ಬೆಂಗಳೂರು: ಈಗ ಹಂಚಿಕೆ ಮಾಡಿರುವ 300 ಟನ್ ಆಕ್ಸಿಜನ್ ಎಲ್ಲಿಗೂ ಸಾಲದು. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ರಾಜ್ಯದಲ್ಲಿ ಕೆಲವೊಂದು ಆಸ್ಪತ್ರೆಗಳನ್ನೇ ಮುಚ್ಚಬೇಕಾದೀತು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಧಾನಿ ಅವರ ಮುಂದೆಯೇ ನಿಷ್ಠುರವಾಗಿ ಹೇಳಿದ್ದಾರೆ. ಮಹಾರಾಷ್ಟ್ರ, ಕರ್ನಾಟಕ, ದಿಲ್ಲಿ ಸೇರಿದಂತೆ ಸೋಂಕು ತೀವ್ರಗತಿಯಲ್ಲಿರುವ 11 ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಶುಕ್ರವಾರ ಪ್ರಧಾನಿ ವಿಡಿಯೊ ಕಾನ್ಫರೆನ್ಸ್ ವೇಳೆ ಯಡಿಯೂರಪ್ಪ ಅವರು ರಾಜ್ಯ ಎದುರಿಸುತ್ತಿರುವ ಅತ್ಯಂತ ಸಂಕಷ್ಟದ ಪರಿಸ್ಥಿತಿಯ ಚಿತ್ರಣವನ್ನು ತೆರೆದಿಟ್ಟರು. ರಾಜ್ಯದಲ್ಲಿ ಆಮ್ಲಜನಕದ ಬಳಕೆ ದಿನೇ ದಿನೆ ಹೆಚ್ಚುತ್ತಿದೆ. ಗುರುವಾರ 500 ಟನ್ ಬಳಕೆಯಾಗಿದೆ. ಕೇಂದ್ರ ಸರಕಾರ ಕೇವಲ 300 ಟನ್ ಆಮ್ಲಜನಕ ಹಂಚಿಕೆ ಮಾಡಿದೆ. ಕೇಂದ್ರದ ಮಾರ್ಗಸೂಚಿ ಅನುಸಾರವೇ ರಾಜ್ಯಕ್ಕೆ ಏಪ್ರಿಲ್ 25ರಿಂದ 1,142 ಟನ್ ಆಮ್ಲಜನಕ ಅಗತ್ಯವಿದೆ. ಏಪ್ರಿಲ್ 30ರ ನಂತರ 1,471 ಟನ್ ಆಮ್ಲಜನಕದ ಅಗತ್ಯವಿದೆ ಎಂದು ಎಂದು ಹೇಳಿದರು. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 16ರಷ್ಟಿದೆ. ಬೆಂಗಳೂರು ನಗರ ಅತಿ ಹೆಚ್ಚು ಸೋಂಕು ಪೀಡಿತವಾಗಿದೆ. ಪರಿಸ್ಥಿತಿಯನ್ನು ಎದುರಿಸಲು ನಮಗೆ ಹಾಸಿಗೆಗಳ ಕೊರತೆ ಇಲ್ಲ. ಕೊರತೆ ಇರುವುದು ಆಮ್ಲಜನಕ ಮತ್ತು ರೆಮ್‌ಡಿಸಿವಿರ್ ಔಷಧದ್ದು ಎಂದು ಎಂದು ಸ್ಪಷ್ಟವಾಗಿ ಬೇಡಿಕೆಯನ್ನು ಮುಂದಿಟ್ಟರು. ಪ್ರಧಾನಿ ಆಶ್ವಾಸನೆ: ಬಹುತೇಕ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೂ ತಮ್ಮ ರಾಜ್ಯಗಳಲ್ಲಿ ಎದುರಾಗಿರುವ ಆಕ್ಸಿಜನ್ ಕೊರತೆ ಪ್ರಸ್ತಾಪಿಸಿ, ಬಿಕ್ಕಟ್ಟು ತಿಳಿಗೊಳಿಸಲು ಮನವಿ ಮಾಡಿಕೊಂಡರು. ಮನವಿಗೆ ಸ್ಪಂದಿಸಿದ ಪ್ರಧಾನಿ, ವಿಶೇಷ ರೈಲು ಮತ್ತು ವಿಮಾನಗಳ ಮೂಲಕ ಆಕ್ಸಿಜನ್ ಹಾಗೂ ಅಗತ್ಯ ಔಷಧಗಳ ತುರ್ತು ಸಾಗಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನಿಡಿದರು.
from India & World News in Kannada | VK Polls https://ift.tt/2QVTqi1