ಹೊಸದಿಲ್ಲಿ: ಕೊರೊನಾ ಎರಡನೇ ಅಲೆಯ ತೀವ್ರ ಬಿಕ್ಕಟ್ಟು ಎದುರಿಸುತ್ತಿರುವ ಭಾರತಕ್ಕೆ ಅಂತಾರಾಷ್ಟ್ರೀಯ ಬೆಂಬಲದ ಮಹಾಪೂರವೇ ಹರಿದುಬಂದಿದೆ. ಅಮೆರಿಕವು ಅಗತ್ಯ ವೈದ್ಯಕೀಯ ಸಲಕರಣೆ ಹಾಗೂ ಲಸಿಕೆ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳನ್ನು ಒದಗಿಸುವುದಾಗಿ ಭರವಸೆ ನೀಡಿದೆ. ಬ್ರಿಟನ್, ಇಸ್ರೇಲ್, ಜರ್ಮನಿ, ಫ್ರಾನ್ಸ್ ಸೇರಿದಂತೆ ಹಲವಾರು ದೇಶಗಳು ಭಾರತದ ಬೆನ್ನಿಗೆ ನಿಂತಿವೆ. ಬ್ರಿಟನ್ 140 ವೆಂಟಿಲೇಟರ್, 495 ಉಪಕರಣಗಳನ್ನು ರವಾನಿಸುವುದಾಗಿ ತಿಳಿಸಿದೆ. ಇಸ್ರೇಲ್, ಜರ್ಮನಿ, ಫ್ರಾನ್ಸ್ ಕೂಡ ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ಪೂರೈಸಲು ಮುಂದಾಗಿವೆ. ಇದರ ನಡುವೆ, ಸೋಂಕಿನಿಂದ ಕಂಗೆಟ್ಟಿರುವ ಜನರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನೂ ಯುಎಇ ಮಾಡಿದೆ. ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ ಖಲೀಫಾವನ್ನು ಲೇಜರ್ ಬೆಳಕಿನ ಮೂಲಕ ಭಾರತದ ತ್ರಿವಣ ಧ್ವಜವನ್ನು ಮೂಡಿಸಿ ಸ್ನೇಹದ ಬೆಂಬಲ ಸೂಚಿಸಿದೆ. 'ಸ್ಟ್ರಾಂಗ್ ಇಂಡಿಯಾ' ಹ್ಯಾಶ್‌ಟ್ಯಾಗ್‌ನಡಿ ತ್ರಿವರ್ಣ ಧ್ವಜದ ಶೃಂಗಾರದ ಕಟ್ಟಡದ ಚಿತ್ರಗಳ 23 ಸೆಕೆಂಡ್‌ನ ವಿಡಿಯೊದೊಂದಿಗೆ ಯುಎಇ ವಿದೇಶಾಂಗ ಇಲಾಖೆ ಟ್ವೀಟ್ ಮಾಡಿದೆ. ಕಚ್ಚಾ ವಸ್ತು ನೀಡುತ್ತೇವೆ ಎಂದ ! ಕೋವಿಶೀಲ್ಡ್ ಲಸಿಕೆ ತಯಾರಿಸಲು ಭಾರತೀಯರಿಗೆ ತುರ್ತಾಗಿ ಬೇಕಾದ ಕಚ್ಚಾ ಸಾಮಗ್ರಿ ತಕ್ಷಣ ಒದಗಿಸಲಾಗುವುದು ಎಂದು ಅಮೆರಿಕ ತಿಳಿಸಿದೆ. ಈ ಬಗ್ಗೆ ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಮಾಹಿತಿ ನೀಡಿದ್ದು, ಯುನೈಟೆಡ್ ಸ್ಟೇಟ್ಸ್ ಭಾರತದ ಜನರೊಂದಿಗೆ ಒಗ್ಗಟ್ಟಿನಲ್ಲಿ ನಿಂತಿದೆ ಮತ್ತು ನಾವು ಹೆಚ್ಚಿನ ಸರಬರಾಜು ಮತ್ತು ಸಂಪನ್ಮೂಲಗಳನ್ನು ಭಾರತಕ್ಕೆ ನಿಯೋಜಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
from India & World News in Kannada | VK Polls https://ift.tt/3vhibUW