ಹೊಸದಿಲ್ಲಿ: ಮಾರಕ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಜಾಗತಿಕ ಬೆಂಬಲ ದೊರೆತಿದ್ದು, ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ ಸೇರಿದಂತೆ ಹಲವು ದೇಶಗಳು ನೆರವಿನ ಘೋಷಣೆ ಮಾಡಿವೆ. ಅದರಂತೆ 100 ವೆಂಟಿಲೇಟರ್ಗಳು ಮತ್ತು 95 ಆಮ್ಲಜನಕ ಸಾಂದ್ರಕಗಳು ಸೇರಿದಂತೆ, ಬ್ರಿಟನ್ನಿಂದ ಭಾರತಕ್ಕೆ ಕೋವಿಡ್ ವೈದ್ಯಕೀಯ ಸಾಮಗ್ರಿಗಳ ಮೊದಲ ಸಾಗಣೆ ಆಗಮಿಸಿದೆ. ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಭಾರತದ ಕೋವಿಡ್ ಹೋರಾಟಕ್ಕೆ ಮೊದಲ ಅಂತಾರಾಷ್ಟ್ರೀಯ ಸಹಕಾರ ಬಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕೊರೊನಾ ವೈರಸ್ ವಿರುದ್ಧ ಸ್ವತಃ ಹೋರಾಡುತ್ತಿರುವ ಬ್ರಿಟನ್, ಬಿಕ್ಕಟ್ಟಿನ ಸಂದರ್ಭದಲ್ಲೂ ಭಾರತಕ್ಕೆ ವೈದ್ಯಕೀಯ ನೆರವು ಕಳುಹಿಸಿರುವುದು ಸಂತಸದ ಸಂಗತಿ. ಈ ಹಿಂದೆ ಕೂಡ ಬ್ರಿಟನ್ ನೆರವಿಗೆ ಧಾವಿಸಿತ್ತು. ಮುಂದಿನ ಒಂದು ವಾರದ ಅವಧಿಯಲ್ಲಿ ಭಾರತಕ್ಕೆ ಒಟ್ಟು 495 ಆಮ್ಲಜನಕ ಸಾಂದ್ರಕಗಳು, 120 ವೆಂಟಿಲೇಟರ್ಗಳು ಮತ್ತು 20 ಹಸ್ತಚಾಲಿತ ವೆಂಟಿಲೇಟರ್ಗಳು ಹಾಗೂ ಇತರೆ ವೈದ್ಯಕೀಯ ಉಪಕರಣಗಳನ್ನು ರವಾನಿಸಲಾಗುವುದು ಎಂದು ಹೊಸದಿಲ್ಲಿಯಲ್ಲಿರುವ ಬ್ರಿಟಿಷ್ ಹೈಕಮಿಷನ್ ಸ್ಪಷ್ಟಪಡಿಸಿದೆ. ಈ ಉಪಕರಣಗಗಳನ್ನು ಒಟ್ಟು 9 ಪ್ರತ್ಯೇಕ ಸರಕು ವಿಮಾನದಲ್ಲಿ ಭಾರತಕ್ಕೆ ರವಾನಿಸಲಾಗುವುದು ಎಂದು ಬ್ರಿಟನ್ ಹೈಕಮಿಷನ್ ತಿಳಿಸಿದ್ದು, ಒಂದೊಂದಾಗಿ ಈ ವಿಮಾನಗಳು ಭಾರತಕ್ಕೆ ಬಂದಿಳಿಯಲಿವೆ ಎಂದು ಮಾಹಿತಿ ನೀಡಿದೆ. ಒಟ್ಟಿನಲ್ಲಿ ಭಾಋತದ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮೊದಲ ಅಂತಾರಾಷ್ಟ್ರೀಯ ಸಹಾಯ ಬಂದಿದ್ದು, ಮುಂಧಿನ ದಿನಗಳಲ್ಲಿ ಮತ್ತಷ್ಟು ದೇಶಗಳು ಭಾರತಕ್ಕೆ ನೆರವು ನೀಡಲಿವೆ ಎಂಬುದು ವಿಶೇಷ.
from India & World News in Kannada | VK Polls https://ift.tt/3gGrtWD