ಹೊಸದಿಲ್ಲಿ: ವಿಶ್ವದ ಅತಿ ಶ್ರೀಮಂತ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗಾಗಿ ಕಿಂಗ್ಸ್ ಇಲೆವೆನ್ ನಾಯಕರಾಗಿ ಕರ್ನಾಟಕದ ಬಲಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್‌ರನ್ನು ನೇಮಕಗೊಳಿಸಲಾಗಿದೆ. ಈ ಮಧ್ಯೆ ರಾಹುಲ್‌ಗೆ ನಾಯಕ ಪಟ್ಟ ನೀಡಿರುವ ಹಿಂದಿರ ರಹಸ್ಯವನ್ನು ತಂಡದ ನೂತನ ಕೋಚ್ ತಿಳಿಸಿದ್ದಾರೆ. "ಕಿಂಗ್ಸ್ ಇಲೆವನ್ ದೃಷ್ಟಿಕೋನದಿಂದ ಮಾತ್ರವಲ್ಲ, ಅವರ ವೈಯಕ್ತಿಕ ಬೆಳವಣಿಗೆಯಿಂದಲೂ ನಾಯಕತ್ವ ಸ್ಥಾನವನ್ನು ವಹಿಸಲು ಇದು ಸರಿಯಾದ ಸಮಯ ಎಂದು ನಾನು ಭಾವಿಸಿದ್ದೇನೆ. ಏಕೆಂದರೆ ಈ ಜವಾಬ್ದಾರಿಯು ಓರ್ವ ವ್ಯಕ್ತಿಯಾಗಿ ಬೆಳೆಯಲು ನಾಯಕ ಸ್ಥಾನವು ಸಹಾಯ ಮಾಡಲಿದೆ ಎಂದು ನಾನು ಭಾವಿಸುತ್ತೇನೆ. ಇದು ಈ ಪ್ರಕಾರದಲ್ಲಿ ಮಾತ್ರವಲ್ಲದೆ ಬೇರೆ ಪ್ರಕಾರದಲ್ಲೂ ತಮ್ಮ ಆಟವನ್ನು ಮತ್ತಷ್ಟು ನಿಕಟವಾಗಿ ಅರ್ಥಮಾಡಿಕೊಳ್ಳಲು ನೆರವಾಗಲಿದೆ" ಎಂದರು. "ಡ್ರೆಸ್ಸಿಂಗ್ ಕೊಠಡಿಯಲ್ಲೂ ರಾಹುಲ್‌ಗೆ ಅತಿಯಾದ ಗೌರವವಿದ್ದು, ಭಾರತೀಯ ನಾಯಕ ಫ್ರಾಂಚೈಸಿ ಅಭಿವೃದ್ಧಿಗೂ ನೆರವಾಗುವ ನಂಬಿಕೆ ವ್ಯಕ್ತಪಡಿಸಿದರು. ಕೆಎಲ್ ರಾಹುಲ್ ಪ್ರಗತಿಯನ್ನು ಪರಿಗಣಿಸಿ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಫ್ರಾಂಚೈಸಿ ಕಟ್ಟಲು ಓರ್ವ ಭಾರತೀಯ ನಾಯಕ ಅತ್ಯಗತ್ಯ ಎಂದು ನಾನು ಭಾವಿಸಿದ್ದೇನೆ" ಎಂದವರು ತಿಳಿಸಿದರು. "ಕೆಎಲ್ ರಾಹುಲ್ ಕಳೆದೆರಡು ವರ್ಷಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಭಾಗವಾಗಿದ್ದು, ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಆಟಗಾರರಿಂದಲೂ ಉತ್ತಮ ಗೌರವವನ್ನು ಹೊಂದಿದ್ದಾರೆ. ಈ ಪ್ರಕಾರ ನಮ್ಮ ಪಾಲಿಗೆ ಅತ್ಯುತ್ತಮ ಕ್ರಿಕೆಟಿಗನಾಗಿದ್ದಾರೆ" ಎಂದು ನುಡಿದರು. ಅದೇ ಹೊತ್ತಿಗೆ ಕಪ್ತಾನಗಿರಿಯ ಹೆಚ್ಚುವರಿ ಹೊಣೆಯ ಹೊರತಾಗಿಯೂ ಕೆಎಲ್ ರಾಹುಲ್ ಅವರೇ ವಿಕೆಟ್ ಕೀಪರ್ ಜವಾಬ್ದಾರಿಯನ್ನು ವಹಿಸಲಿದ್ದಾರೆಯೇ ಎಂಬುದಕ್ಕೆ ಕುಂಬ್ಳೆ ಉತ್ತರಿಸಿದರು. "ರಾಹುಲ್ ಅವರೇ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸುವರೇ ಎಂಬುದರ ಬಗ್ಗೆ ಖಚಿತತೆಯಿಲ್ಲ. ನಮ್ಮ ತಂಡದಲ್ಲಿ ನಿಕೋಲಸ್ ಪೂರನ್ ಅವರಂತಹ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳಿದ್ದಾರೆ. ಹಾಗಾಗಿ ಐಪಿಎಲ್ ಸನಿಹದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ" ಎಂದರು. ಏತನ್ಮಧ್ಯೆ ಕರ್ನಾಟಕದ ತಂಡದ ಆಟಗಾರರ ಸಾನಿಧ್ಯವು ಉತ್ತಮವಾಗಿ ಪರಿಣಮಿಸಲಿದೆ ಎಂದು ಕುಂಬ್ಳೆ ಸೇರಿಸಿದರು. ಕರ್ನಾಟಕದ ಮಯಾಂಕ್ ಅಗರ್ವಾಲ್, ಕರುಣ್ ನಾಯರ್ ಹಾಗೂ ಕೆ ಗೌತಮ್ ಮುಂತಾದ ಆಟಗಾರರು ರಾಹುಲ್ ಮುಂದಾಳತ್ವದ ಪಂಜಾಬ್ ತಂಡದ ಭಾಗವಾಗಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/397ac2B