ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ತೀವ್ರ ಸ್ವರೂಪದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ ಅವರು ಮಂಗಳವಾರ ಸರ್ವಪಕ್ಷಗಳ ಮುಖಂಡರ ಸಭೆ ಕರೆದಿದ್ದಾರೆ. ಆದರೆ ರಾಜ್ಯಪಾಲರು ಈ ಸಭೆಯನ್ನು ಕರೆದಿರುವುದು ಇದೀಗ ರಾಜಕೀಯ ಚರ್ಚೆಗೂ ಗ್ರಾಸವಾಗಿದೆ. ರಾಜ್ಯಪಾಲರು ಸರ್ವಪಕ್ಷಗಳ ಸಭೆಯನ್ನು ಕರೆದಿದ್ದಕ್ಕೆ ತಕರಾರು ಎತ್ತಿದೆ. ರಾಜ್ಯದಲ್ಲಿ ಚುನಾಯಿತ ಸರ್ಕಾರವಿಲ್ಲವೇ? ಎಂದು ಕಾಂಗ್ರೆಸ್ ಟ್ವಿಟ್ಟರ್‌ನಲ್ಲಿ ಖಾರವಾಗಿ ಪ್ರಶ್ನಿಸಿದೆ. ರಾಜ್ಯಪಾಲರು ಸರ್ವಪಕ್ಷಗಳ ಸಭೆಯನ್ನು ಕರೆದಿರುವ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದರು ಕಾಂಗ್ರೆಸ್, ಇದು ಸರ್ಕಾರದ ಅಸಾಮರ್ಥ್ಯವೇ ಅಥವಾ ಬಿಎಸ್‌ವೈ ಮುಕ್ತ ಬಿಜೆಪಿ ಅಭಿಯಾನದ ಬಾಗವೇ? ಎಂದಿದೆ. ಸರ್ಕಾರಕ್ಕೆ ವಿಪಕ್ಷಗಳನ್ನು ಎದುರಿಸುವ ಮುಖವಿಲ್ಲವೇ? ಅಥವಾ ಪರಿಸ್ಥಿತಿ ಎದುರಿಸಲಾಗದೆ ಕೈ ಚೆಲ್ಲಿದೆಯೇ? ಇಂತಹ ಮುಖಹೇಡಿ ಸರ್ಕಾರದಿಂದ ಜನರ ಜೀವ ಉಳಿಸುವುದು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಸೋಮವಾರ ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡಾ ಮಾತನಾಡಿ ಆಕ್ಷೇಪ ಎತ್ತಿದ್ದರು. ರಾಜ್ಯದಲ್ಲಿ ಚುನಾಯಿತ ಸರ್ಕಾರ ಇರುವಾಗ ರಾಜ್ಯಪಾಲರು ಸರ್ವಪಕ್ಷಗಳ ಸಭೆಯನ್ನು ಕರೆಯುವ ಉದ್ಧೇಶ ಏನು ಎಂದು ಪ್ರಶ್ನಿಸಿದ್ದರು. ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಸಭೆ ಮಂಗಳವಾರ ಸಂಜೆ ನಾಲ್ಕು ಗಂಟೆಗೆ ನಡೆಯಲಿದೆ. ಈ ಸಭೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಎಚ್‌ಡಿ ರೇವಣ್ಣ ಸೇರಿದಂತೆ ಉಭಯ ಸದನಗಳ ಪ್ರಮುಖರು ಭಾಗಿಯಾಗಲಿದ್ದಾರೆ.
from India & World News in Kannada | VK Polls https://ift.tt/32wf9Qu