ಬೆಂಗಳೂರು: ಇಪ್ಪತೈದು ಕಾರುಗಳನ್ನು ಇಟ್ಟುಕೊಂಡು ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ ವ್ಯಕ್ತಿಯೊಬ್ಬ, ದಿಢೀರ್ ಹಣ ಗಳಿಸಲು ಕಾರಿನಲ್ಲೇ ಮಾರಾಟ ದಂಧೆಗೆ ಇಳಿದು ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಎಸ್.ಜೆ.ಪಾರ್ಕ್ ಪೊಲೀಸರಿಂದ ಬಂಧಿತನಾಗಿರುವ ಪ್ರದೀಪ್ ಕುಮಾರ್ ಎಂಬಾತನಿಂದ 60 ಕೆ.ಜಿ 835 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ಸುಮಾರು 30 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ. ನ.20ರಂದು ಮಧ್ಯಾಹ್ನ ಎನ್.ಎಂ.ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕಟ್ಟಡದ ಮುಂಭಾಗದಲ್ಲಿ ಕಾರಿನಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿರುವ ಮಾಹಿತಿ ಆಧರಿಸಿ ಪ್ರದೀಪ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆರೋಪಿಯ ಕಾರನ್ನು ಪರಿಶೀಲಿಸಿದಾಗ ಮೂಟೆಗಳಲ್ಲಿ ತುಂಬಿದ್ದ ಕೆ.ಜಿ.ಗಟ್ಟಲೇ ಗಾಂಜಾ ಸಿಕ್ಕಿದೆ. ಆರೋಪಿ ಪ್ರದೀಪ್, ಟ್ರಾನ್ಸ್‌ಪೋರ್ಟ್ ಸಲ್ಯೂಷನ್ಸ್ ಎಂಬ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದಾನೆ. ಅದರ ಜತೆಗೆ ಕಳೆದ ಐದು ವರ್ಷಗಳಿಂದ ಕೋಲಾರದ ವಾಸೀಂ ಎಂಬಾತನಿಂದ ಗಾಂಜಾ ಖರೀದಿಸಿ ತನ್ನದೇ ಟ್ರಾವೆಲ್ಸ್ ಕಾರಿನಲ್ಲಿ ಗಾಂಜಾ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
from India & World News in Kannada | VK Polls https://ift.tt/2VmFYmy