ಮುಂಬಯಿ: 26/11 ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಉಗ್ರ ಕ್ಯಾಂಪ್‌ಗಳ ಮೇಲೆ ದಾಳಿ ನಡೆಸಲು ಮುಂದಾಗಿತ್ತು. ಆದರೆ ಅಂದಿನ ಯುಪಿಎ ಸರಕಾರ ಅನುಮತಿ ನೀಡಲಿಲ್ಲ ಎಂದು ವಾಯು ಪಡೆಯ ಮಾಜಿ ಮುಖ್ಯಸ್ಥ ಹೇಳಿಕೆ ನೀಡಿದ್ದು, ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಮುಂಬಯಿನ ವೀರಮಾತಾ ಜೀಜಾಬಾಯಿ ಟೆಕ್ನಾಲಾಜಿಕಲ್ ಇನ್ಸ್‌ಟಿಟ್ಯೂಟ್ (ವಿಜೆಟಿಐ) ನ ಟೆಕ್ನೊವಂಜಾ ಫೆಸ್ಟಿವಲ್‌ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಧನೋವಾ, ''ಪಾಕಿಸ್ತಾನದಲ್ಲಿ ಉಗ್ರರ ಕ್ಯಾಂಪ್‌ಗಳು ಎಲ್ಲಿವೆ ಎಂಬುದು ನಮಗೆ ತಿಳಿದಿತ್ತು. ದಾಳಿ ನಡೆಸಲು ಸಿದ್ಧವಾಗಿದ್ದೆವು. ದಾಳಿಯನ್ನು ನಡೆಸಬೇಕೋ ಅಥವಾ ಬೇಡವೋ ಎಂಬುದು ರಾಜಕೀಯ ನಿರ್ಧಾರಕ್ಕೆ ಅವಲಂಬಿತವಾಗಿತ್ತು'' ಎಂದಿದ್ದಾರೆ. ಧನೋವಾ ಅವರು ಡಿಸೆಂಬರ್ 31, 2016ರಿಂದ ಸೆಪ್ಟಂಬರ್ 30, 2019ರ ವರೆಗೆ ವಾಯು ಸೇನೆಯ ಮುಖ್ಯಸ್ಥರಾಗಿದ್ದರು. ''2001 ಡಿಸೆಂಬರ್‌ನಲ್ಲಿ ಸಂಸತ್ತಿನ ಮೇಲೆ ದಾಳಿ ನಡೆಸಿದ ನಂತರ ವಾಯು ಪಡೆಯುವ ಸರ್ಜಿಕಲ್ ದಾಳಿ ಮೂಲಕ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿತ್ತು. ಆದರೆ ಈ ಬಗೆಗಿನ ಕೋರಿಕೆಯನ್ನು ಸರಕಾರ ತಿರಸ್ಕರಿಸಿತು. ಪಾಕಿಸ್ತಾನದ ಜನತೆ ಭಾರತದ ಉದಾತ್ತ ನಿರ್ಧಾರಕ್ಕೆ ಋಣಿಯಾಗಿದೆ'' ಎಂದು ಧನೋವಾ ವಿವರಿಸಿದ್ದಾರೆ. ಶಾಂತಿಯ ಮಾತುಕತೆಗೆ ಬಂದರೆ ಪಾಕಿಸ್ತಾನ ಹಲವು ಬಾರಿ ತನ್ನ ಬದ್ಧತೆಯನ್ನು ಕಳೆದುಕೊಳ್ಳುತ್ತದೆ. ಕಾಶ್ಮೀರದ ವಿಚಾರವನ್ನು ಪಾಕಿಸ್ತಾನ ಎಂದೂ ಇತ್ಯರ್ಥಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಕಾಶ್ಮೀರ ವಿಚಾರ ಕುದಿಯುತ್ತಲೇ ಇರುವಂತೆ ನೋಡಿಕೊಳ್ಳುತ್ತದೆ. ಯುದ್ಧದ ಪ್ರಪಗಾಂಡಗಳನ್ನು ಹರಿಯ ಬಿಡುವ ಚಾಳಿಯನ್ನು ಪಾಕಿಸ್ತಾನ ಮುಂದುವರಿಸುತ್ತದೆ. ದಾಳಿಯನ್ನು ಮುಂದುವರಿಸುತ್ತದೆ. ಎಂತಹ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಿದ್ಧ. ನಾಳೆ ಯುದ್ಧ ಎದುರಾದರೂ, ಭೂಪ್ರದೇಶವಿರಲಿ, ವಾಯು ಪ್ರದೇಶವಿರಲಿ ಮತ್ತು ಸಮುದ್ರ ಪ್ರದೇಶವೇ ಎರಲಿ ಎಲ್ಲವನ್ನೂ ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಭಾರತ ಸೇನೆ ಇದೆ ಎಂದರು. 2019ರ ಫೆಬ್ರವರಿ 26ರಂದು ಭಾರತ ಸೇನೆ ನಡೆಸಿದ ಬಾಲಾಕೋಟ್ ದಾಳಿ ಪಾಕಿಸ್ತಾನ ಮತ್ತು ಅಲ್ಲಿನ ವಾಯು ಸೇನೆಗೆ ಅನಿರೀಕ್ಷಿತ ಆಘಾತವನ್ನುಂಟು ಮಾಡಿದೆ. ಐಎಎಫ್ ಬಳಿ ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಯುದ್ಧ ವಿಮಾನಗಳು ಇವೆ. ಮಿರಾಜ್ 2000, ಮಿಗ್-29 ಮತ್ತು ಜಾಗ್ವಾರ್‌ಗಳು ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿವೆ ಎಂದು ಧನೋವಾ ಹೇಳಿದರು.
from India & World News in Kannada | VK Polls https://ift.tt/39hJunS