ಹಿರೇಕೆರೂರು: ದೇಶದಲ್ಲಿ ಕೊರೊನಾ ಸೋಂಕು ತೀವ್ರ ಪ್ರಮಾಣದಲ್ಲಿ ಹರಡುತ್ತಿದೆ. ರಾಜ್ಯದಲ್ಲೂ ಸೋಂಕಿನ ಸುನಾಮಿ ಅಪ್ಪಳಿಸುತ್ತಿದೆ. ಈ ಮಧ್ಯೆ ರಾಜ್ಯದಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದ್ದು, ಇದರಿಂದ ದಿನಗೂಲಿ ಕಾರ್ಮಿಕರು, ಬಡವರು ತೀವ್ರ ಸಮಸ್ಯೆ ಎದುರಿಸಲಿದ್ದಾರೆ. ಇದನ್ನು ಅರಿತೋ ಏನೋ ಶಾಸಕ ಹಾಗೂ ಕೃಷಿ ಸಚಿವ ಬಿ.ಸಿ ಪಾಟೀಲ್ ತಮ್ಮ ಕ್ಷೇತ್ರದ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಗುಡ್ನ್ಯೂಸ್ ನೀಡಿದ್ದಾರೆ. ಹೌದು,ತಮ್ಮ ಕ್ಷೇತ್ರದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಬಡವರು ಕೋವಿಡ್-19 ಸೋಂಕಿತರಾಗಿ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಮುಂದಾದರೆ ಅಂತವರಿಗೆ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಅವರು ಘೋಷಿಸಿದ್ದಾರೆ. ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ ಜಿಲ್ಲೆಯ ಹಿರೇಕೆರೂರು ಮತ್ತು ರಟ್ಟಿಹಳ್ಳಿ ತಾಲೂಕು ಕ್ಷೇತ್ರದ ಬಿಪಿಎಲ್ ಕಾರ್ಡ್ ಹೊಂದಿದವರು ಜಿಲ್ಲೆಯ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ಪಡೆಯಲು ಮುಂದಾದರೆ ಅಂತವರು ಚಿಕಿತ್ಸೆ ಪಡೆದ ಬಳಿಕ ಗುರುತಿನ ಚೀಟಿ, ಬಿಪಿಎಲ್ ಕಾರ್ಡ್ ಹಾಗೂ ಆಸ್ಪತ್ರೆ ಬಿಲ್ ನೀಡಿದರೆ ವೆಚ್ಚ ಭರಿಸುತ್ತೇನೆ ಎಂದು ಬಿ.ಸಿ.ಪಾಟೀಲ್ ಹೇಳಿದ್ದಾರೆ. ಮಹಾಮಾರಿ ಕೊರೊನಾ ವಿಶ್ವವ್ಯಾಪಿಯಾಗಿ ಹೆಚ್ಚು ಸೋಂಕು ಹರಡುತ್ತಿದೆ. ಸರ್ಕಾರ ಕೂಡ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಜನರು ಸಹ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡಬೇಕು. ಕೊರೊನಾ ಅಂದರೆ ಭಯಬೇಡ, ಅಗತ್ಯವಾದ ಸುರಕ್ಷತಾ ಕ್ರಮಗಳನ್ನು ನಾವು ಪಾಲನೆ ಮಾಡೋಣ ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನು ನಡೆಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಲ್ಲದೇ ಅನೇಕರಿಗೆ ಇದೀಗ ಸಚಿವರು ಮಾದರಿಯಾಗಿದ್ದಾರೆ.
from India & World News in Kannada | VK Polls https://ift.tt/3e2j664