ಗದಗ: ತಿಮ್ಮಪ್ಪನ ದರ್ಶನಕ್ಕೆ ಹೋಗಿ ವಾಪಸ್ ಬರುವಾಗ ರೈಲಿನಲ್ಲಿ ತಪ್ಪಿಸಿಕೊಂಡು ತಲುಪಿದ್ದ ಅಜ್ಜಿಯೊಬ್ಬರು ಯೋಧನ ಸಹಾಯದಿಂದ ತನ್ನೂರಿಗೆ ಮರಳಿದ್ದಾರೆ. ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕು ದಾಸವಾಳ ಗ್ರಾಮದ ಶಿವಮ್ಮ ಪಾಟೀಲ(72), ವಾರದ ನಂತರ ಜಿಲ್ಲೆಯ ಮುಂಡರಗಿ ತಾಲೂಕಿನ ಕದಾಂಪೂರ ಗ್ರಾಮದ ಯೋಧ ಮುದುಕಯ್ಯ ಶೇಖರಯ್ಯ ಹಿರೇಮಠ ಸಹಾಯದಿಂದ ಊರು ಸೇರಿದ್ದಾರೆ. ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಏ.10ರಂದು ಮೊಮ್ಮಗನ ಜತೆ ಶಿವಮ್ಮ ಹೋಗಿದ್ದರು. ವಾಪಸ್ ಬರುವಾಗ ಮೊಮ್ಮಗನಿಂದ ತಪ್ಪಿಸಿಕೊಂಡಿದ್ದಾರೆ. ಜತೆಗೆ ರೈಲು ಬದಲಾವಣೆಯಾಗಿ ದಿಲ್ಲಿ ತಲುಪಿದ್ದಾರೆ. ದಿಲ್ಲಿ ರೈಲ್ವೆ ನಿಲ್ದಾಣದಲ್ಲಿ ಇಳಿದ ಅಜ್ಜಿ, ದಿಕ್ಕು ತೋಚದೆ ಕುಳಿತಿದ್ದಾರೆ. ಅದೇ ವೇಳೆ ರಜೆಗೆ ಪಡೆದು ಊರಿಗೆ ಬರುತ್ತಿದ್ದ ಯೋಧ ಮುದುಕಯ್ಯ, ಕನ್ನಡದಲ್ಲಿ ಮಾತನಾಡುತ್ತಿದ್ದ ಅಜ್ಜಿಯನ್ನು ವಿಚಾರಿಸಿದಾಗ ವಿಷಯ ಗೊತ್ತಾಗಿದೆ. ಅಜ್ಜಿ ಬಳಿ ಮೊಬೈಲ್ ಇರಲಿಲ್ಲ. ಸ್ನೇಹಿತರ ಸಹಾಯದಿಂದ ದಾಸವಾಳ ಗ್ರಾಮದ ಅಜ್ಜಿಯ ಮಗ ಮಹಾಂತಗೌಡ ಪಾಟೀಲ ಅವರನ್ನು ಸಂಪರ್ಕಿಸಿ, ವಿಡಿಯೊ ಕಾಲ್ ಮಾಡಿ ಅಜ್ಜಿ ತಪ್ಪಿಸಿಕೊಂಡಿರುವುದು ಖಚಿತಪಡಿಸಿಕೊಂಡಿದ್ದಾರೆ. ಏ. 14ರಂದು ದಿಲ್ಲಿಯಿಂದ ಪ್ರಯಾಣ ಆರಂಭಿಸಿದ ಅಜ್ಜಿ ಮತ್ತು ಯೋಧ ಮುದುಕಯ್ಯ, ಶನಿವಾರ ದಾಸವಾಳಕ್ಕೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.
from India & World News in Kannada | VK Polls https://ift.tt/2Qdn96g