ಬೆಂಗಳೂರು: ಕೊರೊನಾ ಹಾವಳಿ ತೀವ್ರಗೊಂಡಿದೆ. ಕಳೆದೊಂದು ವಾರದಲ್ಲಿ ಹೊಸ ಪ್ರಕರಣದಲ್ಲಿ ಶೇ.62ರಷ್ಟು ಏರಿಕೆಯಾಗಿದೆ. ಆದರೆ ಸೋಂಕಿತರಾದ ಎಲ್ಲರೂ ಗಾಬರಿಬಿದ್ದು ಆಸ್ಪತ್ರೆಗೆ ದಾಖಲಾಗುವುದು ಬೇಕಿಲ್ಲ. ಶೇ.81ರಷ್ಟು ಪ್ರಕರಣಗಳಲ್ಲಿ ಸೌಮ್ಯ ಸ್ವಭಾವದ ಜ್ವರ ಮತ್ತಿತರ ಲಕ್ಷಣಗಳು ಅಥವಾ ಸೋಂಕಿನ ಲಕ್ಷಣಗಳೇ ಇರುವುದಿಲ್ಲ. ಹೀಗಾಗಿ 14 ದಿನಗಳ ಕಾಲ ಅಗತ್ಯ ಔಷಧೋಪಚಾರದೊಂದಿಗೆ ಮನೆಯಲ್ಲಿಯೇ ಪ್ರತ್ಯೇಕವಾಗಿ ವಾಸವಿರುವುದು ಅತ್ಯುತ್ತಮ ಮಾರ್ಗ. ಮತ್ತು ಹೋಮ್ ಐಸೊಲೇಷನ್ ನಡುವೆ ಸಣ್ಣ ವ್ಯತ್ಯಾಸವಿದ್ದು, ಈ ಸಂಬಂಧ ಎಂತಹವರು ಯಾವ ಮಾರ್ಗ ಆಯ್ಕೆ ಮಾಡಿಕೊಳ್ಳಬೇಕೆಂಬ ಸಂಕ್ಷಿಪ್ತ ವಿವರಣೆ ಇಲ್ಲಿದೆ. ಹೋಮ್ ಐಸೊಲೇಷನ್ ಯಾರಿಗೆ ಅಗತ್ಯ? ಸ್ವಲ್ಪ ಜ್ವರ, ಆಮ್ಲಜನಕ ಮಟ್ಟ 95 ಅಥವಾ ಅದಕ್ಕೂ ಹೆಚ್ಚು ಇರುವ ಸೋಂಕಿತರು ಮನೆಯಲ್ಲಿಇರುವುದು ಉತ್ತಮ. ವಾಸಕ್ಕೆ ಪ್ರತ್ಯೇಕ ವ್ಯವಸ್ಥೆ ಇರಬೇಕು. ಸೋಂಕಿತನ ಮೇಲೆ ನಿಗಾ ಇಡಲು ಒಬ್ಬ ವ್ಯಕ್ತಿ ಲಭ್ಯ ಇರಬೇಕು. ವೈದ್ಯರ ನಿರಂತರ ಸಂಪರ್ಕ ಇರಬೇಕು. 60 ವರ್ಷ ದಾಟಿದವರು ಅಥವಾ ಗಂಭೀರ ಕಾಯಿಲೆ ಇರುವವರು ವೈದ್ಯರ ಸಲಹೆ ಪಡೆದು ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಹೋಮ್ ಕ್ವಾರಂಟೈನ್ ಯಾರಿಗೆ ಬೇಕು? ಈ ಆಯ್ಕೆಗೆ ಒಳಪಡುವವರು ವಾಸ್ತವದಲ್ಲಿ ಸೋಂಕಿತರಲ್ಲ. ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದಿದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಮನೆಯಲ್ಲಿಯೇ 14 ದಿನ ಪ್ರತ್ಯೇಕವಾಗಿ ವಾಸವಿರುವುದು ಅಗತ್ಯ. ವರದಿ ನೆಗೆಟಿವ್ ಬರುವವರೆಗೆ ಅಥವಾ 14 ದಿನಗಳ ಕಾಲವೂ ಯಾವುದೇ ಸೌಮ್ಯ ಸ್ವರೂಪದ ರೋಗ ಲಕ್ಷಣಗಳೂ ಕಂಡುಬರದಿದ್ದರೆ ಅವರು ನಂತರ ವೈದ್ಯರ ಸಲಹೆ ಮೇರೆಗೆ ಮುಕ್ತವಾಗಿ ಬೆರೆಯಬಹುದು. ಯಾವೆಲ್ಲಾ ಚಿಕಿತ್ಸಾ ವಿಧಾನ ಅನುಸರಿಸಬೇಕು?ವೈದ್ಯರ ಸೂಚನೆ ಮೇರೆಗೆ ಕಾಲಕಾಲಕ್ಕೆ ಔಷಧಗಳನ್ನು ಸೇವಿಸಬೇಕು. ದಿನಕ್ಕೆ ನಾಲ್ಕೈದು ಬಾರಿ ಬಿಸಿ ನೀರು ಸೇವನೆ. ಉಗುರು ಬೆಚ್ಚಗಿನ ನೀರಿನಲ್ಲಿ ದಿನಕ್ಕೆ ಎರಡು ಬಾರಿ ಬಾಯಿ ಮುಕ್ಕಳಿಸಬೇಕು. ಪಲ್ಸ್ ಆಕ್ಸಿಮೀಟರ್‌ನಿಂದ ಆಮ್ಲಜನಕ ಪರೀಕ್ಷಿಸಿಕೊಳ್ಳುವ ಬಗೆ ಹೇಗೆ? ತರಾತುರಿಯಲ್ಲಿಆಮ್ಲಜನಕ ಪರೀಕ್ಷೆ ಮಾಡಬಾರದು. ಮೊದಲು ಆರು ನಿಮಿಷ ವಾಕ್ ಮಾಡಿ ಆಕ್ಸಿಜನ್ ಮಟ್ಟ ಗಮನಿಸಿಕೊಳ್ಳಿ. ಪುನಃ 6 ನಿಮಿಷ ವಾಕ್ ಮಾಡಿ ಮತ್ತೆ ಪರೀಕ್ಷಿಸಿಕೊಳ್ಳಿ. ಆಗ ಆಮ್ಲಜನಕದ ಮಟ್ಟ 6 ಪಾಯಿಂಟ್ ಇಳಿಕೆಯಾಗುತ್ತಿದ್ದರೆ, ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಸೋಂಕಿನ ಆರಂಭಿಕ ಲಕ್ಷಣಗಳೇನು? ಸೌಮ್ಯ ಸ್ವರೂಪದ ಜ್ವರ, ಉಸಿರಾಟದಲ್ಲಿ ಸಮಸ್ಯೆ, ಎದೆಯೂತ, ಘನ/ದ್ರವ ರೂಪದ ಆಹಾರ ಸೇರದೇ ಇರುವುದು, ನಾಲಿಗೆ ರುಚಿಯ ಸಂವೇದನೆ ಕಳೆದುಕೊಳ್ಳುವುದು, ವಾಸನೆ ಬಾರದಿರುವುದು, ವಾಂತಿ, ಹೊಟ್ಟೆ ತೊಳಸಿದಂತಾಗುವುದು, ನಿದ್ದೆ ಮಂಪರು, ಆಲಸ್ಯತನ, ಚರ್ಮ, ತುಟಿ, ಉಗುರಿನ ಹಿಂಭಾಗ ನೀಲಿ ಬಣ್ಣಕ್ಕೆ ತಿರುಗುವುದು.
from India & World News in Kannada | VK Polls https://ift.tt/3dRbPFP