ಮಂಗಳೂರು: ನಗರದ ಸೇರಿದಂತೆ ಹಲವೆಡೆ ದೈವಸ್ಥಾನಗಳಿಗೆ ತೆರಳಿ ಕ್ಷೇತ್ರವನ್ನು ಅಪವಿತ್ರಗೊಳಿಸಿದ ಆರೋಪಿಗಳ ಪೈಕಿ ಒಬ್ಬಾತ ಮೃತಪಟ್ಟಿದ್ದು, ಉಳಿದ ಇಬ್ಬರು ಆರೋಪಿಗಳು ಕೊರಗಜ್ಜ ಕೋಲೋತ್ಸವದಲ್ಲಿ ಕ್ಷಮಾಪಣೆ ಕೇಳಲು ಬಂದ ಕುತೂಹಲಕಾರಿ ಘಟನೆ ನಗರದ ಎಮ್ಮೆಕೆರೆಯಲ್ಲಿ ಬುಧವಾರ ರಾತ್ರಿ ನಡೆದಿದೆ. ನಗರದ ಎಮ್ಮೆಕೆರೆ ಬಬ್ಬುಸ್ವಾಮಿ ಪರಿವಾರ ದೈವಗಳ ಕ್ಷೇತ್ರ ಸೇರಿದಂತೆ ನಗರ ಹಲವು ದೈವಸ್ಥಾನದ ಕಾಣಿಕೆ ಡಬ್ಬಿಗಳಿಗೆ ಅಶ್ಲೀಲ ಸೊತ್ತುಗಳನ್ನು ಹಾಕಿ ಅಪವಿತ್ರಗೊಳಿಸಲಾಗಿತ್ತು. ಕಿಡಿಗೇಡಿಗಳು ಗಲಭೆ ಸೃಷ್ಟಿಸಿ, ಶಾಂತಿ ಕದಡುವ ಉದ್ದೇಶದಿಂಧ ಈ ಕೃತ್ಯವೆಸಗಿದ್ದರು. ಒಂದು ತಿಂಗಳ ಹಿಂದೆ ತೆರೆದು ನೋಡುವಾಗ ಈ ಕೃತ್ಯ ಬಯಲಿಗೆ ಬಂದಿದ್ದು, ಈ ಬಗ್ಗೆ ಹಲವು ದೈವಸ್ಥಾನಗಳ ಆಡಳಿತ ಮಂಡಳಿ ಪೊಲೀಸ್ ಠಾಣೆಗಳಿಗೆ ದೂರು ಕೂಡಾ ನೀಡಿತ್ತು.ಅದರಂತೆ ಪೊಲೀಸರು ತನಿಖೆ ನಡೆಸುತ್ತಿದ್ದರು. ವಿಶೇಷ ಪ್ರಾರ್ಥನೆ, ಪ್ರತಿಭಟನೆ! ಆಘಾತಗೊಂಡ ಭಕ್ತಾದಿಗಳು ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾಗಲಿ ಎಂದು ಕೊರಗಜ್ಜನಲ್ಲಿ ಬೇಡಿಕೆ ಇಟ್ಟಿದ್ದರು. ಇದು ಮಾತ್ರವಲ್ಲದೆ ಹಿಂದೂ ಸಂಘಟನೆಗಳು ದೈವಸ್ಥಾಗಳನ್ನು ಅಪವಿತ್ರಗೊಳಿಸುವವರಿಗೆ ದೇವರು ತಕ್ಕ ಶಾಸ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದ್ದಲ್ಲದೆ, ಪ್ರತಿಭಟನಾರ್ಥವಾಗಿ ಕೊರಗಜ್ಜ ಮೂಲ ಕ್ಷೇತ್ರಕ್ಕೆ ಪಾದಯಾತ್ರೆಯನ್ನು ಮಾಡಿದ್ದರು. ಈ ಮಧ್ಯೆ ಕಾಕತಾಳೀಯ ಎಂಬಂತೆ ಕೊರಗಜ್ಜ ಕ್ಷೇತ್ರವನ್ನು ಅಪವಿತ್ರಗೊಳಿಸಿದ ವ್ಯಕ್ತಿಗಳಲ್ಲಿ ಒಬ್ಬಾತ ಅಚಾನಕ್ ಆಗಿ ತಿಂಗಳ ಹಿಂದೆ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ. ಇದರಿಂದ ಆತಂಕಿತರಾದ ಇನ್ನೊಬ್ಬ ಆರೋಪಿ ಕೆಲವು ದಿನಗಳ ಹಿಂದೆ ಎಮ್ಮೆಕೆರೆ ಕ್ಷೇತ್ರಕ್ಕೆ ಬಂದು ಕ್ಷಮಾಪಣೆ ಕೇಳುವುದಾಗಿ ಆಡಳಿತ ಮಂಡಳಿಯಲ್ಲಿ ಹೇಳಿದ್ದಾನೆ. ಇದಕ್ಕೆ ಆಡಳಿತ ಮಂಡಳಿ ಪದಾಧಿಕಾರಿಗಳು ಕೊರಗಜ್ಜ ನೇಮೋತ್ಸವ ದಿನ ಬರುವಂತೆ ಸೂಚನೆ ನೀಡಿದ್ದರು.ಅದರಂತೆ ಆರೋಪಿಗಳಲ್ಲಿ ಒಬ್ಬಾತ ನಿನ್ನೆ ಕೊರಗಜ್ಜ ಕೋಲಕ್ಕೆ ಬಂದು ಕ್ಷಮಾಪಣೆಗೆ ಮುಂದಾಗಿದ್ದಾನೆ. ಕ್ಷಮೆ ನೀಡದ ಕೊರಗಜ್ಜ! ಬುಧವಾರ ಕೊರಗಜ್ಜ ನೇಮಕ್ಕೆ ಆರೋಪಿಗಳಲ್ಲಿ ಒಬ್ಬಾತ ಬಂದಿದ್ದರೂ, ಕೊರಗಜ್ಜ ಮಾತ್ರ ಅತನಿಗೆ ಕ್ಷಮೆ ನೀಡಲಿಲ್ಲ. ಈ ಕ್ಷೇತ್ರದಲ್ಲಿ ಬಬ್ಬುಸ್ವಾಮಿ ಪ್ರಧಾನ ದೈವವಾದ ಕಾರಣ ಅವನ ನೇಮೋತ್ಸವದಲ್ಲೇ ಈ ಸಮಸ್ಯೆಯನ್ನು ಇಟ್ಟು ನುಡಿ ಮತ್ತು ಕ್ಷಮಾಪಣೆ ಕೇಳಿ. ಅವನೇ ಈ ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯ ಎಂದು ನುಡಿ ಕೊಟ್ಟಿದ್ದಾರೆ. ಈ ಘಟನೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಪೊಲೀಸ್ ತನಿಖೆ ಚುರುಕು!ದೈವಸ್ಥಾನ ಅಪವಿತ್ರಗೊಳಿಸಿ ಆರೋಪಿಗಳಲ್ಲಿ ಒಬ್ಬಾತ ಎಮ್ಮೆಕೆರೆ ಕೊರಗಜ್ಜ ಕ್ಷೇತ್ರಕ್ಕೆ ಕ್ಷಮಾಪಣೆ ಕೇಳಲು ಬಂದ ವಿಷಯ ಪೊಲೀಸರಿಗೆ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಆಗಮಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಸಂಬಂಧಿಸಿ ಆರೋಪಿಯನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತಂಡದ ಕೃತ್ಯ! ದೈವಸ್ಥಾನ ಅಪವಿತ್ರಗೊಳಿಸಿದ ಕೃತ್ಯದ ಹಿಂದೆ ತಂಡವೇ ಭಾಗಿಯಾಗಿರುವ ಬಗ್ಗೆ ಮಾಹಿತಿ ಪೊಲೀಸರಿಗೆ ಲಭಿಸಿದೆ. ಆ ಬಗ್ಗೆಯೂ ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿ ವಿಚಾರಣೆ ಬಳಿಕ ಈ ಪ್ರಕರಣದ ಸಮಗ್ರ ಮಾಹಿತಿ ಹೊರಬರಲಿದೆ. ಯಾರಿದು ಕೊರಗಜ್ಜ: ದೈವಾರಾಧನೆಗೆ ಹೆಸರುವಾಸಿಯಾಗಿರುವ ತುಳುನಾಡಿನಲ್ಲಿ ಕೊರಗಜ್ಜ ಎಂಬ ದೈವವನ್ನು ಇಲ್ಲಿನ ಜನರು ಭಾರೀ ಶ್ರದ್ದಾ, ಭಕ್ತಿ ಇಟ್ಟು ಪೂಜಿಸುತ್ತಿದ್ದಾರೆ. ಕೊರಗಜ್ಜನಿಗೆ ಮಂಗಳೂರಿನ ಹಲವು ಕಡೆ ದೈವಸ್ಥಾನಗಳಿವೆ. ಇಲ್ಲಿಗೆ ಭಕ್ತರು ಭೇಟಿ ನೀಡಿ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಾರೆ. ಅಜ್ಜನ ಬಳಿ ಕಷ್ಟಗಳು ಹೇಳಿ ಹೋದರೆ ಖಂಡಿತವಾಗಿಯು ಪರಿಹಾರ ಮಾಡುತ್ತಾನ ಎಂಬ ನಂಬಿಕೆ ಇದೆ. ಇಂತಹ ಅನೇಕ ಪವಾಡಗಳು ಇಲ್ಲಿ ನಡೆದಿದೆ.
from India & World News in Kannada | VK Polls https://ift.tt/31BJpJ5