ಸುಕ್ನಾ: ಎರಡು ದಿನಗಳ ಪಶ್ಚಿಮ ಬಂಗಾಳ ಹಾಗೂ ಸಿಕ್ಕಿಂ ಪ್ರವಾಸದಲ್ಲಿರುವ ರಕ್ಷಣಾ ಸಚಿವ , ಇಂದು(ಅ.25)ಡಾರ್ಜಿಲಿಂಗ್ ಜಿಲ್ಲೆಯ ಸುಕ್ನಾದಲ್ಲಿರುವ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಹುತಾತ್ಮರಿಗೆ ಗೌರವ ಸಲ್ಲಿಸಿದರು. ವಿಜಯದಶಮಿ ಅಂಗವಾಗಿ ನೆರವೇರಿಸಿದ ರಾಜನಾಥ್ ಸಿಂಗ್, ಸುಕ್ನಾ ಸೇನಾ ನೆಲೆಯಲ್ಲಿ ಭಾರತೀಯ ಸೇನೆಯ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಗೆ ವಿಶೇಷ ಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ರಾಜನಾಥ್ ಸಿಂಗ್, ಭಾರತ ಯಾವತ್ತಿಗೂ ತನ್ನ ನೆರೆಯ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತದೆ. ಆದರೆ ಕಾಲ ಕಾಲಕ್ಕೆ ತನ್ನ ದೇಶದ ಸಾರ್ವಭೌಮತ್ಯ ಮತ್ತು ಪ್ರಾಂತೀಯ ಐಕ್ಯತೆಯನ್ನು ಕಾಪಾಡಲು ಸರ್ವಶ್ರೇಷ್ಟ ತ್ಯಾಗಗಳನ್ನು ಮಾಡಲು ನಮ್ಮ ಸೇನೆ ಹಿಂಜರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಭಾರತೀಯ ಸೇನೆಯ 33 ಕಾರ್ಪ್ಸ್ ನ ಸೈನಿಕರನ್ನುದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಕಳೆದ ಜೂನ್ 15ರಂದು ಗಲ್ವಾನ್ ಕಣಿವೆ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾದರು. ಅವರ ತ್ಯಾಗ ಬಲಿದಾನವನ್ನು ಭಾರತ ಎಂದಿಗೂ ಮರೆಯುವುದಿಲ್ಲ ಎಂದು ಭಾವುಕರಾದರು. ಭಾರತ ಯಾವತ್ತಿಗೂ ನೆರೆ ದೇಶಗಳೊಂದಿಗೆ ಯುದ್ಧ, ಸಂಘರ್ಷವನ್ನು ಬಯಸುವುದಿಲ್ಲ. ನೆರೆ ದೇಶಗಳೊಂದಿಗೆ ಯಾವತ್ತಿಗೂ ಶಾಂತಿಯನ್ನೇ ಬಯಸುತ್ತದೆ. ಆದರೆ ಕೆಲವೊಂದು ಸಂದರ್ಭದಲ್ಲಿ ಎದುರಾಗುವ ಸನ್ನಿವೇಶಗಳು ನಮ್ಮ ಸ್ವಾಯತ್ತತೆ ಮತ್ತು ಪ್ರಾಂತೀಯ ಐಕ್ಯತೆಯನ್ನು ಕಾಪಾಡಲು ಶಸ್ತ್ರಗಳನ್ನು ಕೈಗೆತ್ತಿಕೊಳ್ಳುವ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ ಎಂದು ರಾಜನಾಥ್ ನುಡಿದರು. ಲಡಾಖ್ ಗಡಿ ಸಮಸ್ಯೆ ಇತ್ಯರ್ಥಕ್ಕೆ ಚೀನಾದೊಂದಿಗೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿವೆ. ಶಾಂತಿಯುತ ಮಾತುಕತೆಗಳಿಂದ ಮಾತ್ರ ಗಡಿ ಸಮಸ್ಯೆ ಬಗೆಹರಿಯಲು ಸಾಧ್ಯ ಎಂಬುದು ಭಾರತದ ನಿಲುವು ಎಂದು ರಕ್ಷಣಾ ಸ ಚಿವರು ಪುನರುಚ್ಛಿಸಿದರು. ಆದರೆ ಭಾರತದ ಸಾರ್ವಭೌಮತೆ ಕಾಪಾಡುವಲ್ಲಿ ಯಾವುದೇ ರಾಜಿಗೆ ಸಿದ್ಧವಿಲ್ಲ ಎಂದ ರಾಜನಾಥ್ ಸಿಂಗ್, ನಮ್ಮ ರಕ್ಷಣಾ ಪಡೆಗಳು ಒಂದಿಂಚು ಭೂಮಿಯನ್ನೂ ಯಾರೂ ಕಸಿದುಕೊಳ್ಳಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
from India & World News in Kannada | VK Polls https://ift.tt/3orszXJ