ನಂದೀಶ ಕುಮಾರ್ ದಾವಣಗೆರೆ: ವಿದ್ಯುತ್ ಇಲ್ಲದಿದ್ದ ವೇಳೆ ಬುಡ್ಡಿ ದೀಪ ಬಳಸುತ್ತಿದ್ದ ಜನ ಈಗ ಯುಪಿಎಸ್ ಮೊರೆ ಹೋಗುತ್ತಿದ್ದು, ಲೈನ್‌ಮನ್‌ಗಳಿಗೆ ಕೆಲಸ ಹೊಸ ಸವಾಲಾಗಿದೆ. ಹರಿಹರದಲ್ಲಿ ವಿದ್ಯುತ್ ಕಂಬ ಸ್ಥಳಾಂತರ ಕಾಮಗಾರಿಯಲ್ಲಿ ತೊಡಗಿದ್ದಾಗ ವಿದ್ಯುತ್ ಪ್ರವಹಿಸಿ ಬೆಸ್ಕಾಂನ ಕಾರ್ಮಿಕನೊಬ್ಬ ಮೃತಪಟ್ಟಿದ್ದರೆ, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದರು. ಈ ಸಂದರ್ಭದಲ್ಲಿ ಮೇನ್ ಲೈನ್‌ಗೆ ವಿದ್ಯುತ್ ಸರಬರಾಜು ಕಡಿತ ಮಾಡಲಾಗಿತ್ತು. ಆದರೆ ಲೈನ್‌ನಲ್ಲಿ ವಿದ್ಯುತ್ ಹೇಗೆ ಹರಿಯಿತು ಎಂದು ಬೆಸ್ಕಾಂ ಅಧಿಕಾರಿಗಳು ಬೆನ್ನಟ್ಟಿದಾಗ ಯುಪಿಎಸ್ ಅಥವಾ ಬ್ಯಾಟರಿಯಿಂದ ಮುಖ್ಯ ಲೈನ್‌ಗೆ ವಿದ್ಯುತ್ ವಾಪಸ್ ಹರಿದು ಲೈನ್‌ಮನ್ ಪಡೆಯಿತು ಎಂದು ಶಂಕಿಸಲಾಗಿದೆ. ಸಣ್ಣ ಕುಟುಂಬದಲ್ಲಿ ವಿದ್ಯುತ್ ಇಲ್ಲದಾಗ ಬೆಳಕಿಗಾಗಿ ಕೆಲವರು 600 ಕಿಲೋವ್ಯಾಟ್ ಬ್ಯಾಟರಿ ಇರುವ ಯುಪಿಎಸ್ ಹಾಕಿಕೊಳ್ಳುತ್ತಿದ್ದರೆ, ಪ್ರತಿಷ್ಠಿತ ಮನೆಗಳಲ್ಲಿನ ಜನರು ಮಿಕ್ಸರ್, ಫ್ಯಾನ್, ಟಿವಿ ಬಳಕೆಗಾಗಿ 1000 ಕಿಲೋವ್ಯಾಟ್ ಬ್ಯಾಟರಿ ಇರುವ ಯುಪಿಎಸ್ ಅಳವಡಿಸಿಕೊಳ್ಳುತ್ತಿದ್ದಾರೆ. ಕೆಲವರು ಮನೆ ಕಟ್ಟುವಾಗಲೇ ಯುಪಿಎಸ್‌ನ್ನು ಹಾಕುತ್ತಿದ್ದಾರೆ. ಆದರೆ ಅವುಗಳು ಕೆಟ್ಟುಹೋದಾಗ ಮಾತ್ರ ರಿಪೇರಿ ಮಾಡಿಸಲು ಅಸಡ್ಡೆ ತೋರುವ ಪರಿಣಾಮ ಅಮಾಯಕರ ಜೀವ ಬಲಿಯಾಗುತ್ತಿದೆ. ಇನ್ನು ಎಲೆಕ್ಟ್ರೀಷಿಯನ್‌ಗಳಿಗೆ ಯುಪಿಎಸ್ ಅಳವಡಿಕೆ ಮಾಡುವ ಸಂದರ್ಭದಲ್ಲಿ ಇದ್ದ ಉತ್ಸಾಹ ದುರಸ್ತಿ ಮಾಡುವ ವೇಳೆ ಇರುವುದಿಲ್ಲ. ಕೆಲವರಿಗೆ ಇದರ ಸೂಕ್ಷ್ಮ ತಿಳಿಯದಿರುವ ಕಾರಣ ಸಬೂಬು ಹೇಳುತ್ತಾರೆ. ಜಿಲ್ಲೆಯಲ್ಲಿ ಅಂದಾಜು ಶೇ.60ಕ್ಕೂ ಹೆಚ್ಚು ಜನರು ಯುಪಿಎಸ್ ಮೇಲೆ ಅವಲಂಭಿತರಾಗಿದ್ದು, ಸಣ್ಣ ಪುಟ್ಟ ಮನೆಯವರು ಅಳವಡಿಸಿಕೊಂಡ ಯುಪಿಎಸ್‌ನಿಂದ ತೊಂದರೆಯಾಗುತ್ತಿಲ್ಲ. ಆದರೆ ಹೆಚ್ಚು ಕಿಲೋ ವ್ಯಾಟ್ ಬಳಸುವ ಪ್ರತಿಷ್ಠಿತ ಮನೆಯವರಿಂದ ತೊಂದರೆಯಾಗುತ್ತಿದೆ. ನಕಲಿ ವ್ಯವಸ್ಥೆ ಎಲ್ಲೆಡೆ ಹಾಸು ಹೊಕ್ಕಾಗಿದ್ದು ಯುಪಿಎಸ್ ಅಳವಡಿಕೆ ಮಾಡುವ ಕೆಲವರು ಕ್ವಾಲಿಟಿ ಇಲ್ಲದ ಬ್ಯಾಟರಿ, ವೈರ್‌ಗಳನ್ನು ಹಾಕುತ್ತಿದ್ದಾರೆ. ಮನೆ ಮಾಲೀಕರಿಗೂ ಯಾವುದು ಒರಿಜಿನಲ್, ಕಳಪೆ ಎಂದು ಗೊತ್ತಾಗುವುದಿಲ್ಲ. ಇನ್ನು ಕೆಲವರು ಚೌಕಾಸಿ ಮಾಡುವ ಕಾರಣ ಆ ಹಣಕ್ಕೆ ತಕ್ಕಂತೆ ಯುಪಿಎಸ್ ಹಾಕುತ್ತಿದ್ದಾರೆ. ಹಣದ ಬಗ್ಗೆ ಯೋಚಿಸಬೇಡಿ, ಐಎಸ್‌ಐ ಮಾರ್ಕ್ ಇರುವ ಯುಪಿಎಸ್‌ಗಳನ್ನೇ ಅಳವಡಿಸಿಕೊಳ್ಳಿ ಎಂದು ಬೆಸ್ಕಾಂ ಹೇಳುತ್ತಿದ್ದು, ಅಳವಡಿಕೆ ನಂತರ ಪರಿಶೀಲನೆ ಮಾಡಬೇಕು ಎನ್ನುತ್ತಿದೆ. ಇದಾವುದೂ ಸರಿಯಾಗಿ ನಡೆಯದ ಕಾರಣ ಕರೆಂಟ್ ಹೋದಾಗ ಮನೆ ಬೆಳಗಬೇಕಾದ ವಿದ್ಯುತ್ ಮುಖ್ಯ ಲೈನ್‌ದಲ್ಲಿ ರಿವರ್ಸ್ ಪ್ರವಹಿಸಿ ಲೈನ್‌ಮನ್‌ಗಳ ಜೀವಕ್ಕೆ ಅಪಾಯವೊಡ್ಡಿದೆ. ವಿದ್ಯುತ್ ರಿಟರ್ನ್ ಹರಿಯುತ್ತದೆ ಯುಪಿಎಸ್ ಬ್ಯಾಟರಿಯನ್ನು ಜಾರ್ಜ್ ಮಾಡುವ ವೇಳೆ ಮೇನ್ ಲೈನ್‌ನಿಂದ ಬರುವ ಕರೆಂಟ್‌ನ್ನು ಉಪಯೋಗಿಸಿಯೇ ಜಾರ್ಜ್ ಮಾಡಲಾಗಿರುತ್ತದೆ. ಇದೇ ಕರೆಂಟ್ ವಿದ್ಯುತ್ ಇಲ್ಲದಾಗ ಪ್ರವಹಿಸಿ ಮನೆಯಲ್ಲಿ ಬೆಳಕು ಮೂಡುತ್ತದೆ. ಒಂದು ವೇಳೆ ಯುಪಿಎಸ್ ವೈರ್, ಬ್ಯಾಟರಿ ಹಾಳಾಗಿದ್ದರೆ, ಚಾರ್ಜ್ ಆಗಿದ್ದ ವಿದ್ಯುತ್ ಪುನಃ ಮೇನ್‌ವೈರ್‌ಗೆ ಹರಿಯುತ್ತದೆ. ಇದು ದುರಸ್ತಿ ವೇಳೆ ಕಂಬ ಹತ್ತಿದವರ ಜೀವಕ್ಕೆ ಮಾರಕವಾಗುತ್ತದೆ. ಕೆಲವೊಮ್ಮೆ ಮನೆಯಲ್ಲಿರುವವರ ಜೀವಕ್ಕೂ ಕುತ್ತು ತರಬಹುದು. ಸಣ್ಣ ಮನೆಯಲ್ಲಿನ ಕೆಲವರು ಕಂಪ್ಯೂಟರ್, ಮೊಬೈಲ್, ಬಲ್ಬ್ ಚಾರ್ಜ್‌ಗಾಗಿ ಯುಪಿಎಸ್ ಅಳವಡಿಸಿಕೊಂಡಿರುತ್ತಾರೆ. ಇದರಿಂದ ಅಷ್ಟೇನೂ ವಿದ್ಯುತ್ ರಿಟರ್ನ್ ಆಗೋದಿಲ್ಲ. ಜಾಸ್ತಿ ವ್ಯಾಟ್ ಬಳಸಿ ಯುಪಿಎಸ್ ಅಳವಡಿಸಿಕೊಂಡಿರುವವರು ಕೆಟ್ಟುಹೋದ ವೇಳೆ ಅದನ್ನು ಶೀಘ್ರ ರಿಪೇರಿ ಮಾಡಿಸಬೇಕು. 'ಸಾಮಾನ್ಯವಾಗಿ ಯುಪಿಎಸ್ ಕೆಟ್ಟು ಹೋದ ವೇಳೆ ಕರೆಂಟ್ ಪುನಃ ಮೇನ್‌ಗೆ ಹರಿಯುತ್ತದೆ. ಯಾರ ಮನೆಯಲ್ಲಿ ಯುಪಿಎಸ್ ಕೆಟ್ಟು ಹೋಗಿ, ಕರೆಂಟ್ ರಿಟರ್ನ್ ಆಗಿದೆ ಎಂದು ಗೊತ್ತಾಗುವುದಿಲ್ಲ. ಇದನ್ನು ಕಂಡುಹಿಡಿಯವುದು ಸಾಕಷ್ಟು ಕಷ್ಟವಾಗುತ್ತದೆ. ಆದ್ದರಿಂದ ಐಎಸ್‌ಐ ಮಾರ್ಕ್ ಇರುವ ಬ್ಯಾಟರಿ, ವೈರ್‌ಗಳನ್ನು ತಂದು ಯುಪಿಎಸ್ ಅಳವಡಿಸಬೇಕು' ಎಂದು ಬೆಸ್ಕಾಂ ಎಸ್‌ಇ ಸುಬಾಷ್‌ಚಂದ್ರ ಮನವಿ ಮಾಡಿದ್ದಾರೆ.
from India & World News in Kannada | VK Polls https://ift.tt/3loy8mU