ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ತೀವ್ರ ಸ್ವರೂಪದಲ್ಲಿ ಹರಡುತ್ತಿದ್ದು ಸೋಂಕಿತರಿಗೆ ಅಗತ್ಯ ಚಿಕಿತ್ಸೆ ನೀಡಲು ವೈದ್ಯಕೀಯ ಆಮ್ಲಜನಕದ ಕೊರತೆ ಎದುರಾಗಿದೆ. ಈ ನಿಟ್ಟಿನಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲು ಪ್ರತ್ಯೇಕ ವಾರ್‌ರೂಂ ರಚನೆ ಮಾಡಲಾಗಿದೆ. ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಕೊರತೆ ಉಂಟಾಗದಂತೆ ಈ ವಾರ್‌ರೂಂ ಇನ್ನು ಮುಂದೆ ಕೆಲಸ ನಿರ್ವಹಿಸಲಿದೆ. ಏನಿದು ಆಕ್ಸಿಜನ್ ವಾರ್‌ರೂಂ? ಸದ್ಯ ರಾಜ್ಯದಲ್ಲಿ ಭಾರೀ ಚರ್ಚಿತ ವಿಚಾರವಾಗಿರುವುದು ಆಕ್ಸಿಜನ್ ಕೊರತೆ. ಆಕ್ಸಿಜನ್ ಕೊರತೆಯಿಂದ ಕೋವಿಡ್ ಸೋಂಕಿತರ ಸಾವಿನ ಸುದ್ದಿಗಳು ಆತಂಕ ಸೃಷ್ಟಿಸಿವೆ. ಈ ಹಿನ್ನೆಲೆಯಲ್ಲಿ ಅಗತ್ಯ ಆಕ್ಸಿಜನ್ ಪೂರೈಕೆ ಮಾಡುವುದು ಸದ್ಯದ ತುರ್ತು ಅಗತ್ಯವಾಗಿದೆ. ಅದರಲ್ಲೂ ಸರ್ಕಾರದ ಬಳಿ ವೈದ್ಯಕೀಯ ಆಮ್ಲಜನಕದ ಲಭ್ಯತೆ ಇದ್ದರೂ ಅದನ್ನು ಸಕಾಲಕ್ಕೆ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ಖಾಸಗಿ ಆಸ್ಪತ್ರೆಗಳು ಸಿಲಿಂಡರ್ ಆಕ್ಸಿಜನ್ ಅವಲಂಬನೆ ಮಾಡಿರುವ ನಿಟ್ಟಿನಲ್ಲಿ ಇದನ್ನು ಪೂರೈಕೆ ಮಾಡಲು ಆಗುತ್ತಿಲ್ಲ. ಸಿಲಿಂಡರ್ ಕೊರತೆ ಇರುವುದು ಇದಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್ ಆಕ್ಸಿಜನ್ ವಾರ್ ರೂಂ ಆರಂಭಿಸಿದ್ದಾರೆ. ದಿನದ 24 ಗಂಟೆ ಈ ವಾರ್ ರೂಂ ಕೆಲಸ ನಿರ್ವಹಿಸಲಿದೆ. ವಾರ್‌ರೂಂ ಸ್ಥಾಪನೆ ಏಕೆ? ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳ ಸಂಘ ಕರ್ನಾಟಕ( ಫನಾ) ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರಿಗೆ ಪತ್ರ ಬರೆದಿತ್ತು. ಪತ್ರದಲ್ಲಿ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳು ವೈದ್ಯಕೀಯ ಆಕ್ಸಿಜನ್ ಕೊರತೆಯನ್ನು ಎದುರಿಸುತ್ತಿರುವ ಬಗ್ಗೆ ಮಾಹಿತಿ ನೀಡಿತ್ತು. ಅಲ್ಲದೆ ಕೂಡಲೇ ಸರ್ಕಾರ ಮಧ್ಯ ಪ್ರವೇಶ ಮಾಡುವಂತೆ ಆಗ್ರಹಿಸಿತ್ತು. ರಾಜ್ಯದ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪೂರ್ಣವಾಗಿ ಖಾಲಿಯಾಗಿದೆ, ಇನ್ನೂ ಹಲವು ಹಲವು ಆಸ್ಪತ್ರೆಗಳಲ್ಲಿ ಖಾಲಿ ಆಗುವ ಹಂತಕ್ಕೆ ಬಂದಿದೆ. ಆಕ್ಸಿಜನ್ ಪೂರೈಕೆದಾರರು ಪೂರೈಕೆ ಸ್ಥಗಿತಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರಮಕ್ಕೆ ಆಗ್ರಹಿಸಿತ್ತು. ಇದರ ಪರಿಣಾಮ ಸರ್ಕಾರದಿಂದ ವಾರ್ ರೂಂ ಆರಂಭಿಸಲಾಗಿದೆ. ಎಲ್ಲಿದೆ ವಾರ್‌ರೂಂ? ಸಂಪರ್ಕಿಸುವುದು ಹೇಗೆ? ಬೆಂಗಳೂರಿನ ಅರಮನೆ ಮೈದಾನ ರಸ್ತೆಯ ಔಷಧ ನಿಯಂತ್ರಣ ಕಚೇರಿಯಲ್ಲಿ ವಾರ್ ರೂಂ ರಚನೆ ಮಾಡಲಾಗಿದೆ. ಆಕ್ಸಿಜನ್ ಸಮಸ್ಯೆ ಎದುರಾದರಲ್ಲಿ ಯಾವುದೇ ಖಾಸಗಿ ಆಸ್ಪತ್ರೆ ಹಾಗೂ ವೈದ್ಯರು ಮತ್ತು ಸಾರ್ವಜನಿಕರು ಈ ವಾರ್ ರೂಂ ಸಂಪರ್ಕ ಮಾಡಬಹುದು. ಈ ನಿಟ್ಟಿನಲ್ಲಿ ಸಂಪರ್ಕ ಸಂಖ್ಯೆಯನ್ನು ನೀಡಲಾಗಿದೆ. 080- 22262846 ಲ್ಯಾಂಡ್ ಲೈನ್ 9448478874 ಮೊಬೈಲ್ ಸಂಪರ್ಕ ಮಾಡುವ ಮೂಲಕ ಅಗತ್ಯ ಆಕ್ಸಿಜನ್ ಸಕಾಲದಲ್ಲಿ ಪಡೆದುಕೊಳ್ಳಬಹುದು. ಸದ್ಯ ಕರ್ನಾಟಕದಲ್ಲಿ 7 ತಯಾರಿಕಾ ಘಟಕಗಳಿವೆ. ಇವುಗಳಿಂದ ಪ್ರತಿನಿತ್ಯ 812 ಟನ್ ಆಮ್ಲಜನಕ ಉತ್ಪಾದನೆಯಾಗುತ್ತಿದೆ. ಶನಿವಾರ ರಾಜ್ಯದಲ್ಲಿ 272.61 ಟನ್ ನಷ್ಟು ಆಮ್ಲಜನಕ ಬಳಕೆ ಮಾಡಲಾಗಿದೆ. ಪ್ರಸ್ತುತ ಆಮ್ಲಜನಕಕ್ಕೆ ಯಾವುದೇ ರೀತಿಯಲ್ಲಿ ಕೊರತೆ ಇಲ್ಲ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.
from India & World News in Kannada | VK Polls https://ift.tt/3dxMD7d