ಬರೇಲಿ: ಕೊರೊನಾ ಎಂಬ ಮಹಾಮಾರಿಯ ವಿರುದ್ಧ ದೇಶ ದಿಟ್ಟತನದಿಂದ ಹೋರಾಡುತ್ತಿದೆ. ಅದರಲ್ಲೂ ಕೊರೊನಾ ವಿರುದ್ಧದ ಹೋರಾಟದಲ್ಲಿ ದೇಶದ ವೈದ್ಯಕೀಯ ಸಮುದಾಯದ ಸೇವೆ ಅತ್ಯಂತ ಶ್ಲಾಘನೀಯ. ಆದರೆ ಈ ನಿರಂತರ ಸೇವೆ ವೈದ್ಯಕೀಯ ಸಮುದಾಯದ ಮನೋ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬ ಅನುಮಾನವೂ ಕಾಡುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಉತ್ತರ ಪ್ರದೇಶದ ಆಸ್ಪತ್ರೆಯೊಂದರ ಡಾಕ್ಟರ್ ಮತ್ತು ನರ್ಸ್ ಪರಸ್ಪರ ಕೈ ಕೈ ಮಿಲಾಯಿಸಿದ್ದು, ಇವರಿಬ್ಬರ ನಡುವಿನ ಜಗಳಕ್ಕೆ ಅವಿಶ್ರಾಂತ ದುಡಿಮೆಯೇ ಕಾರಣ ಎನ್ನಲಾಗಿದೆ. ಹೌದು, ಉತ್ತರಪ್ರದೇಶದ ರಾಂಪುರ್ ಜಿಲ್ಲಾಸ್ಪತ್ರೆಯ ವೈದ್ಯ ಹಾಗೂ ನರ್ಸ್ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದ್ದು, ಇಬ್ಬರೂ ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಕೋವಿಡ್ ರೋಗಿಯೊಬ್ಬ ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ಆತನ ಮರಣ ಪ್ರಮಾಣಪತ್ರ ನೀಡುವಂತೆ ಆತನ ಸಂಬಂಧಿಕರು ನರ್ಸ್ ಬಳಿ ಕೋರಿದ್ದರು. ಆಗ ನರ್ಸ್ ವೈದ್ಯರ ಕೋಣೆಗೆ ತೆರಳಿ ಮೃತನ ಮರಣ ಪ್ರಮಾಣ ಪತ್ರಕ್ಕೆ ಸಹಿ ಹಾಕಬೇಕೆಂದು ಮನವಿ ಮಾಡಿದ್ದಳು. ಆದರೆ ಮೊದಲು ಈ ಕುರಿತು ಲಿಖಿತ ಮನವಿ ಪತ್ರ ತೆಗೆದುಕೊಂಡು ಬರುವಂತೆ ವೈದ್ಯರು ಆ ನರ್ಸ್ಗೆ ಸೂಚಿಸಿದ್ದಾರೆ. ಇದರಿಂದ ರೋಸಿ ಹೋದ ನರ್ಸ್, ವೈದ್ಯರೊಂದಿಗೆ ಜಗಳಕ್ಕೆ ಇಳಿದಿದ್ದಾಳೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿ ನರ್ಸ್, ವೈದ್ಯರ ಕೆನ್ನೆಗೆ ಬಾರಿಸಿದ್ದಾಳೆ. ಇದರಿಂದ ರೊಚ್ಚಿಗೆದ್ದ ಡಾಕ್ಟರ್ ಕೂಡ ಆಕೆಯ ಬೆನ್ನ ಮೇಲೆ ಜೋರಾಗಿ ಹೊಡೆದಿದ್ದಾನೆ. ಇಡೀ ಘಟನೆ ನೆರೆದವರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈದ್ಯರು ಹಾಗೂ ನರ್ಸ್ ಪರಸ್ಪರ ಕೈಕೈ ಮಿಲಾಯಿಸಿದ ದೃಶ್ಯ ಭಾರೀ ವೈರಲ್ ಆಗಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಮ್ಜೀ ಮಿಶ್ರಾ ವಿವರಣೆ ಪಡೆದಿದ್ದು, ಅತಿಯಾದ ಕೆಲಸದಿಂದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಒಳಗಾಗಿರುವುದಾಗಿ ವೈದ್ಯ ಮತ್ತು ನರ್ಸ್ ಅಲವತ್ತುಕೊಂಡಿದ್ದಾರೆ ಎನ್ನಲಾಗಿದೆ.
from India & World News in Kannada | VK Polls https://ift.tt/2PuIt6R