ಮಂಡ್ಯ: ಕೋವಿಡ್ ಪರೀಕ್ಷಾ ವರದಿ ಬರುವ ಮುನ್ನವೇ ಮೃತಪಟ್ಟ ಮಹಿಳೆಯ ದೇಹವನ್ನು ಯಾರೊಬ್ಬರೂ ಮುಟ್ಟದೆ ಅನಾಥವಾಗಿಸಿದ ಘಟನೆ ಮಳವಳ್ಳಿ ತಾಲೂಕು ಎಂ.ಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಡೆಗೆ ತಾಲೂಕು ಆಡಳಿತದಿಂದಲೇ ಮಹಿಳೆಯ ಶವದ ಅಂತ್ಯಸಂಸ್ಕಾರ ನಡೆದಿದೆ. ಎಂ.ಶೆಟ್ಟಹಳ್ಳಿ ಗ್ರಾಮದ 55 ವರ್ಷದ ಮಹಿಳೆ ಬೆಂಗಳೂರಿನ ಮಗಳ ಮನೆಯಲ್ಲಿದ್ದರು. ಏ.16ರಂದು ಎಂ.ಶೆಟ್ಟಹಳ್ಳಿ ಗ್ರಾಮದ ತಮ್ಮ ಮನೆಗೆ ವಾಪಸಾಗಿದ್ದರು. ಜತೆಗೆ, ಏ.17ರಂದು ಕೋವಿಡ್ ಲಸಿಕೆ ಪಡೆದಿದ್ದರು. ಏ.18ರಂದು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ ಮಹಿಳೆ ಏ.19ರಂದು ಕೋವಿಡ್ ಪರೀಕ್ಷೆಗೆ ಒಳಪಟ್ಟಿದರು. ಆದರೆ, ವರದಿ ಇನ್ನೂ ಬಂದಿರಲಿಲ್ಲ. ಶನಿವಾರ ಬೆಳಗ್ಗೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಮಾರ್ಗಮಧ್ಯೆ ಮೃತಪಟ್ಟರು. ಹೀಗಾಗಿ ಆಂಬ್ಯುಲೆನ್ಸ್ ಸಿಬ್ಬಂದಿ ಮಹಿಳೆಯನ್ನು ಊರಿಗೆ ವಾಪಸ್ ತಂದು ಅವರ ಮನೆಯ ಜಗಲಿ ಮೇಲೆ ಶವವಿಟ್ಟು ತೆರಳಿದ್ದರು. ಆದರೆ, ಈಕೆ ಕೊರೊನಾದಿಂದ ಮೃತಪಟ್ಟಿರಬಹುದು ಎಂದು ಭಾವಿಸಿ, ಗ್ರಾಮದ ಯಾವೊಬ್ಬರೂ ಶವದ ಬಳಿ ತೆರಳಿರಲಿಲ್ಲ. ಹೀಗಾಗಿ ಐದಾರು ಗಂಟೆಗಳ ಕಾಲ ಶವ ಅನಾಥವಾಗಿ ಜಗಲಿಯ ಮೇಲೆಯೇ ಇತ್ತು. ಕಡೆಗೆ ಗ್ರಾಪಂ ಸದಸ್ಯ ಮನೋಹರ್ ಅವರು ತಾಲೂಕು ಆಡಳಿತದ ಅಧಿಕಾರಿಗಳನ್ನು ಸಂಪರ್ಕಿಸಿ ಆರೋಗ್ಯ ವೈದ್ಯಾಧಿಕಾರಿ ಡಾ.ಶಿವಸ್ವಾಮಿ ಅವರನ್ನು ಸ್ಥಳಕ್ಕೆ ಕರೆಸಿಕೊಂಡರು. ಮಂಡ್ಯದಿಂದ ಬಂದ ತಂಡವು ಪಿಪಿಇ ಕಿಟ್ ಧರಿಸಿ ಮಹಿಳೆಯ ಶವವನ್ನು ಕೊಂಡೊಯ್ದು ಅಂತ್ಯಕ್ರಿಯೆ ಮಾಡಿದರು.
from India & World News in Kannada | VK Polls https://ift.tt/3tTKWGP