ಶಶಿಧರ ಹೆಗಡೆ ಬೆಂಗಳೂರು ಬೆಂಗಳೂರು: ರಾಜ್ಯದಲ್ಲಿ ಸಂಪೂರ್ಣವಾಗಿ ಸಂಬಂಧ 1964ರ ಗೋವಧೆ ಪ್ರತಿಬಂಧಕ ಬರಖಾಸ್ತುಗೊಳಿಸಲು ಸರಕಾರ ಸಜ್ಜಾಗುತ್ತಿದೆ. ಈ ನಿಟ್ಟಿನಲ್ಲಿ 2010ರಲ್ಲಿ ಮಂಡಿಸಿದ್ದ ವಿಧೇಯಕಕ್ಕೆ ಸೂಕ್ತ ತಿದ್ದುಪಡಿಯೊಂದಿಗೆ ಮರು ಜೀವ ನೀಡಲು ಯತ್ನಿಸಲಾಗುತ್ತಿದೆ. ಈ ಹಿಂದೆ ಬಿಜೆಪಿ ಸರಕಾರವಿದ್ದಾಗಲೂ(2008-2013) ಈ ಕುರಿತ ಪ್ರಯತ್ನ ನಡೆದಿತ್ತು. ಆದರೆ, ಪೂರ್ಣ ಪ್ರಮಾಣದಲ್ಲಿ ಗೋಹತ್ಯೆ ನಿಷೇಧಕ್ಕೆ ಕಾಯಿದೆ ಜಾರಿಗೊಳಿಸುವ ಬಿಜೆಪಿಯ ಉತ್ಸಾಹಕ್ಕೆ ಅಂದಿನ ರಾಜ್ಯಪಾಲರೇ ಕಡಿವಾಣ ಹಾಕಿದ್ದರು. ಹಾಗಾಗಿ 1964ರ ಕಾಯಿದೆಯೇ ರಾಜ್ಯದಲ್ಲಿ ಚಾಲ್ತಿಯಲ್ಲಿದೆ. ಈ ಕಾಯಿದೆ ಗೋಸಂರಕ್ಷಣೆಗೆ ಬೇಕಾದಷ್ಟು ಬಲಾಢ್ಯವಾಗಿಲ್ಲ. ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುವವರ ವಿರುದ್ಧ ಕಟ್ಟುನಿಟ್ಟು ಕ್ರಮ ಕೈಗೊಳ್ಳಲು ಈ ಕಾಯಿದೆಯಲ್ಲಿ ಅವಕಾಶ ಇಲ್ಲ ಎನ್ನುವುದು ಬಿಜೆಪಿಯ ವಾದ. ಸಣ್ಣಪುಟ್ಟ ತಿದ್ದುಪಡಿಯೊಂದಿಗೆ 2010ರ ವಿಧೇಯಕ ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗುವ ನಿರೀಕ್ಷೆಯಿದೆ. ಈ ಪ್ರಸ್ತಾವಕ್ಕೆ ಈಗಾಗಲೇ ಪ್ರತಿಪಕ್ಷ ಕಾಂಗ್ರೆಸ್ ವಿರೋಧಿಸಿದೆ. 'ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಹಾಗೂ ಸಂರಕ್ಷಣಾ ವಿಧೇಯಕ-2010' ಅನ್ನು ತನ್ನ ಹಿಂದಿನ ಅವಧಿಯಲ್ಲಿ ಬಿಜೆಪಿ ಸರಕಾರ ಮಂಡಿಸಿತ್ತು. ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕಾರಗೊಂಡ ಈ ವಿಧೇಯಕಕ್ಕೆ ಅಂದಿನ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅಂಕಿತ ಹಾಕಿರಲಿಲ್ಲ. ಬದಲಾಗಿ ರಾಷ್ಟ್ರಪತಿಗೆ ಕಳುಹಿಸಿ ಕೊಟ್ಟಿದ್ದರು. ನಂತರ ವಿಧೇಯಕದಲ್ಲಿ ಕೆಲ ಬದಲಾವಣೆಗೆ (ಎಮ್ಮೆ, ಕೋಣಗಳ ಹತ್ಯೆ ನಿಷೇಧ ಕೈಬಿಡಲು) ಕೇಂದ್ರ ಗೃಹ ಸಚಿವಾಲಯ ಸೂಚಿಸಿತ್ತು. ಅದರಂತೆ 2012ರಲ್ಲಿ ತಿದ್ದುಪಡಿ ವಿಧೇಯಕ ಮಂಡಿಸಲಾಯಿತು. ಆದರೆ, ಅದಕ್ಕೂ ರಾಜ್ಯಪಾಲ ಭಾರದ್ವಾಜ್ ಅಂಕಿತ ಹಾಕಿರಲಿಲ್ಲ. ಅದಾದ ಬಳಿಕ ಸಾರ್ವತ್ರಿಕ ಚುನಾವಣೆ ನಡೆದು ಕಾಂಗ್ರೆಸ್ ಸರಕಾರ ರಚನೆಯಾಯಿತು. ಬಿಜೆಪಿ ಪಾಸು ಮಾಡಿಕೊಂಡಿದ್ದ ವಿಧೇಯಕ ಹಿಂಪಡೆದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ 1964ರ ಕಾಯಿದೆ ಮುಂದುವರಿಸುವ ನಿರ್ಧಾರ ಪ್ರಕಟಿಸಿತು. ಇದರಿಂದಾಗಿ ರಾಜ್ಯದಲ್ಲಿ ಸಂಪೂರ್ಣವಾಗಿ ಗೋಹತ್ಯೆ ನಿಷೇಧಿಸಬೇಕೆಂಬ ಬಿಜೆಪಿ ಹಾಗೂ ಸಂಘ ಪರಿವಾರದ ಆಶಯ ಈಡೇರಲಿಲ್ಲ. ಈ ಸಂಬಂಧ 2008ರ ಪ್ರಣಾಳಿಕೆಯಲ್ಲೂ ಭರವಸೆ ನೀಡಲಾಗಿತ್ತು. ಬಳಿಕ 2018ರ ಪ್ರಣಾಳಿಕೆಯಲ್ಲೂಈ ಅಂಶ ಸೇರಿಸಲಾಗಿತ್ತು. 2010ರ ವಿಧೇಯಕದಲ್ಲಿಏನಿತ್ತು?
- ರಾಜ್ಯದಲ್ಲಿ ಗೋಹತ್ಯೆಯನ್ನು ಸಂಪೂರ್ಣ ನಿಷೇಧಿಸುವುದು 2010ರ ವಿಧೇಯಕದ ಉದ್ದೇಶವಾಗಿತ್ತು. ಈ ಸಂಬಂಧ 1964ರ ಗೋವಧೆ ಪ್ರತಿಬಂಧಕ ಕಾಯಿದೆಗೆ ತಿದ್ದುಪಡಿ ತರಲಾಗಿತ್ತು.
- ಗೋವಧೆ(ಹಸು, ಕರು, ಎತ್ತು, ಹೋರಿ ಸೇರಿ) ಸಂಪೂರ್ಣ ನಿಷೇಧ.
- ಜತೆಗೆ ಎಮ್ಮೆ, ಕೋಣಗಳ ಹತ್ಯೆಯೂ ನಿಷೇಧ.
- 1964ರ ಕಾಯಿದೆ ಅನುಸಾರ ಜಾನುವಾರುಗಳ ಗರಿಷ್ಠ ಅವಧಿ 15 ವರ್ಷ. ಅದರಂತೆ ಹಾಲು ಕೊಡದ, ಉಪಯೋಗಕ್ಕೆ ಬಾರದ ಮುದಿಯಾದ ಗೋವುಗಳ ವಧೆ ಮಾಡುವುದಿದ್ದರೆ ನಿರ್ದಿಷ್ಟ ಪ್ರಾಧಿಕಾರದ ಅನುಮತಿ ಅಗತ್ಯ.
- ಗೋಹತ್ಯೆ ಮಾಡುವವರು ಹಾಗೂ ಗೋಹತ್ಯೆಗೆ ಪ್ರೇರೇಪಿಸುವವರಿಗೆ 1 ರಿಂದ 7 ವರ್ಷದವರೆಗೆ ಜೈಲು ಶಿಕ್ಷೆ. ಜತೆಗೆ 25 ಸಾವಿರ ರೂ. ದಿಂದ 50 ಸಾವಿರ ರೂ. ದಂಡ. ಒಮ್ಮೆ ದಂಡ ಶಿಕ್ಷೆಯಾದ ಬಳಿಕ ಪುನಃ ಈ ಕೃತ್ಯವೆಸಗಿದರೆ 1 ಲಕ್ಷ ರೂ. ವರೆಗೆ ದಂಡ ವಿಧಿಸಲು ಅವಕಾಶ.
- ಗೋವು ಎಂದರೆ ಹಾಲು ಕರೆಯುವ ಅರ್ಥಕ್ಕೆ ಸೀಮಿತ.
- ಹೋರಿ, ಎತ್ತು, ಎಮ್ಮೆ, ಕೋಣಗಳು ಇದರ ವ್ಯಾಪ್ತಿಗೆ ಬಾರದು.
- ಹಾಲು ಕರೆಯುವ ಹಸುವನ್ನು 12 ವರ್ಷದ ವರೆಗೆ ಹತ್ಯೆ ಮಾಡುವಂತಿಲ್ಲ.
- ಗೋವಧೆ ಪ್ರಕರಣದಲ್ಲಿ ವಿಧಿಸುವ ದಂಡ ಅತ್ಯಲ್ಪ.
from India & World News in Kannada | VK Polls https://ift.tt/33DSC52