್ಪಿಸಿದ್ದಾನೆ ಎನ್ನಲಾಗಿದೆ. ನಂತರ ಬೀರುವಿನ ಬೀಗ ಮುರಿದು 32 ಗ್ರಾಂ. ತೂಕದ ಚಿನ್ನದ ಸರ, 12 ಗ್ರಾಂನ ಚಿನ್ನದ 4 ಬಳೆ, 2 ಗ್ರಾಂ.ನ 1 ಉಂಗುರ ಹಾಗೂ ಬೀರುವಿನಲ್ಲಿದ್ದ 35,000 ರೂ. ನಗದು ಹಾಗೂ ಒಟ್ಟು ಚಿನ್ನಾಭರಣಗಳ ಮೊತ್ತ 3,90,000 ಹಾಗೂ 35,000 ರೂ.ನಗದನ್ನು ಅಪಹರಿಸಿ ಪರಾರಿಯಾಗಿದ್ದಾರೆ ಎಂದು ಪುರುಷೋತ್ತಮ ರೈ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸೋಮವಾರಪೇಟೆ ತಾಲೂಕು ಡಿವೈಎಸ್ಪಿ ಶೈಲೇಂದ್ರ, ವೃತ್ತನಿರೀಕ್ಷಕ ಮಹೇಶ್, ಸುಂಟಿಕೊಪ್ಪ ಠಾಣಾಧಿಕಾರಿ ಪುನೀತ್ ಹಾಗೂ ವೆಂಕಟರಮಣ, ಬೆರಳಚ್ಚು ತಜ್ಞರು ಹಾಗೂ ಶ್ವಾನದಳದವರು ತೆರಳಿ ಪರಿಶೀಲಿಸಿದರು.
from India & World News in Kannada | VK Polls https://ift.tt/2Sgrwyh