ಬೆಂಗಳೂರು: ಕೋವಿಡ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಮೀಸಲಿಟ್ಟ ಸರಕಾರಿ ಕೋಟಾದ ಬೆಡ್‌ಗಳನ್ನು ಅಕ್ರಮವಾಗಿ ಬುಕ್ಕಿಂಗ್ ಮಾಡಿ ವಂಚಿಸಿದ ಆರೋಪದ ಮೇಲೆ ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಬೆಂಬಲಿಗ ಎಂದು ಹೇಳಲಾಗಿರುವ ಬಾಬು (34) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರೂಪೇನ ಅಗ್ರಹಾರ ನಿವಾಸಿಯಾಗಿರುವ ಬಾಬು, ಬಿಬಿಎಂಪಿ ವತಿಯಿಂದ ರೋಗಿಗಳಿಗೆ ಮೀಸಲಾಗಿದ್ದ ಹಾಸಿಗೆಗಳನ್ನು ಅರ್ಹ ಫಲಾನುಭವಿಗಳಿಗೆ ಸಿಗದಂತೆ ಬ್ಲಾಕ್ ಮಾಡಿಕೊಂಡು ಅಕ್ರಮ ನಡೆಸಿರುವುದು ತನಿಖೆಯಲ್ಲಿ ಕಂಡು ಬಂದಿದೆ. ಅಕ್ರಮ ಬೆಳಕಿಗೆ ಬಂದ ಆರಂಭದಲ್ಲಿ ಬಂಧಿತರಾಗಿದ್ದ ಆರೋಪಿಗಳಾದ ನೇತ್ರಾವತಿ ಮತ್ತು ರೋಹಿತ್ ಕುಮಾರ್ ಎಂಬುವರ ಜೊತೆ ಸೇರಿ ಬಾಬು ಅಕ್ರಮವಾಗಿ ಬೆಡ್ ಬ್ಲಾಕಿಂಗ್ ಮಾಡಿ ಮಾರಾಟ ಮಾಡುತ್ತಿದ್ದ. ಈವರೆಗೆ ಒಟ್ಟು 3 ಬೆಡ್‌ಗಳನ್ನು ಅಕ್ರಮವಾಗಿ ಬ್ಲಾಕ್ ಮಾಡಿ ಅವುಗಳನ್ನು ಹಣಕ್ಕೆ ಮಾರಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಮೇ 31ರವರೆಗೆ ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಆರೋಪಿಗೆ ಕೋವಿಡ್ ಸೋಂಕು ತಗುಲಿತ್ತು. ಗುಣಮುಖನಾದ ಬಳಿಕ ಬಂಧಿಸಲಾಗಿದೆ. ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಸತೀಶ್ ರೆಡ್ಡಿ ಆಪ್ತ ಭಾಗಿಯಾಗಿರುವುದು ಮತ್ತು ಬೊಮ್ಮನಹಳ್ಳಿ ವಾರ್‌ರೂಮಿಗೆ ನುಗ್ಗಿ ಕರ್ತವ್ಯದಲ್ಲಿದ್ದ ಅಧಿಕಾರಿ ಯಶವಂತ್ ಅವರನ್ನು ತಳ್ಳಾಡಿ ಹಲ್ಲೆಗೆ ಯತ್ನಿಸಿದನ್ನು 'ವಿಕ' ವಿಶೇಷ ವರದಿಗಳನ್ನು ಮುಖಪುಟದಲ್ಲಿ ಪ್ರಕಟಿಸಿತ್ತು. ಸೋಂಕಿತ ಅರ್ಹರಿಗೆ ಸಿಗಬೇಕಾದ ಸರಕಾರಿ ಕೋಟಾದ ಸೀಟುಗಳನ್ನು ಬುಕ್ ಮಾಡಿಕೊಂಡು ನಂತರ ಪ್ರಭಾವಿಗಳಿಗೆ, ಹಣಕ್ಕೆ ಮಾರಿಕೊಳ್ಳುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣದಲ್ಲಿ ವಾರ್‌ರೂಮ್ ಮೇಲ್ವಿಚಾರಣೆ ನಡೆಸುತ್ತಿದ್ದ ಇಬ್ಬರು ವೈದ್ಯರು ಸೇರಿದಂತೆ ಈವರೆಗೆ ಹತ್ತು ಆರೋಪಿಗಳನ್ನು ಬಂಧಿಸಲಾಗಿದೆ. ಇದಲ್ಲದೆ ಐಎಎಸ್ ಅಧಿಕಾರಿ ಯಶವಂತ್ ತಮ್ಮ ಮೇಲೆ ಹಲ್ಲೆ ಯತ್ನ ನಡೆದಿದೆ ಎಂದು ನೀಡಿರುವ ದೂರಿನ ಕುರಿತು ಪ್ರತ್ಯೇಕ ವಿಚಾರಣೆ ನಡೆಯುತ್ತಿದೆ.
from India & World News in Kannada | VK Polls https://ift.tt/34hPZWz