ಮತ್ತು ಇಂದು ಪೆಟ್ರೋಲಿಯಂ ಉತ್ಪನ್ನಗಳ ಕೊಳ್ಳುವ ಮಾರುವ ವಹಿವಾಟಿನ ಒಪ್ಪಂದಗಳಿಂದಾಚೆ, ವ್ಯೂಹಾತ್ಮಕ ಸ್ನೇಹ ಸಂಬಂಧಗಳನ್ನು ಬೆಸೆದುಕೊಳ್ಳುತ್ತಿವೆ. ಭಯೋತ್ಪಾದನೆ ತಡೆಯುವುದು ಸೇರಿದಂತೆ ಹಲವು ಭದ್ರತಾ ಕಳವಳಗಳನ್ನು ಎರಡೂ ದೇಶಗಳೂ ಒಂದೇ ರೀತಿಯಲ್ಲಿ ಹಂಚಿಕೊಳ್ಳುತ್ತಿವೆ. ಎರಡೂ ದೇಶಗಳಿಗೂ ಅಕ್ಕಪಕ್ಕದಲ್ಲೇ ಸುರಕ್ಷತೆಯ ಆತಂಕಗಳಿವೆ. ಉಭಯ ದೇಶಗಳೂ ರಕ್ಷಣಾ ಸಹಕಾರಕ್ಕೆ ಸಂಬಂಧಿಸಿ ಜಂಟಿ ಸಮಿತಿಯನ್ನು ಹೊಂದಿದ್ದು, ಪರಸ್ಪರರ ಹಿತಾಸಕ್ತಿಗೆ ಸಂಬಂಧಿಸಿದ ಹಲವು ಸಂಗತಿಗಳಲ್ಲಿ ನಿರಂತರ ಮಾತುಕತೆಯ ಮೂಲಕ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದೇವೆ- ಇದು ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಾದ ವೃತ್ತಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿಹೇಳಿದ ಮಾತು. ಎರಡು ದಿನಗಳ ರಿಯಾದ್ ಭೇಟಿಗಾಗಿ ಸೌದಿಗೆ ಆಗಮಿಸಿರುವ ಪ್ರಧಾನಿ, ತೈಲ ವ್ಯವಹಾರದೊಂದಿಗೆ ರಕ್ಷಣಾ ಸಹಕಾರಕ್ಕೂ ಸಂಬಂಧಿಸಿದ ಹಲವು ಒಪ್ಪಂದ ಮಾಡಿಕೊಳ್ಳುವ ಸೂಚನೆಯನ್ನು ನೀಡಿದ್ದಾರೆ. ಮಂಗಳವಾರ ನಡೆದ 'ದಾವೋಸ್ ಇನ್ ಡೆಸರ್ಟ್' ಹೂಡಿಕೆ ಸಮಾವೇಶದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ, ಸೌದಿ ಅರೇಬಿಯದ ದೊರೆ ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್, ತೈಲ ಸಚಿವ, ಕಾರ್ಮಿಕ ಸಚಿವ, ಪರಿಸರ ಸಚಿವ ಹಾಗೂ ಜೋರ್ಡಾನ್‌ನ ದೊರೆ ಕಿಂಗ್ ಅಬ್ದುಲ್ಲಾರನ್ನು ಭೇಟಿಯಾದರು. ಸೌದಿಯ ವ್ಯಾಪಾರ ವಹಿವಾಟು ಇರಾಕ್‌ನ ನಂತರ ಸೌದಿ ಅರೇಬಿಯಾ ಮಧ್ಯಪ್ರಾಚ್ಯದ ಅತ್ಯಂತ ದೊಡ್ಡ ತೈಲ ಉತ್ಪಾದಕ ಹಾಗೂ ರಫ್ತು ದೇಶ. 2018-19ರ ಸಾಲಿನಲ್ಲಿ ಭಾರತಕ್ಕೆ ಸೌದಿ 403.3 ಲಕ್ಷ ಟನ್‌ಗಳಷ್ಟು ಕಚ್ಚಾ ತೈಲವನ್ನು ರಫ್ತು ಮಾಡಿದೆ. ಕಳೆದ ವರ್ಷ ಭಾರತ ಆಮದು ಮಾಡಿಕೊಂಡ ಒಟ್ಟು ಕಚ್ಚಾ ತೈಲದ ಪ್ರಮಾಣ 2073 ಲಕ್ಷ ಟನ್. ಅಂದರೆ ಸುಮಾರು 20%ದಷ್ಟು ತೈಲ ಸೌದಿಯಿಂದಲೇ ನಮಗೆ ಬರುತ್ತಿದೆ. ಭಾರತ - ಸೌದಿಗಳ ವ್ಯಾಪಾರ ವಹಿವಾಟಿನ ಒಟ್ಟು ಮೊತ್ತ ಸುಮಾರು 28 ಶತಕೋಟಿ ಡಾಲರ್. ಚೀನಾ, ಅಮೆರಿಕ, ರಷ್ಯಗಳ ನಂತರ ಸೌದಿಯು ಭಾರತಕ್ಕೆ ನಾಲ್ಕನೇ ಬಹುದೊಡ್ಡ ವಾಣಿಜ್ಯ ಭಾಗೀದಾರನಾಗಿದೆ. ಸೌದಿಯ ಸಾರ್ವಜನಿಕ ಸ್ವಾಮ್ಯದ ತೈಲ ಕಂಪನಿ ಆರಾಮ್ಕೋ, ಭಾರತದಲ್ಲಿ ದೊಡ್ಡ ಪ್ರಮಾಣದ ಹೂಡಿಕೆ ಮಾಡುತ್ತಿದೆ. ಭಾರತದ 'ವ್ಯೂಹಾತ್ಮಕ ಪೆಟ್ರೋಲಿಯಂ ರಿಸರ್ವ್' ಸಂಗ್ರಹದಲ್ಲೂ ಅದು ಪಾಲ್ಗೊಳ್ಳುತ್ತಿದೆ. 270 ಶತಕೋಟಿ ಬ್ಯಾರಲ್ ಕಚ್ಚಾ ತೈಲ ದಾಸ್ತಾನು ಹೊಂದಿರುವ ಆರಾಮ್ಕೋ, ಜಗತ್ತಿನಲ್ಲೇ ಅತ್ಯಂತ ಹೆಚ್ಚು ತೈಲಸಂಗ್ರಹ ಹೊಂದಿರುವ ಎರಡನೇ ವ್ಯವಸ್ಥೆ. ಮೋದಿ ಎರಡನೇ ಭೇಟಿ ಇದು ಸೌದಿಗೆ ಮೋದಿ ನೀಡುತ್ತಿರುವ ಎರಡನೇ ಭೇಟಿಯಾಗಿದೆ. 2016ರಲ್ಲಿ ಮೋದಿ ಸೌದಿಗೆ ಮೊದಲ ಬಾರಿ ಭೇಟಿ ನೀಡಿದಾಗ, ಅಲ್ಲಿನ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಕಿಂಗ್ ಅಬುಲಜೀಜ್ ಶಾ ಪ್ರಶಸ್ತಿಯನ್ನು ದೊರೆ ಸಲ್ಮಾನ್ ನೀಡಿ ಗೌರವಿಸಿದ್ದರು. 2019ರ ಫೆಬ್ರವರಿಯಲ್ಲಿ ಅಲ್ಲಿನ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಭಾರತಕ್ಕೆ ಭೇಟಿ ನೀಡಿ ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚೆ ನಡೆಸಿದ್ದರು. ಇತ್ತೀಚಿನ ವರ್ಷಗಳಿಂದ ಭಾರತ ಹಾಗೂ ಸೌದಿ ಅರೇಬಿಯದ ಸ್ನೇಹ ಸಂಬಂಧಗಳು ಹೆಚ್ಚು ನಿಕಟವಾಗುತ್ತಿವೆ. ಪಾಕಿಸ್ತಾನದ ಸಾಂಪ್ರದಾಯಿಕ ಸ್ನೇಹಿತನಾಗಿದ್ದರೂ, ಕಾಶ್ಮೀರದಲ್ಲಿ ಆರ್ಟಿಕಲ್ 370ನ್ನು ರದ್ದುಪಡಿಸಿರುವ ವಿಚಾರದಲ್ಲಿ ಸೌದಿ ಅರೇಬಿಯಾ ತಟಸ್ಥ ನಿಲುವನ್ನು ತಾಳಿದೆ. ವಿಶ್ವಸಂಸ್ಥೆಯಲ್ಲಿ, ಭಯೋತ್ಪಾದನೆ ನಿಗ್ರಹ ಹಾಗೂ ಪಾಕಿಸ್ತಾನಕ್ಕೆ ಮುಜುಗರ ಉಂಟು ಮಾಡುವ ಹಲವು ಸಂಗತಿಗಳಲ್ಲಿ ಭಾರತವನ್ನು ಸೌದಿ ಬೆಂಬಲಿಸಿದೆ. ಹೊಸ ಹೂಡಿಕೆಗಳು ಸೌದಿ ಅರೇಬಿಯಾ ಭಾರತದಲ್ಲಿ 100 ಶತಕೋಟಿ ಡಾಲರ್ ಹೂಡಿಕೆ ಮಾಡುತ್ತಿರುವುದಾಗಿ ತಿಳಿಸಿತ್ತು. ವಿದ್ಯುತ್, ರಿಫೈನರಿ, ಪೆಟ್ರೋಕೆಮಿಕಲ್ಸ್, ಮೂಲಸೌಕರ್ಯ, ಕೃಷಿ, ಅದಿರು ಹಾಗೂ ಗಣಿಗಾರಿಕೆಯ ಕ್ಷೇತ್ರಗಳಲ್ಲಿ ಸೌದಿ ಹೂಡಿಕೆ ಮಾಡಲು ಮುಂದಾಗಿದೆ. ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಮೂಲಸೌಕರ್ಯಕ್ಕೆ ಆಸ್ಪದವಿದೆ. ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ್, ಸ್ಕಿಲ್ ಇಂಡಿಯಾ, ಸ್ಟಾರ್ಟಪ್ ಇಂಡಿಯಾ, ಡಿಜಿಟಲ್ ಇಂಡಿಯಾಗಳಲ್ಲಿ ಹಣ ತೊಡಗಿಸುವಂತೆ ಸೌದಿಯ ವರ್ತಕರಿಗೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಸೌದಿಯ ಹೆಗ್ಗಳಿಕೆ ಹೆಚ್ಚಿಸುವ ಯತ್ನ ಮೋದಿಯವರು ಭಾಗವಹಿಸುತ್ತಿರುವ ಕಾರ್ಯಕ್ರಮ ಸೌದಿ ಅರೇಬಿಯಾದ 'ದಾವೋಸ್ ಇನ್ ಡೆಸರ್ಟ್' ಎಂದೇ ಹೆಸರಾದ, 'ಫ್ಯೂಚರ್ ಇನ್‌ವೆಸ್ಟ್‌ಮೆಂಟ್ ಇನಿಶಿಯೇಟಿವ್' ಎಂಬ ಮೂರು ದಿನಗಳ ಬೃಹತ್ ವಾಣಿಜ್ಯ ಸಮಾವೇಶ. ಇದರಲ್ಲಿ ಭಾರತವೂ ಸೇರಿದಂತೆ ಸೌದಿಯ ಜೊತೆಗೆ ಸ್ನೇಹ ಸಂಬಂಧಗಳನ್ನು ಹೊಂದಿರುವ ಹಲವು ದೇಶಗಳ ಪ್ರಮುಖರು ಭಾಗವಹಿಸುತ್ತಿದ್ದಾರೆ. ಸೌದಿಯಲ್ಲಿ ಹೂಡಿಕೆಗೆ ಆಹ್ವಾನಿಸುವುದು ಇದರ ತಿರುಳು. ಮೋದಿ ಹಾಗೂ ಬ್ರೆಜಿಲ್‌ನ ಅಧ್ಯಕ್ಷ ಜೈರ್ ಬೊಲ್ಸೊನಾರೊ ಮುಖ್ಯ ಅತಿಥಿಗಳಾಗಿದ್ದಾರೆ. ಈ ವರ್ಷದ ಸಮಾವೇಶವನ್ನು ಅಭೂತಪೂರ್ವ ಎಂಬಂತೆ ಯಶಸ್ವಿಯಾಗಿಸುವುದು ಸೌದಿಯ ಗುರಿ. ಕಳೆದ ವರ್ಷ ಪ್ರಿನ್ಸ್ ಮೊಹಮ್ಮದ್‌ನ ಕೈಯಡಿಯಲ್ಲಿ ನಡೆದ ಪತ್ರಕರ್ತ ಜಮಾಲ್ ಖಶೋಗ್ಗಿ ಕಗ್ಗೊಲೆಯ ಕರಿನೆರಳು ಈ ಸಮಾವೇಶಕ್ಕೂ ಚಾಚಿತ್ತು; ಹಲವು ದೇಶಗಳು ಇದನ್ನು ಬಹಿಷ್ಕರಿಸಿದ್ದವು. ಈ ವರ್ಷ ವಿಶ್ವಬ್ಯಾಂಕ್‌ನ ಉದ್ಯಮಸ್ನೇಹಿ ರ್ಯಾಂಕಿಂಗ್‌ನಲ್ಲಿ 30 ಸ್ಥಾನ ಮೇಲೇರಿ 62ಕ್ಕೆ ತಲುಪಿರುವುದರಿಂದ ಸೌದಿಯ ಉತ್ಸಾಹ ಇನ್ನಷ್ಟು ಗರಿಗೆದರಿದೆ. ಹಜ್ ಕೋಟಾ ಹೆಚ್ಚಳ, ಕೈದಿಗಳ ಬಿಡುಗಡೆ ಸೌದಿಯೊಂದಿಗೆ ಭಾರತದ ಸೌಹಾರ್ದ ಸಂಬಂಧ ವಿಸ್ತರಿಸಿದ ದ್ಯೋತಕವಾಗಿ, ಹಜ್ ಯಾತ್ರಾರ್ಥಿಗಳ ಸಂಖ್ಯೆಯ ಕೋಟಾವನ್ನು ಭಾರತಕ್ಕೆ ಹೆಚ್ಚಿಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಮೂರು ಬಾರಿ ಭಾರತಕ್ಕೆ ಹಜ್ ಕೋಟಾವನ್ನು ಏರಿಸಲಾಗಿದ್ದು, ಈಗ ಭಾರತದಿಂದ 2 ಲಕ್ಷ ಯಾತ್ರಾರ್ಥಿಗಳು ಹಜ್‌ಗೆ ಭೇಟಿ ನೀಡುವ ಅವಕಾಶ ದೊರೆತಿದೆ. ಹಿಂದೆ ಮೋದಿಯವರು ಯುಎಇ ಹಾಗೂ ಸೌದಿಗಳಿಗೆ ಭೇಟಿ ನೀಡಿದ ಸಂದರ್ಭ, ಸೌಹಾರ್ದದ ನಡೆಯಾಗಿ, ಅಲ್ಲಿನ ಜೈಲುಗಳಲ್ಲಿದ್ದ ಭಾರತೀಯ ಕೈದಿಗಳನ್ನು ಬಿಡುಗಡೆಗೊಳಿಸಲಾಗಿದೆ. ಸೌದಿ 850 ಭಾರತೀಯರನ್ನೂ, ಬಹರೈನ್ 250 ಭಾರತೀಯ ಕೈದಿಗಳನ್ನೂ ಬಿಡುಗಡೆ ಮಾಡಿವೆ. ಅತಿ ಹೆಚ್ಚು ಭಾರತೀಯ ಕಾರ್ಮಿಕರು ಭಾರತವು ಶ್ರೀಮಂತ ಅರಬ್ ದೇಶಗಳಿಗೆ ಕಾರ್ಮಿಕರನ್ನು ನೀಡುವ ದೊಡ್ಡ ಪೂರೈಕೆದಾರನೂ ಆಗಿದೆ. ಮಧ್ಯಪ್ರಾಚ್ಯದಲ್ಲಿ ಸುಮಾರು 80 ಲಕ್ಷ ಭಾರತೀಯ ನೌಕರರು ಇದ್ದಾರೆಂಬ ಅಂದಾಜು. ಅದರಲ್ಲಿ27 ಲಕ್ಷ ಮಂದಿ ಸೌದಿಯಲ್ಲೇ ನೆಲೆಸಿದ್ದಾರೆ. ಕೇರಳ ಹಾಗೂ ಕರ್ನಾಟಕ ಕರಾವಳಿಯ ಅನೇಕ ಮಂದಿ ಇಲ್ಲಿನ ದುಡಿಮೆಯಿಂದ ಬದುಕು ಕಟ್ಟಿಕೊಂಡಿದ್ದಾರೆ. ಇಲ್ಲಿ ಭಾರತೀಯರ ಅಂದಾಜು ವಾರ್ಷಿಕ ದುಡಿಮೆ ಸುಮಾರು 1100 ಕೋಟಿ ಡಾಲರ್. ರಕ್ಷಣಾ ವಿಚಾರಗಳಲ್ಲಿ ಸಹಕಾರ ರಕ್ಷಣಾ ಸ್ನೇಹ ವಿಸ್ತರಿಸಿಕೊಳ್ಳುವುದು ಭೇಟಿಯ ಪ್ರಮುಖ ಉದ್ದೇಶಗಳಲ್ಲೊಂದು. ಅಕ್ಟೋಬರ್‌ನಲ್ಲಿ ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೌದಿಗೆ ಭೇಟಿ ನೀಡಿ, ಕಾಶ್ಮೀರ ವಿಚಾರದಲ್ಲಿ ಭಾರತದ ನಿಲುವನ್ನು ವಿವರಿಸಿದ್ದರು. ಎರಡೂ ದೇಶಗಳೂ ತಮ್ಮ ಅಕ್ಕಪಕ್ಕದ ದೇಶಗಳಿಂದ ಭದ್ರತೆಗೆ ಬೆದರಿಕೆ ಎದುರಿಸುತ್ತಿವೆ. ಭಾರತವು ಪಾಕಿಸ್ತಾನ ಹಾಗೂ ಚೀನಾದಿಂದ, ಸೌದಿಯು ಇರಾನ್ ಮತ್ತು ಒಮಾನ್‌ಗಳಿಂದ ಆತಂಕ ಎದುರಿ ಸುತ್ತಿದೆ. ಹೌತಿ ಗೆರಿಲ್ಲಾಗಳಿಂದ ಗೆರಿಲ್ಲಾ ಯುದ್ಧವನ್ನು ಎದುರಿಸುತ್ತಿರುವ ಸೌದಿ, ಆ ವಿಷಯದಲ್ಲಿ ಪರಿಣತಿ ಹೊಂದಿಲ್ಲ. ಆದರೆ ನಕ್ಸಲರು, ಉಗ್ರರನ್ನು ಎದುರಿಸಿ ಅನುಭವ ಹೊಂದಿರುವ ಭಾರತ, ಈ ವಿಚಾರದಲ್ಲಿ ತರಬೇತಿಯನ್ನು ಸೌದಿಗೆ ನೀಡಲು ಮುಂದಾಗಿದೆ. ಅರಬ್ ಸಮುದ್ರ ಪ್ರದೇಶದಲ್ಲಿಸೌದಿಯ ಪ್ರಾಬಲ್ಯವು ಭಾರತಕ್ಕೆ ನೆರವಾಗುತ್ತಿದೆ. ಈ ಕುರಿತು ಭದ್ರತಾ ಸಲಹೆಗಾರರ ಮಟ್ಟದಲ್ಲಿ ಉಭಯ ದೇಶಗಳ ಸಭೆಗಳು ನಿರಂತರವಾಗಿ ನಡೆಯುತ್ತಿವೆ.
from India & World News in Kannada | VK Polls https://ift.tt/338ImzH