ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೇವಲ 18 ರನ್‌ಗಳ ಸೋಲು ಅನುಭವಿಸಿದ ಹೊರತಾಗಿಯೂ ಕೋಲ್ಕತಾ ನೈಟ್ ರೈಡರ್ಸ್ ಪರ ಕಠಿಣ ಪ್ರಯತ್ನ ನಡೆಸಿದ್ದ ಆಂಡ್ರೆ , ದಿನೇಶ್ ಕಾರ್ತಿಕ್ ಹಾಗೂ ಪ್ಯಾಟ್ ಕಮಿನ್ಸ್ ಅವರ ಪ್ರದರ್ಶನವನ್ನು ಕೆಕೆಆರ್ ನಾಯಕ ಐಯಾನ್ ಮಾರ್ಗನ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ 221 ರನ್ ಗುರಿ ಹಿಂಬಾಲಿಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ಪವರ್‌ಪ್ಲೇನಲ್ಲಿ ದೀಪಕ್ ಚಹರ್ ಮಾರಕ ದಾಳಿಗೆ ಕುಸಿದು 31 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ, ಆಂಡ್ರೆ ರಸೆಲ್ 22 ಎಸೆತಗಳಿಗೆ 54, ದಿನೇಶ್ ಕಾರ್ತಿಕ್ 24 ಎಸೆತಗಳಿಗೆ 40 ಹಾಗೂ ಪ್ಯಾಟ್ ಕಮಿನ್ಸ್ ಅಜೇಯ 66 ರನ್ ಗಳಿಸಿದರು. ಇದರ ಹೊರತಾಗಿಯೂ ಕೆಕೆಆರ್ ಕೊನೆಯ ಹಂತದಲ್ಲಿ ಸೋಲು ಒಪ್ಪಿಸಿಕೊಂಡಿತು. ಕೋಲ್ಕತಾ ನೈಟ್ ರೈಡರ್ಸ್ ತಂಡ 202 ರನ್‌ಗಳಿಗೆ ಆಲೌಟಾದರೂ ಪಂದ್ಯ ರೋಚಕವಾಗಿ ಅಂತ್ಯ ಕಂಡಿತು. ಆದರೆ, ಸೋಲು ಅನುಭವಿಸಿದರೂ ಕೆಕೆಆರ್ ತಂಡದ ರಸೆಲ್, ಕಾರ್ತಿಕ್ ಹಾಗೂ ಪ್ಯಾಟ್ ಕಮಿನ್ಸ್ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಅದರಂತೆ ನಾಯಕ ಐಯಾನ್ ಮಾರ್ಗನ್ ತಂಡದ ಪ್ರದರ್ಶನವನ್ನು ಶ್ಲಾಘಿಸಿದರು. " ನಮ್ಮವರ ಬ್ಯಾಟಿಂಗ್ ನೋಡುತ್ತಿದ್ದಂತೆ ನನ್ನ ನಾಡಮಿಡಿತ ಹೆಚ್ಚಾಗಿತ್ತು. ಇದು ಕ್ರಿಕೆಟ್ ಆಟದಲ್ಲಿನ ವಿಸ್ಮಯ ಎಂದೇ ಹೇಳಬಹುದು. ಪವರ್‌ಪ್ಲೇನಲ್ಲಿ ಐದು ವಿಕೆಟ್ ಕಳೆದುಕೊಂಡಿದ್ದ ನಾವು ಬಹುಬೇಗ ಔಟ್ ಆಗುತ್ತೇವೆಂದು ಭಾವಿಸಿದ್ದೆ. ಆದರೆ, ನಾವು ಗೆಲುವಿನ ಸಮೀಪ ಬರುತ್ತೇವೆಂದು ಊಹಿಸಿರಲಿಲ್ಲ," ಎಂದು ಮಾರ್ಗನ್ ತಿಳಿಸಿದರು. "ರಸೆಲ್, ದಿನೇಶ್ ಕಾರ್ತಿಕ್ ಇಬ್ಬರೂ ಅತ್ಯುತ್ತಮ ಜೊತೆಯಾಟವನ್ನು ಆಡಿದರು. ಇಲ್ಲಿನ ಪರಿಸ್ಥಿತಿಗಳ ಲಾಭವನ್ನು ಒಮ್ಮೆ ಪಡೆದರೆ, ಇದನ್ನು ತಡೆಯಲು ತುಂಬಾ ಕಠಿಣವಾಗಿರುತ್ತದೆ. ಇವರಿಬ್ಬರ ಜೊತೆಯಾಟ ಹಾಗೂ ಅಂತಿಮ ಹಂತದಲ್ಲಿ ಪ್ಯಾಟ್ ಕಮಿನ್ಸ್ ತೋರಿದ ಸ್ಪೋಟಕ ಬ್ಯಾಟಿಂಗ್‌ನಿಂದ ಕೊನೆಯವರೆಗೂ ನಮಗೆ ಗೆಲ್ಲುವ ಅವಕಾಶವಿತ್ತು. ಆರಂಭದಲ್ಲಿ ಹಲವು ವಿಕೆಟ್‌ಗಳ ಕಳೆದುಕೊಂಡ ಹೊರತಾಗಿಯೂ ಮಧ್ಯಮ ಹಾಗೂ ಕೆಳ ಕ್ರಮಾಂಕದ ಆಟಗಾರರ ಪ್ರಚಂಡ ಹೋರಾಟ ನಡೆಸಿದ್ದಾರೆ," ಎಂದು ಸಹ ಆಟಗಾರರನ್ನು ಕೊಂಡಾಡಿದರು. "ಆರಂಭಿಕ ಐದು ಓವರ್‌ಗಳಲ್ಲಿ ಬ್ಯಾಟಿಂಗ್ ನಮ್ಮ ಹಾದಿಯಲ್ಲಿ ಸಾಗಲಿಲ್ಲ. ನಾವು ಅಂದುಕೊಂಡ ರೀತಿ ನಾವು ಆರಂಭದಲ್ಲಿ ಬ್ಯಾಟಿಂಗ್ ಮಾಡಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಪರಿಸ್ಥಿತಿಗಳ ಲಾಭವನ್ನು ಪಡೆದುಕೊಂಡಂತೆ ಆರಂಭದಲ್ಲಿ ನಾವು ಪಡೆದಿದ್ದರೆ ಅದರ ಕತೆ ಬೇರೆಯೇ ಇರುತ್ತಿತ್ತು ಹಾಗೂ ನಾವು ಸುಲಭವಾಗಿ ಗೆಲುವು ಪಡೆಯುತ್ತಿದ್ದೆವು," ಎಂದು ಕೆಕೆಆರ್ ನಾಯಕ ಐಯಾನ್ ಮಾರ್ಗನ್ ತಿಳಿಸಿದರು. ಮೊದಲ ಪಂದ್ಯದಲ್ಲಿ ಗೆದ್ದಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ ಕಳೆದ ಮೂರು ಪಂದ್ಯಗಳಲ್ಲಿ ಸೋತು ಹ್ಯಾಟ್ರಿಕ್ ಪರಾಭವ ಅನುಭವಿಸಿದೆ. ಆ ಮೂಲಕ ಕೇವಲ ಎರಡು ಅಂಕಗಳೊಂದಿಗೆ ಕೆಕೆಆರ್ ಪಾಯಿಂಟ್ಸ್ ಟೇಬಲ್‌ನಲ್ಲಿ 6ನೇ ಸ್ಥಾನದಲ್ಲಿದೆ. ಏಪ್ರಿಲ್ 24 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ತನ್ನ ಮುಂದಿನ ಪಂದ್ಯವಾಡಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2QOSBaJ