
ತಿರುವನಂತಪುರಂ: ಪ್ರಪಂಚವನ್ನು ಬೆಚ್ಚಿಬೀಳಿಸಿರುವ ಕುರಿತಾಗಿ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಮೂವರು ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಚೀನಾದಲ್ಲಿ ಕಂಡುಬಂದಿರುವ ಕೊರೊನಾ ವೈರಸ್‌ಗೆ 304 ಮಂದಿ ಬಲಿಯಾಗಿದ್ದಾರೆ. ನೆರೆ ರಾಜ್ಯ ಕೇರಳದಲ್ಲಿ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಅಧಿಕೃತವಾಗಿ ಕೇರಳ ಸರಕಾರ ತಿಳಿಸಿದೆ. ಆದರೆ ಕೊರೊನಾ ಸೋಂಕಿನ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಯನ್ನು ಹರಿಯಬಿಟ್ಟು ಜನರಲ್ಲಿ ಭೀತಿ ಉಂಟುಮಾಡಲು ಪ್ರಯತ್ನಿಸಿದ ಕಾರಣಕ್ಕಾಗಿ ಇವರನ್ನು ಕೇರಳದ ಸೈಬರ್ ಪೊಲೀಸರು ಬಂಧಿಸಿದ್ದಾರೆ. ಸೋಂಕಿನ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಫಾರ್ವರ್ಡ್ ಮಾಡಿದರೆ ಅಂತವರ ವಿರುದ್ಧ ಕೂಡಾ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೇರಳದ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಎಚ್ಚರಿಸಿದ್ದಾರೆ. ಚೀನಾದಲ್ಲಿ ಕೊರೊನಾ ಸೋಂಕು ಕಂಡುಬಂದಿದ್ದು ಭಾರತದಲ್ಲೂ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಚೀನಾದಲ್ಲಿರುವ ಭಾರತೀಯರ ಎರಡನೇ ತಂಡವನ್ನು ಸುರಕ್ಷಿತವಾಗಿ ವಾಪಸ್ ಕರೆತರಲಾಗಿದೆ.
from India & World News in Kannada | VK Polls https://ift.tt/2Oml0Rs