ಹೊಸದಿಲ್ಲಿ: ಮೆಲ್ಬೋರ್ನ್ ಕ್ರಿಕೆಟ್ ಕ್ರಿಡಾಂಗಣದಲ್ಲಿ ಶನಿವಾರದಿಂದ ಆರಂಭವಾದ ಪಂದ್ಯದ ಮೊದಲನೇ ದಿನ ಭಾರತ ತಂಡದ ಪ್ರದರ್ಶನವನ್ನು ಕಾಯಂ ನಾಯಕ ವಿರಾಟ್ ಕೊಹ್ಲಿ ಶ್ಲಾಘಿಸಿದ್ದಾರೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ತಂಡದ ಮೇಲೆ ಪ್ರವಾಸಿ ತಂಡದ ಬೌಲರ್‌ಗಳು ಮಾರಕ ದಾಳಿ ನಡೆಸಿದರು. ಪ್ರಥಮ ಇನಿಂಗ್ಸ್‌ನಲ್ಲಿ ಎದುರಾಳಿ ಆಸ್ಟ್ರೇಲಿಯಾ ತಂಡವನ್ನು 195 ರನ್‌ಗಳಿಗೆ ಆಲೌಟ್ ಮಾಡಿದ ಬಳಿಕ ಭಾರತದ ಪ್ರದರ್ಶನವನ್ನು ಮುಕ್ತಕಂಠದಿಂದ ಗುಣಗಾನ ಮಾಡಿದರು. "ಮೊದಲನೇ ದಿನ ನಾವು ಮುನ್ನಡೆ ಸಾಧಿಸಿದ್ದೇವೆ. ಬೌಲರ್‌ಗಳಿಂದ ಅದ್ಭುತ ಪ್ರದರ್ಶನ ಮೂಡಿಬಂದಿದೆ ಹಾಗೂ ಅತ್ಯುತ್ತಮವಾಗಿ ಮೊದಲನೇ ದಿನವನ್ನು ಮುಗಿಸಿದ್ದೇವೆ," ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ. ಜನವರಿ ಆರಂಭದಲ್ಲಿ ಮೊದಲನೇ ಮಗುವಿನ ನಿರೀಕ್ಷೆಯಲ್ಲಿರುವ ವಿರಾಟ್ ಕೊಹ್ಲಿ, ಅಡಿಲೇಡ್ ಟೆಸ್ಟ್ ಮುಗಿಸಿಕೊಂಡು ಪಿತೃತ್ವ ರಜೆಯ ಮೇಲೆ ಈಗಾಗಲೇ ಭಾರತಕ್ಕೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅಜಿಂಕ್ಯ ರಹಾನೆ, ಇನ್ನುಳಿದ ಮೂರು ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸುತ್ತಿದ್ದಾರೆ. ಮೊದಲನೇ ದಿನದ ಮುಕ್ತಾಯಕ್ಕೆ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 11 ಓವರ್‌ಗಳ ಮುಕ್ತಾಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿದೆ. ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯದ ಮೊದಲನೇ ದಿನ ಸಕಾರಾತ್ಮಕ ಬ್ಯಾಟಿಂಗ್ ಮಾಡಿದ ಯುವ ಓಪನರ್ ಶುಭಮನ್ ಗಿಲ್ ಅಜೇಯ 28 ರನ್ ಗಳಿಸಿದ್ದರೆ, ಮತ್ತೊಂದು ತುದಿಯಲ್ಲಿ ಚೇತೇಶ್ವರ ಪೂಜಾರ್ 7 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ ನಾಲ್ಕು ಓವರ್‌ಗಳು ಬೌಲಿಂಗ್ ಮಾಡಿ 14 ರನ್ ನೀಡಿ ಒಂದು ವಿಕೆಟ್ ಪಡೆದಿದ್ದಾರೆ. ಪ್ಯಾಟ್ ಕಮಿನ್ಸ್ ಕೂಡ ನಾಲ್ಕು ಓವರ್ ಬೌಲಿಂಗ್ ಮಾಡಿದ್ದರು, ಆದರೆ ಅವರಿಗೆ ಒಂದೂ ವಿಕೆಟ್ ಸಿಗಲಿಲ್ಲ. ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡದ ಮೇಲೆ ಭಾರತದ ಬೌಲರ್‌ಗಳು ಮಾರಕ ದಾಳಿ ನಡೆಸಿದ್ದರು. ಜಸ್‌ಪ್ರಿತ್ ಬುಮ್ರಾ ಹಾಗೂ ಆರ್ ಅಶ್ವಿನ್ ಮಾರಕ ದಾಳಿಗೆ ನಲುಗಿದ ಆಸ್ಟ್ರೇಲಿಯಾ 72.3 ಓವರ್‌ಗಳಿಗೆ ಪ್ರಥಮ ಇನಿಂಗ್ಸ್‌ನಲ್ಲಿ 195 ರನ್‌ಗಳಿಗೆ ಆಲೌಟ್ ಆಯಿತು. ಮಾರ್ನಸ್ ಲಾಬುಶೇನ್ 48, ಟ್ರಾವಿಸ್ ಹೆಡ್ 38 ಹಾಗೂ ಮ್ಯಾಥ್ಯೂ ವೇಡ್ 30 ರನ್ ಗಳಿಸಿದ್ದು ಬಿಟ್ಟರೆ ಇನ್ನುಳಿದವರು ವಿಫಲರಾದರು. ಭಾರತದ ಪರ ಜಸ್‌ಪ್ರಿತ್ ಬುಮ್ರಾ 56 ರನ್ ನೀಡಿ 4 ವಿಕೆಟ್ ಪಡೆದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2KEZQzx