ಬೆಂಗಳೂರಿನಲ್ಲಿ ಕೊರೊನಾದಿಂದ ಮೃತಪಟ್ಟವರ ಶವ ಸಾಗಣೆ, ಅಂತ್ಯ ಸಂಸ್ಕಾರ ಉಚಿತ: ಬಿಬಿಎಂಪಿ ಆದೇಶ

ಬೆಂಗಳೂರು: ಕೊರೊನಾ ಸೋಂಕಿನ ಎರಡನೇ ಅಲೆಯ ಆರ್ಭಟದಿಂದಾಗಿ ಸೋಂಕಿತ ಪ್ರಕರಣಗಳ ಜತೆಗೆ ಸಾವಿಗೀಡಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಶವ ಸಾಗಣೆ ಮತ್ತು ಅಂತ್ಯಸಂಸ್ಕಾರಕ್ಕೆ ದುಬಾರಿ ಶುಲ್ಕ ಪಡೆಯುತ್ತಿರುವ ಆರೋಪದ ಬೆನ್ನಲ್ಲೇ , ಈ ಎರಡೂ ಸೇವೆಗಳನ್ನು ಉಚಿತವಾಗಿ ಒದಗಿಸಲು ಆದೇಶಿಸಿದೆ. ನಗರದಲ್ಲಿ ನಿತ್ಯ 25-30 ಮಂದಿ ಸೋಂಕಿನಿಂದ ಮೃತಪಡುತ್ತಿದ್ದು, ವಿದ್ಯುತ್‌ ಚಿತಾಗಾರಗಳ ಮುಂದೆ ಶವಗಳ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ಈ ಮೊದಲು ಕೇವಲ ವಿದ್ಯುತ್‌ ಚಿತಾಗಾರಗಳಲ್ಲಷ್ಟೇ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇದೀಗ 7 ವಿದ್ಯುತ್‌ ಚಿತಾಗಾರಗಳಲ್ಲಿಅಂತ್ಯಕ್ರಿಯೆಗೆ ಅನುವು ಮಾಡಿಕೊಡಲಾಗಿದೆ. ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು 198 ವಾರ್ಡ್‌ಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಒಟ್ಟು 260 ಆಂಬ್ಯುಲೆನ್ಸ್‌ಗಳನ್ನು ಪಾಲಿಕೆ ನಿಯೋಜಿಸಿದೆ. ಸೋಂಕಿತರನ್ನು ಮನೆಯಿಂದ ಆಸ್ಪತ್ರೆಗೆ ಕರೆದೊಯ್ಯಲು ಉಚಿತ ಸೇವೆ ಒದಗಿಸಲಾಗುತ್ತಿದೆ. ಹಾಗೆಯೇ, ಸೋಂಕಿನಿಂದ ಸಾವನ್ನಪ್ಪಿದವರನ್ನು ವಿದ್ಯುತ್‌ ಚಿತಾಗಾರಗಳಿಗೆ ಸಾಗಿಸಲು ಹೊರಗುತ್ತಿಗೆ ಆಧಾರದಲ್ಲಿ 49 ಶವ ಸಾಗಣೆ ವಾಹನಗಳನ್ನು ಪಡೆಯಲಾಗಿದೆ. ಇದಕ್ಕೂ ಯಾವುದೇ ಶುಲ್ಕ ಪಾವತಿ ಮಾಡಬೇಕಿಲ್ಲ. ಈ ನಡುವೆ, ಖಾಸಗಿ ಆಂಬ್ಯುಬುಲೆನ್ಸ್‌ಗಳು ಕೋವಿಡ್‌ ಶವಗಳ ಸಾಗಣೆಗೆ 12-15 ಸಾವಿರ ರೂ. ಬೇಡಿಕೆ ಇಡುತ್ತಿರುವ ದೂರುಗಳು ಕೇಳಿ ಬರುತ್ತಿವೆ. ಬಿಬಿಎಂಪಿಯ 13 ವಿದ್ಯುತ್‌ ಚಿತಾಗಾರಗಳ ಪೈಕಿ 7 ವಿದ್ಯುತ್‌ ಚಿತಾಗಾರಗಳನ್ನು ಕೋವಿಡ್‌ನಿಂದ ಮೃತಪಟ್ಟ ಪಾರ್ಥಿವ ಶರೀರಗಳ ಶವ ಸಂಸ್ಕಾರಕ್ಕೆ ಮೀಸಲಿಡಲಾಗಿದೆ. ಈ ಮೊದಲು ಪೀಣ್ಯ, ಸುಮನಹಳ್ಳಿ, ಕೆಂಗೇರಿ, ಕೂಡ್ಲು, ಪಣತ್ತೂರು ಚಿತಾಗಾರಗಳಲ್ಲಿಮಾತ್ರ ಕೋವಿಡ್‌ ಶವಗಳ ಸಂಸ್ಕಾರ ಮಾಡಲಾಗುತ್ತಿತ್ತು. ಚಿತಾಗಾರದ ಸಿಬ್ಬಂದಿಯು ಕೊರೊನಾ ಸೋಂಕಿತ ಶವಗಳ ಅಂತ್ಯಸಂಸ್ಕಾರಕ್ಕೂ ಕುಟುಂಬ ಸದಸ್ಯರಿಂದ ಹೆಚ್ಚಿನ ಶುಲ್ಕ ವಸೂಲು ಮಾಡುತ್ತಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿಶವ ಸಂಸ್ಕಾರಕ್ಕೆ ಯಾವುದೇ ಶುಲ್ಕ ಪಡೆಯುವಂತಿಲ್ಲಎಂದು ಪಾಲಿಕೆಯ ಮುಖ್ಯ ಆಯುಕ್ತ ಗೌರವ್‌ ಗುಪ್ತ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಶವ ಸಂಸ್ಕಾರ ಉಚಿತ ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ವಿದ್ಯುತ್‌ ಚಿತಾಗಾರಗಳಲ್ಲಿಯಾವುದೇ ಶುಲ್ಕ ನಿಗದಿಪಡಿಸಿಲ್ಲ. ಕಳೆದ ವರ್ಷದಿಂದಲೂ ಕೋವಿಡ್‌ ಶವಗಳ ಅಂತ್ಯಕ್ರಿಯೆಯನ್ನು ಉಚಿತವಾಗಿ ಮಾಡಲಾಗಿದೆ. ಶವಗಳು ಬಂದಾಗ ಒಂದು ಚಟ್ಟಕ್ಕೆ 900 ರೂ. ಮತ್ತು ಮಡಿಕೆಗೆ 100 ರೂ. ಖರ್ಚಾಗುತ್ತದೆ. ಈ ಹಣವನ್ನೂ ಪಾಲಿಕೆಯೇ ಭರಿಸುತ್ತಿದೆ. ಈ ಹಿಂದೆ ಚಿತಾಗಾರದ ಸಿಬ್ಬಂದಿ ಕೂಡ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸಲು ಹಿಂದೇಟು ಹಾಕುತ್ತಿದ್ದರು. ಅಲ್ಲದೆ, ಮೃತರ ಬಂಧುಗಳು ಕೂಡ ಹಿಂಜರಿಯುತ್ತಿದ್ದರು. ಹಾಗಾಗಿ, ಅಪಾಯವನ್ನೂ ಲೆಕ್ಕಿಸದೆ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಪ್ರತಿ ಶವ ಸಂಸ್ಕಾರಕ್ಕೆ 500 ರೂ. ಪ್ರೋತ್ಸಾಹಧನ ನೀಡಲು 2020ರ ಜು. 24ರಂದು ಪಾಲಿಕೆಯ ವಿಶೇಷ ಆಯುಕ್ತರು ಆದೇಶ ಹೊರಡಿಸಿದ್ದರು. ಆದರೆ, ಚಿತಾಗಾರದ ಸಿಬ್ಬಂದಿಗೆ ಈವರೆಗೆ ಪ್ರೋತ್ಸಾಹಧನ ನೀಡಿಲ್ಲ. ಅನ್ಯಕಾಯಿಲೆ ಹಾಗೂ ಇತರೆ ಕಾರಣಗಳಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ವಿದ್ಯುತ್‌ ಚಿತಾಗಾರಗಳಲ್ಲಿ 250 ರೂ. ಶುಲ್ಕ ನಿಗದಿಪಡಿಸಲಾಗಿದೆ. ಅಲ್ಲದೆ, ಚಟ್ಟ ಮತ್ತು ಮಡಿಕೆಗೆ ತಗಲುವ ವೆಚ್ಚವನ್ನೂ ಕುಟುಂಬ ಸದಸ್ಯರೇ ಪಾವತಿ ಮಾಡಬೇಕು. ರುದ್ರಭೂಮಿಗಳಲ್ಲಿಅಂತ್ಯಕ್ರಿಯೆಗೆ ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ''ವಿದ್ಯುತ್‌ ಚಿತಾಗಾರಗಳಲ್ಲಿಕೆಲಸ ಮಾಡುವ ಸಿಬ್ಬಂದಿಗೆ ಅಗತ್ಯವಿರುವಷ್ಟು ಪಿಪಿಇ ಕಿಟ್‌, ಕೈಗವಸು, ಸ್ಯಾನಿಟೈಸರ್‌ ಒದಗಿಸುತ್ತಿಲ್ಲ. ಒಂದೇ ಕಿಟ್‌ ಧರಿಸಿ ಎರಡು-ಮೂರು ಶವಗಳ ಅಂತ್ಯಕ್ರಿಯೆ ಮಾಡಬೇಕಾಗಿದೆ. ಕಳೆದ ಒಂದು ವರ್ಷದಿಂದಲೂ ಸಂಬಳ ನೀಡಿಲ್ಲ. ಕೋವಿಡ್‌ ಶವಗಳ ಅಂತ್ಯಕ್ರಿಯೆಗೆ 500 ರೂ. ಪ್ರೋತ್ಸಾಹಧನವನ್ನೂ ನೀಡುತ್ತಿಲ್ಲ,'' ಎಂದು ಅಂಬೇಡ್ಕರ್‌ ದಲಿತ ಸಂಘರ್ಷ ಸಮಿತಿಯ ರುದ್ರಭೂಮಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಾಜು ಕಲ್ಪಳ್ಳಿ ದೂರಿದರು. ''ಪಾಲಿಕೆಯಿಂದ ನಿಯೋಜಿಸಲ್ಪಟ್ಟ ಶವ ಸಾಗಣೆ ವಾಹನಗಳಿಗೆ ಯಾವುದೇ ರೀತಿಯ ಶುಲ್ಕ ನೀಡಬೇಕಿಲ್ಲ. ವಿದ್ಯುತ್‌ ಚಿತಾಗಾರಗಳಲ್ಲೂಅಂತ್ಯಕ್ರಿಯೆಯನ್ನು ಉಚಿತ ಮಾಡಲಾಗಿದ್ದು, ಅನಧಿಕೃತವಾಗಿ ಶುಲ್ಕ ಪಡೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಆಯಾ ವಲಯಗಳ ಜಂಟಿ ಆಯುಕ್ತರು ಮೇಲ್ವಿಚಾರಣೆ ನಡೆಸಲಿದ್ದಾರೆ. ಚಿತಾಗಾರ ಮತ್ತು ರುದ್ರಭೂಮಿಗಳ ಸಿಬ್ಬಂದಿಗೆ ಕೂಡಲೇ ವೇತನ ಬಿಡುಗಡೆಗೆ ಸೂಚಿಸಲಾಗಿದೆ,'' ಎಂದು ಪಾಲಿಕೆಯು ಮುಖ್ಯ ಆಯುಕ್ತ ಗೌರವ್‌ ಗುಪ್ತ ಹೇಳಿದರು. ಸೋಂಕಿತರ ಶವ ಸಂಸ್ಕಾರಕ್ಕೆ ಗುರುತಿಸಿರುವ ವಿದ್ಯುತ್‌ ಚಿತಾಗಾರಗಳು: * ಕೂಡ್ಲು* ಪಣತ್ತೂರು* ಮೇಡಿ ಅಗ್ರಹಾರ* ಕೆಂಗೇರಿ* ಬನಶಂಕರಿ* ಪೀಣ್ಯ* ಸುಮನಹಳ್ಳಿ


from India & World News in Kannada | VK Polls https://ift.tt/3doJre2

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...