ಬ್ರೆಟ್‌ ಲೀ ಅಲ್ಲ, ಟೈಟ್‌ ಅಲ್ಲವೇ ಅಲ್ಲ! ತಾವು ಎದುರಿಸಿದ ಅತ್ಯಂತ ವೇಗದ ಬೌಲರ್‌ ಹೆಸರಿಸಿದ ಕ್ಲಾರ್ಕ್‌!

ಹೊಸದಿಲ್ಲಿ: ಭಾರತದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಆಸ್ಟ್ರೇಲಿಯಾ ಮಾಜಿ ನಾಯಕ ಮೈಕಲ್‌ ಕ್ಲಾರ್ಕ್‌, ಅದೇ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿದ್ದರು. 2000 ದಶಕದ ಕೊನೆಯಲ್ಲಿ ಆಸೀಸ್‌ ತಂಡದ ನಾಯಕತ್ವ ಸ್ವೀಕರಿಸಿದ್ದ ಕ್ಲಾರ್ಕ್‌, 2015ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ತಂಡಕ್ಕೆ ಪ್ರಶಸ್ತಿ ತಂದುಕೊಟ್ಟಿದ್ದರು. ತಮ್ಮ ಕ್ರಿಕೆಟ್‌ ದಿನಗಳಲ್ಲಿ ತಾವು ಎದುರಿಸಿದ ವೇಗದ ಬೌಲರ್‌ಗಳ ಬಗ್ಗೆ ಇತ್ತೀಚೆಗೆ ಚರ್ಚೆ ನಡೆದಿತ್ತು. ಬ್ರೆಟ್‌ ಲೀ, ಶಾನ್‌ ಟೈಟ್‌ ಹಾಗೂ ಶೊಯೇಬ್‌ ಅಖ್ತರ್‌ ಅವರು 150ಕ್ಕೂ ಹೆಚ್ಚಿನ ವೇಗದಲ್ಲಿ ಬೌಲಿಂಗ್‌ ಮಾಡುತ್ತಿದ್ದರು. ಈ ಮೂವರಲ್ಲಿ ಯಾರು ಅತಿ ವೇಗವಾಗಿ ಬೌಲಿಂಗ್‌ ಮಾಡುತ್ತಾರೆಂಬ ಪ್ರಶ್ನೆಯನ್ನು ಇತ್ತೀಚೆಗೆ ಪಾಡ್‌ಕಾಸ್ಟ್‌ವೊಂದರಲ್ಲಿ ಕ್ಲಾರ್ಕ್‌ಗೆ ಕೇಳಲಾಯಿತು. ತಮ್ಮ ವೃತ್ತಿ ಜೀವನದಲ್ಲಿ ಎದುರಿಸಿದ ಅತ್ಯಂತ ವೇಗದ ಬೌಲರ್‌ ಶೊಯೇಬ್‌ ಅಖ್ತರ್ ಎಂದು ಹೇಳಿದರು. ಆಸ್ಟ್ರೇಲಿಯಾದ ಹಲವು ವೇಗಿಗಳು ಕೂಡ ವೇಗವಾಗಿ ಬೌಲಿಂಗ್‌ ಮಾಡುತ್ತಿದ್ದರು. ಆದರೆ, ಶೊಯೇಬ್‌ ಅಖ್ತರ್‌ ಅವರು ಇವರೆಲ್ಲರಿಗಿಂತಲೂ ವೇಗವಾಗಿ ಬೌಲಿಂಗ್‌ ಮಾಡುತ್ತಿದ್ದರು ಎಂದು ತಿಳಿಸಿದರು. "ಕ್ರಿಕೆಟ್‌ ದಿನಗಳಲ್ಲಿ ನಾನು ಎದುರಿಸಿದ ಅತ್ಯಂತ ವೇಗದ ಬೌಲರ್‌ ಶೊಯೇಬ್‌ ಅಖ್ತರ್‌. ಅವರು ಗಂಟೆಗೆ 160 ಕಿಮೀ ವೇಗದಲ್ಲಿ ಬೌಲ್‌ ಮಾಡುತ್ತಿದ್ದರು. ಇಂಗ್ಲೆಂಡ್‌ ಮಾಜಿ ಆಲ್‌ರೌಂಡರ್‌ ಫ್ಲಿಂಟಾಫ್ ವೇಗವಾಗಿ 12 ಓವರ್‌ಗಳನ್ನು ಬೌಲ್‌ ಮಾಡುತ್ತಿದ್ದರು, ಬ್ರೆಟ್‌ ಲೀ, ಶೊಯೇಬ್‌ ಅಖ್ತರ್‌, ಶಾನ್‌ ಟೈಟ್‌, ಮಿಚೆಲ್‌ ಜಾನ್ಸನ್‌, ಜೇಸನ್‌ ಗಿಲೆಸ್ಪಿ ಕೂಡ ವೇಗವಾಗಿ ಬೌಲ್‌ ಮಾಡುತ್ತಿದ್ದರು. ಆದರೆ, ಇವರೆಲ್ಲರಿಗಿಂತಲೂ ಅತೀ ವೇಗವಾಗಿ ಅಖ್ತರ್ ಬೌಲ್‌ ಮಾಡುತ್ತಿದ್ದರು," ಎಂದರು. ಸ್ಪಿನ್‌ ದಂತಕತೆ ಶೇನ್‌ ವಾರ್ನ್‌ ಮೈದಾನದ ಹೊರಗಿನ ಎಲ್ಲಾ ಒತ್ತಡಗಳನ್ನು ಹೇಗೆ ನಿಭಾಯಿಸುತ್ತಿದ್ದರೆಂದು ಕ್ಲಾರ್ಕ್ ನೆನಪಿಸಿಕೊಂಡರು. ವಾರ್ನ್ ಅವರ ಮಾನಸಿಕ ಧೈರ್ಯವನ್ನು ಆಸ್ಟ್ರೇಲಿಯಾ ಮಾಜಿ ನಾಯಕ ಶ್ಲಾಘಿಸಿದರು. "ಮೈದಾನದಿಂದ ಹೊರಗಡೆ ನಡೆಯುವ ಸಂಗತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಮೈದಾನಕ್ಕೆ ತೆರಳುವ ಮುನ್ನ ವಾರ್ನ್‌ ಸಾಮಾನ್ಯವಾಗಿ ಸಿಗರೇಟು ಸೇದುತ್ತಿದ್ದರು. ಇದನ್ನು ಯಾರಿಗೂ ಗೊತ್ತಿಲ್ಲದ ಜಾಗದಲ್ಲಿ ಇಡುತ್ತಿದ್ದರು. ಒಮ್ಮೆ ಅವರು ಅಂಗಣಕ್ಕೆ ಪ್ರವೇಶಿಸಿದ ಬಳಿಕ, ಮೈದಾನದ ಹೊರಗೆ ನಡೆಯುತ್ತಿದ್ದ ಎಲ್ಲಾ ಅಂಶಗಳನ್ನು ಮರೆಯುತ್ತಿದ್ದರು. ಪಂದ್ಯದಲ್ಲಿ ತಾವು ಏನು ಮಾಡಬೇಕು ಎಂಬ ಅಂಶದ ಕಡೆ ಮಾತ್ರ ಅವರು ಗಮನ ಹರಿಸುತ್ತಿದ್ದರು," ಎಂದು ಹೇಳಿದರು. "ಇದು ಅವರ ಅದ್ಭುತ ಸಾಮರ್ಥ್ಯವಾಗಿತ್ತು. ತಮ್ಮ ವೈಯಕ್ತಿಕ ಜೀವನದ ಮೇಲೆ ಮಾಧ್ಯಮಗಳ ಒತ್ತಡದ ಹೊರತಾಗಿಯೂ ಅವರು ಮೈದಾನದಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದರು. ತಮ್ಮ ವೃತ್ತಿ ಜೀವನದುದ್ದಕ್ಕೂ ಅವರು ಇದೇ ರೀತಿ ಇದ್ದರು," ಎಂದು ಕ್ಲಾರ್ಕ್‌ ಮಾಜಿ ಸಹ ಆಟಗಾರನನ್ನು ಶ್ಲಾಘಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3fjIQv8

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...