ಪೊಲೀಸರನ್ನೇ ಒತ್ತೆಯಾಳಾಗಿ ಇರಿಸಿಕೊಂಡ ಪಾಕ್‌ನ ಇಸ್ಲಾಂ ಮೂಲಭೂತವಾದಿಗಳು: ಸಂಘರ್ಷ!

ಲಾಹೋರ್‌: ಇಸ್ಲಾಂ ಮೂಲಭೂತವಾದಿಗಳ ಪಕ್ಷ 'ತೆಹ್ರೀಕ್‌-ಇ-ಲಬಾಯಿಕ್‌' (ಟಿಎಲ್‌ಪಿ) ಕಾರ್ಯಕರ್ತರು ಮತ್ತು ಬೆಂಬಲಿಗರು ಕಳೆದೊಂದು ವಾರದಿಂದ ತೀವ್ರ ಹಿಂಸಾಚಾರ ನಡೆಸುತ್ತಿದ್ದು, ಭಾನುವಾರ ಪಾಕಿಸ್ತಾನದ ಆರು ಪೊಲೀಸ್‌ ಸಿಬ್ಬಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಪೊಲೀಸರನ್ನು ಬಿಡುಗಡೆ ಮಾಡಲ್ಲ ಎಂದು ಉಗ್ರರರಂತೆ ಸರಕಾರಕ್ಕೆ ಧಮ್ಕಿ ಹಾಕಿದ್ದಾರೆ. ಟಿಎಲ್‌ಪಿ ಮುಖ್ಯಸ್ಥ ಸಾದ್‌ ರಿಜ್ವಿಯ ಬಂಧನದ ಹಿನ್ನೆಲೆಯಲ್ಲಿ ಸ್ಫೋಟಗೊಂಡಿರುವ ಈ ಹಿಂಸಾಚಾರ ಹತ್ತಿಕ್ಕಲು ಅರೆಸೈನಿಕ ಪಡೆಯನ್ನು ಪೊಲೀಸರೊಂದಿಗೆ ನಿಯೋಜಿಸಲಾಗಿತ್ತು. ಎರಡು ಇಂಧನ ಟ್ಯಾಂಕರ್‌ಗಳನ್ನು ಕೂಡ ವಶಕ್ಕೆ ಪಡೆದಿರುವ ಟಿಎಲ್‌ಪಿ ಸದಸ್ಯರು ಕಂಡಕಂಡಲ್ಲಿ ಪೆಟ್ರೋಲ್‌ ಬಾಂಬ್‌ಗಳನ್ನು ಎಸೆಯುತ್ತಿದ್ದಾರೆ. ಪೊಲೀಸರ ಮೇಲೆ ತೀವ್ರ ಕಲ್ಲುತೂರಾಟ ನಡೆಸಿ, ಗುಂಡುಗಳನ್ನು ಹಾರಿಸಿದ್ದಾರೆ. ನಾಲ್ವರು ಸ್ಥಳೀಯರು ಹಿಂಸಾಚಾರದಲ್ಲಿ ಮೃತಪಟ್ಟಿದ್ದು 15ಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಲಾಹೋರ್‌ ಪೊಲೀಸ್‌ ವಕ್ತಾರ ಆರಿಫ್‌ ರಾಣಾ ತಿಳಿಸಿದ್ದಾರೆ. ಕಳೆದ ವಾರವೇ ಪಾಕ್‌ ಸರಕಾರ ಟಿಎಲ್‌ಪಿ ಮೇಲೆ ನಿರ್ಬಂಧ ವಿಧಿಸಿದೆ. ಅದರ ಸದಸ್ಯರ ಯಾವುದೇ ಕೃತ್ಯಗಳನ್ನು ಪ್ರಸಾರ ಮಾಡದಂತೆ ಕೂಡ ಸ್ಥಳೀಯ ಮಾಧ್ಯಮಗಳಿಗೆ ಸೂಚಿಸಲಾಗಿದೆ. ಹಿಂಸಾಚಾರ ಹತ್ತಿಕ್ಕಲು ಮತ್ತು ವಶದಲ್ಲಿರುವ ಪೊಲೀಸ್‌ ಸಿಬ್ಬಂದಿಯನ್ನು ಬಿಡುಗಡೆಗೊಳಿಸಲು ಯತ್ನಿಸುತ್ತಿರುವ ಲಾಹೋರ್‌ ಪೊಲೀಸ್‌ ಇಲಾಖೆ ಟಿಎಲ್‌ಪಿಯ ಕೇಂದ್ರ ಕಚೇರಿ ಇರುವ ಲಾಹೋರ್‌ ಚೌಕ್‌ ಯಾತೀಮ್‌ಕಹಾನ್‌ ಪ್ರದೇಶದಲ್ಲಿಮೊಬೈಲ್‌, ಇಂಟರ್‌ನೆಟ್‌ ಸೇವೆ ಸ್ಥಗಿತಗೊಳಿಸಿದೆ. ಜತೆಗೆ ನಿಷೇಧಾಜ್ಞೆ ಕೂಡ ಹೇರಿದೆ. ಹಾಗಿದ್ದು ಟಿಎಲ್‌ಪಿ ಬೆಂಬಲಿಗರು ತಮ್ಮ ಹೋರಾಟದ ವಿಡಿಂಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು , ಹೆಚ್ಚೆಚ್ಚು ಜನರನ್ನು ಜತೆ ಸೇರುವಂತೆ ಕರೆ ನೀಡುತ್ತಲೇ ಇದ್ದಾರೆ. ಫ್ರಾನ್ಸ್‌ ವಿರುದ್ಧ ಆಕ್ರೋಶ!ಪ್ರವಾದಿಯ ವ್ಯಂಗ್ಯಚಿತ್ರವನ್ನು ಫ್ರಾನ್ಸ್‌ನಲ್ಲಿ ಪ್ರಕಟಿಸಲಾಗಿದ್ದಕ್ಕೆ ಟಿಎಲ್‌ಪಿ ನಾಯಕ ರಿಜ್ವಿ ಭಾರಿ ಆಕ್ರೋಶ ಹೊರಹಾಕಿ , ಹಿಂಸಾಚಾರಕ್ಕೆ ಕರೆ ನೀಡಿದ್ದ. ಸದ್ಯ ಫ್ರಾನ್ಸ್‌ ರಾಯಭಾರಿಯನ್ನು ಕೂಡ ಹಿಂದಕ್ಕೆ ಕರೆಸಿಕೊಳ್ಳುವಂತೆ ಟಿಎಲ್‌ಪಿಯ ಸದಸ್ಯರು ಆಗ್ರಹಿಸುತ್ತಿದ್ದಾರೆ. ಹಿಂಸಾಚಾರ ನಿಯಂತ್ರಣಕ್ಕಾಗಿ ಖಡಕ್‌ ಕಾನೂನು ಕ್ರಮ ಜರುಗಿಸುವಂತೆ ಈಗಾಗಲೇ ಪ್ರಧಾನಿ ಇಮ್ರಾನ್‌ ಖಾನ್‌ ಆದೇಶಿಸಿದ್ದಾರೆ. ಫ್ರಾನ್ಸ್‌ ಸರಕಾರ ತನ್ನ ಪ್ರಜೆಗಳಿಗೆ ತೊರೆಯುವಂತೆ ಎಚ್ಚರಿಕೆಯನ್ನೂ ನೀಡಿದೆ.


from India & World News in Kannada | VK Polls https://ift.tt/3amdpNW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...